ಲಕ್ಷ್ಮೇಶ್ವರ: ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಆಚರಣೆ ಹಿನ್ನೆಲೆಯಲ್ಲಿ ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ವಾಸುದೇವಸ್ವಾಮಿ ಅಧ್ಯಕ್ಷತೆಯಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಎಲ್ಲ ಇಲಾಖೆ ಅಧಿಕಾರಿಗಳ ಪೂರ್ವಭಾವಿ ಸಭೆ ಶುಕ್ರವಾರ ಜರುಗಿತು.
ತಹಶೀಲ್ದಾರ್ ವಾಸುದೇವಸ್ವಾಮಿ ಮಾತನಾಡಿ, ‘ಹಬ್ಬದ ಆಚರಣೆ ವೇಳೆ ಈ ಬಾರಿ ಡಿಜೆ ಬಳಸುವಂತಿಲ್ಲ. ಗಣೇಶ ವಿಸರ್ಜನೆ ವೇಳೆ ಟ್ರ್ಯಾಕ್ಟರ್‌ಗಳಲ್ಲಿ ವಿದ್ಯುತ್ ತಂತಿಗಳಿಗೆ ತಾಗದಂತೆ ಮಂಟಪಗಳನ್ನು ನಿರ್ಮಿಸಬೇಕು. ಮೂರ್ತಿ ವಿಸರ್ಜನೆಗೆ ಉಪಯೋಗಿಸುವ ಟ್ಯಾಕ್ಟರ್ ಅಥವಾ ವಾಹನಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.
‘ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಪ್ರಚೋದನಕಾರಿ ಸಂದೇಶ ಹಾಗೂ ಚಿತ್ರ ಹಂಚಿಕೊಳ್ಳಬಾರದು. ಈ ಬಗ್ಗೆ ನಿಗಾವಹಿಸಲು ಪೊಲೀಸ್ ಇಲಾಖೆಯಿಂದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.
‘ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ನಂತರ ಅನ್ನ ಸಂತರ್ಪಣೆ ಮಾಡುವ ಕಾಲಕ್ಕೆ ಆಹಾರ ಇಲಾಖೆಯಿಂದ ಕಡ್ಡಾಯ ಪರವಾನಗಿ ಪಡೆದುಕೊಳ್ಳಬೇಕು. ಬಂಟಿಂಗ್ಸ್ ಹಾಗೂ ಬ್ಯಾನರ್‌ಗಳನ್ನು ಅಳವಡಿಸಲು ಅನುಮತಿ ಪಡೆಯಬೇಕು. ವಿವಾದಿತ ಸ್ಥಳದಲ್ಲಿ ಬ್ಯಾನರ್ ಅಳವಡಿಸಬಾರದು’ ಎಂದು ತಿಳಿಸಿದರು.
‘ಈಗಾಗಲೇ ಪೊಲೀಸ್ ಇಲಾಖೆ ಹಾಗೂ ಪುರಸಭೆಯಿಂದ ಪ್ರಮುಖ ಸ್ಥಳಗಳಲ್ಲಿ 40 ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಗಣೇಶ ಮೂರ್ತಿಗಳ ವಿಸರ್ಜನೆಗೆ ಸೂಕ್ತ ಬಂದೋಬಸ್ತ್‌ಗಾಗಿ ಜಿಲ್ಲೆಯ ಬೇರೆ ಠಾಣೆಗಳಿಂದ ಹೆಚ್ಚಿನ ಅಧಿಕಾರಿ, ಸಿಬ್ಬಂದಿ ಹಾಗೂ ಎರಡು ಕೆಎಸ್‍ಆರ್‌ಪಿ, ನಾಲ್ಕು ಡಿಆರ್ ತುಕುಡಿ, 60 ಹೋಂ ಗಾರ್ಡ್ಸ್ ನಿಯೋಜಿಸಲಾಗಿದೆ. ಮೆರವಣಿಗೆ ನಡೆಯುವ ಮಾರ್ಗಗಳಲ್ಲಿ ಬರುವ ಅಡೆತಡೆಗಳನ್ನು ಸರಿಪಡಿಸುವಂತೆ ಮತ್ತು ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವಂತೆ ಪುರಸಭೆಗೆ ತಿಳಿಸಲಾಗಿದೆ’ ಎಂದರು.
ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್‍ಐ ಈರಪ್ಪ ರಿತ್ತಿ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ, ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.