ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಕು ಪಡೆದ ಮಣ್ಣಿನ ಗಣೇಶ ತಯಾರಿಕೆ

Last Updated 15 ಜುಲೈ 2019, 20:00 IST
ಅಕ್ಷರ ಗಾತ್ರ

ಹಾನಗಲ್: ಪಿಒಪಿ(ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌) ಗಣೇಶ ವಿಗ್ರಹ ನಿಷೇಧ ಹಿನ್ನೆಲೆಯಲ್ಲಿ ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದೆ. ಗಣೇಶ ಹಬ್ಬಕ್ಕೆ ಇನ್ನೂ 2 ತಿಂಗಳು ಇರುವಾಗಲೇ ಕುಂಬಾರರ ಮನೆಗಳಲ್ಲಿ ವಿವಿಧ ಶೈಲಿಯ ಮೂರ್ತಿಗಳ ತಯಾರಿಕೆ ಭರದಿಂದ ಸಾಗಿದೆ. ಹಾನಗಲ್‌ನ ಮೂರು ಕಡೆಗಳಲ್ಲಿ ಜಿಗಟು ಮಣ್ಣು ಹರಡಿಕೊಂಡು ವಿಗ್ರಹ ತಯಾರಿಕೆಯ ಕಾಯಕ ಆರಂಭವಾಗಿದೆ.

ಮನೆಗಳಲ್ಲಿ ಪ್ರತಿಷ್ಠಾಪಿಸುವ 3 ಅಡಿ ಎತ್ತರದ ಮಣ್ಣಿನ ಮೂರ್ತಿಗಳನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗುತ್ತಿದೆ. ಸಾರ್ವಜನಿಕ ಸಮಿತಿಯವರು ಪ್ರತಿಷ್ಠಾಪಿಸುವ 10 ಅಡಿ ಎತ್ತರದ ಗಣಪನ ಮೂರ್ತಿಗಳೂ ಕೂಡ ಮೂರ್ತರೂಪ ತಳೆಯುತ್ತಿವೆ.

ಎರಡು ವರ್ಷದ ಹಿಂದೆ ಪಿಒಪಿ ಗಣೇಶ ವಿಗ್ರಹ ತಯಾರಿಕೆ ನಿಷೇಧಿಸಿದಾಗಿನಿಂದ ಮೂರ್ತಿ ತಯಾರಕರು ಪರಿಸರ ಸ್ನೇಹಿ ಮೂರ್ತಿ ತಯಾರಿಕೆಯತ್ತ ಹೆಚ್ಚಿನ ಒಲವು ತೋರಿದ್ದಾರೆ. ಎಲ್ಲಿಯೂ ವಿಗ್ರಹಗಳಿಗೆ ಆಯಿಲ್‌ ಪೇಂಟ್‌ ಬಳಸುತ್ತಿಲ್ಲ. ನೈಸರ್ಗಿಕ ಬಣ್ಣ ಲೇಪನ ಮಾಡಲಾಗುತ್ತಿದೆ. ಗಣೇಶ ವಿಸರ್ಜನೆ ಬಳಿಕ ವಿಗ್ರಹವು ನೀರಿನಲ್ಲಿ ಸುಲಭವಾಗಿ ಕರಗಲಿದೆ.

ಮಣ್ಣು ಕೊರತೆ: ವಿಗ್ರಹ ತಯಾರಿಕೆಗಾಗಿ ಜೇಡಿ ಮಣ್ಣಿನ ಕೊರತೆ ಕಾಡುತ್ತಿದೆ. ಕುಂಬಾರ ಸಮುದಾಯದ ಕುಟುಂಬಗಳು 30 ಕಿ.ಮೀ ದೂರದ ಚಿಕ್ಕಬಾಸೂರ ಗ್ರಾಮದಿಂದ ಮಣ್ಣು ತರಿಸಿಕೊಂಡು ವಿಗ್ರಹ ತಯಾರಿಕೆಯಲ್ಲಿ ತೊಡಗಿವೆ. ವಿಗ್ರಹ ತಯಾರಿಕೆ ಕಾರ್ಯವನ್ನು ಪ್ರತಿವರ್ಷ ಶ್ರದ್ಧಾ ಭಕ್ತಿಯಿಂದ ಮಾಡುವ ಸಂಪ್ರದಾಯ ಈ ಕುಟುಂಬಗಳಲ್ಲಿದೆ. ಈ ಬಾರಿಯೂ ವಿಗ್ರಹ ತಯಾರಿಕೆ ಕುಂಬಾರ ಕುಟುಂಬಗಳನ್ನು ನಷ್ಟಕ್ಕೆ ದೂಡಲಿದೆ ಎಂಬ ಆತಂಕ ವಿಗ್ರಹ ತಯಾರಕರಲ್ಲಿದೆ.

ಇಲ್ಲಿನ ಕುಂಬಾರ ಓಣಿಯ ಯುವಕ ರಾಘವೇಂದ್ರ ಚಕ್ರಸಾಲಿ ಒಂದು ತಿಂಗಳಿನಿಂದ ಮಣ್ಣಿನ ಗಣೇಶ ವಿಗ್ರಹ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮನೆಯಲ್ಲಿ ಪ್ರತಿಷ್ಠಾಪಿಸುವ 500 ಗಣಪ ಮತ್ತು ಸಾರ್ವಜನಿಕ ಪ್ರತಿಷ್ಠಾಪನೆಗಾಗಿ 50 ಗಣೇಶ ವಿಗ್ರಹಗಳ ತಯಾರಿಕೆಯಲ್ಲಿ ಮಗ್ನರಾಗಿದ್ದಾರೆ.

‘ಗಣೇಶ ಮೂರ್ತಿ ತಯಾರಿಕೆಗೆ ಇಲ್ಲಿನ ಕುಮಾರೇಶ್ವರ ನಗರ ಸಮೀಪದ ದ್ಯಾಮನಕಟ್ಟಿ ಕೆರೆಯಲ್ಲಿ ಸಿಗುತ್ತಿದ್ದ ಶುದ್ಧ ಜೇಡಿ ಮಣ್ಣು ಈ ಬಾರಿ ಲಭ್ಯವಿಲ್ಲ. ಕೆರೆ ಅರ್ಧ ಪ್ರಮಾಣದಲ್ಲಿ ಅತಿಕ್ರಮಣ ಆಗಿದೆ. ಬೇರೆಡೆ ಮಣ್ಣು ತರಿಸಿಕೊಳ್ಳುವುದುಖರ್ಚಿನ ಕೆಲಸ, ಹಾಗಾಗಿ ಕುಂಬಾರರು ಹೆಚ್ಚೆಚ್ಚು ಮೂರ್ತಿ ತಯಾರಿಕೆಗೆ ಮುಂದಾಗುತ್ತಿಲ್ಲ’ ಎಂದು ರಾಘವೇಂದ್ರ ಹೇಳಿದರು.

*
ಪರಿಸರ ಪೂರಕ ಗಣೇಶ ವಿಗ್ರಹ ಪ್ರತಿಷ್ಠಾಪನೆ ಜಾಗೃತಿ ಹೆಚ್ಚುತ್ತಿದೆ. ಜೇಡಿ ಮಣ್ಣಿನಿಂದ ಮಾಡಿದ ಗಣೇಶನನ್ನು ಮನೆಯಲ್ಲಿ ಪ್ರತಿಷ್ಠಾಪಿಸುವ ಭಕ್ತರ ಸಂಖ್ಯೆ ಏರುತ್ತಿದೆ. ನಮ್ಮಲ್ಲಿನ ಗಣಪ ವಿಗ್ರಹಗಳು ಬಣ್ಣ ಲೇಪನವಿಲ್ಲದೇ ಮಾರಾಟವಾಗುತ್ತವೆ
-ರಾಘವೇಂದ್ರ ಚಕ್ರಸಾಲಿ, ಗಣೇಶ ವಿಗ್ರಹ ತಯಾರಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT