ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿ ಜಾಗದಲ್ಲಿ ಕಸದ ದರ್ಬಾರು

ಕಸ ಸಂಗ್ರಹಣೆ, ವಿಲೇವಾರಿಯಲ್ಲಿ ಮುಂದೆ; ಚರಂಡಿಗಳ ನಿರ್ವಹಣೆಯಲ್ಲಿ ಹಿಂದೆ
Last Updated 12 ಅಕ್ಟೋಬರ್ 2020, 8:28 IST
ಅಕ್ಷರ ಗಾತ್ರ

ಗದಗ: ‘ಸ್ವಚ್ಛ ನಗರಿ’ ಎಂಬ ಗರಿಮೆಯ ಪಟ್ಟಿಯಲ್ಲಿ ಮುಂದಿನ ವರ್ಷ ಗದಗ ನಗರದ ಹೆಸರು ‘ಟಾಪ್‌ ಟೆನ್‌’ ಒಳಗೆ ಇರಬೇಕು ಎಂಬ ಆಶಯದೊಂದಿಗೆ ಮುನ್ನಡೆಯುತ್ತಿರುವ ನಗರಸಭೆಗೆ ಅದನ್ನು ಸಾಕಾರಗೊಳಿಸಲು ಸವಾಲುಗಳು ಕೂಡ ಸಾಕಷ್ಟಿವೆ. ಕಸ ಸಂಗ್ರಹಣೆ ವಿಷಯದಲ್ಲಿ ಗರಿಷ್ಠ ಮುನ್ನಡೆ ಸಾಧಿಸಿರುವ ನಗರಸಭೆ, ನಗರದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವ ವಿಚಾರದಲ್ಲಿ ಇನ್ನಷ್ಟು ಚುರುಕುತನ ಅಳವಡಿಸಿಕೊಳ್ಳಬೇಕಿದೆ.

ನಗರದಲ್ಲಿನ ಮನೆಗಳಿಂದ ಹಸಿಕಸ ಮತ್ತು ಒಣಕಸ ಸಂಗ್ರಹಿಸಲು ಟಾಟಾ ಏಸ್‌, ಟ್ರ್ಯಾಕ್ಟರ್‌ಗಳು ಸೇರಿದಂತೆ ಒಟ್ಟು 57 ವಾಹನಗಳು ಬಳಕೆಯಾಗುತ್ತಿವೆ. ಪೌರಕಾರ್ಮಿಕರು ಪ್ರತಿದಿನ ರಸ್ತೆಬದಿ ಬಿದ್ದಿರುವ ಕಸ ಗುಡಿಸಿ, ನಗರದ ಸ್ವಚ್ಛತೆಗೆ ಶ್ರಮಿಸುತ್ತಿದ್ದಾರೆ. ಆದರೆ, ಪ್ಲಾಸ್ಟಿಕ್‌ ಹಾಗೂ ವಿವಿಧ ಬಗೆಯ ತ್ಯಾಜ್ಯಗಳಿಂದ ತುಂಬಿರುವ ಚರಂಡಿಗಳು ನಗರದ ಅಂದಗೆಡಿಸಿವೆ. ನಗರದ ವಿವಿಧೆಡೆ ನಡೆಯುತ್ತಿರುವ ಚರಂಡಿ ಕಾಮಗಾರಿಗಳು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿವೆ. ಕೆಲವರು ಮನೆಯ ತ್ಯಾಜ್ಯವನ್ನೆಲ್ಲಾ ಚರಂಡಿಗೆ ತಂದು ಎಸೆಯುತ್ತಿರುವುದರಿಂದ ಚರಂಡಿಗಳು ಕಟ್ಟಿಕೊಳ್ಳುತ್ತಿವೆ. ಹಾಗಾಗಿ, ನಗರಸಭೆಯವರು ಚರಂಡಿಗಳ ನಿರ್ವಹಣೆಗೆ ಹೆಚ್ಚು ಗಮನ ಹರಿಸಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.

ಗದಗ ನಗರದಲ್ಲಿ ಪ್ರತಿದಿನ 74 ಮೆ.ಟನ್‌ ಕಸ ಸಂಗ್ರಹವಾಗುತ್ತದೆ. ಅದನ್ನು ಪ್ರಾಥಮಿಕವಾಗಿ ನಗರದ ಒಳಭಾಗದಲ್ಲಿರುವ ನಗರಸಭೆ ಜಾಗದಲ್ಲಿ ಬೇರ್ಪಡಿಸಿ, ನಂತರ ಅದನ್ನು ಹೊರವಲಯದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಲಾಗುತ್ತದೆ. ಅಲ್ಲಿ ಕಸವನ್ನು ವೈಜ್ಞಾನಿಕವಾಗಿ ಬೇರ್ಪಡಿಸಿ ವಿಲೇವಾರಿ ಮಾಡಲಾಗುತ್ತದೆ. ಈ ಘಟಕದ ಸುತ್ತಲೂ ಹಸಿರು ಬೆಳೆಸುವ ಯೋಜನೆಯನ್ನು ನಗರಸಭೆ ಹಾಕಿಕೊಂಡಿದೆ.

‘ಮನೆಯಿಂದ ಕಸ ಸಂಗ್ರಹಿಸುವ ವೇಳೆ ನಗರದ ಶೇ 90ರಷ್ಟು ಜನತೆ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿಯೇ ಕೊಡುತ್ತಾರೆ. ಹೆಚ್ಚು ಕಡಿಮೆ ಮಾಡಿದ ಶೇ 10ರಷ್ಟು ಜನರಿಗೆ ತಿಳಿವಳಿಕೆ ಹೇಳುತ್ತೇವೆ. ಅದಕ್ಕೂ ಮೀರಿ ಅವರು ತಮ್ಮ ನಿಲುವು ಬದಲಿಸಿಕೊಳ್ಳದಿದ್ದರೆ ದಂಡ ಹಾಕುತ್ತೇವೆ. ಖಾಲಿ ಸೈಟ್‌ಗಳಲ್ಲಿ ಕಸ ತಂದು ಸುರಿಯದಂತೆ ಆಜುಬಾಜಿನ ನಾಗರಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ’ ಎನ್ನುತ್ತಾರೆ ನಗರಸಭೆ ಆಯುಕ್ತ ರಮೇಶ ಪಾಂಡುರಂಗ ಜಾಧವ.

ಗದಗ ನಗರಸಭೆಯಲ್ಲಿ ಪೌರಕಾರ್ಮಿಕರ ಕೊರತೆ ಇಲ್ಲ. ಹಾಗಾಗಿ, ಕಸ ಸಂಗ್ರಹಣೆಯಲ್ಲೂ ಹಿಂದೆ ಬಿದ್ದಿಲ್ಲ. ಖಾಲಿ ಸೈಟ್‌ಗಳು, ನಗರದ ಹೊರವಲಯಗಳು ಡಂಪಿಂಗ್‌ ಯಾರ್ಡ್‌ಗಳಾಗಿವೆ. ಅಂತಹ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಪ್ಲಾಸ್ಟಿಕ್ ಬಳಕೆ ಮುಕ್ತ ಮಾಡಲು ಕ್ರಮ ವಹಿಸಬೇಕು. ಚರಂಡಿಗಳ ಸಮರ್ಪಕ ನಿರ್ವಹಣೆಗಾಗಿ ನಗರಸಭೆ ಅಧಿಕಾರಿಗಳು ನಿಯಮಿತವಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಕಟ್ಟಿಕೊಂಡಿರುವ ಚರಂಡಿಗಳ ನಿರ್ವಹಣೆಗೆ ಕ್ರಮವಹಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಲಕ್ಷ್ಮೇಶ್ವರದಲ್ಲಿ ಸ್ವಚ್ಛತೆ ಕೊರತೆ

ಪಟ್ಟಣದ ಜನಸಂಖ್ಯೆ 40 ಸಾವಿರ ಮೀರುತ್ತಿದ್ದು ಊರಿನ ಸ್ವಚ್ಛತೆ ಕೆಲಸ ಪುರಸಭೆಗೆ ಸವಾಲಾಗುತ್ತಿದೆ. ಊರಿನ ಹೊರವಲಯದಲ್ಲಿ ಹತ್ತಾರು ಹೊಸ ಬಡಾವಣೆಗಳು ನಿರ್ಮಾಣಗೊಂಡಿದ್ದು ಅಲ್ಲಿ ಸ್ವಚ್ಛತೆಯದೇ ಪ್ರಮುಖ ಸಮಸ್ಯೆ.

ಪಟ್ಟಣದಲ್ಲಿ ಆರು ಸಾವಿರ ಖಾಲಿ ಸೈಟ್‍ಗಳು ಇದ್ದು ಅಲ್ಲಿ ಆಳೆತ್ತರದ ಪೀಕಜಾಲಿ ಮುಳ್ಳಿನ ಕಂಟಿಗಳು ಬೆಳೆದು ಹಂದಿಗಳ ವಾಸ ಸ್ಥಾನಗಳಾಗಿವೆ. ಅಲ್ಲದೆ ಅಕ್ಕಪಕ್ಕದ ನಿವಾಸಿಗಳು ಅಲ್ಲಿಯೇ ಕಸಮುಸುರೆ ಬಿಸಾಕುತ್ತಿದ್ದು ವಾತಾವರಣ ಮತ್ತಷ್ಟು ಹದಗೆಡಲು ಕಾರಣವಾಗಿದೆ.

‘ವಾರಕ್ಕೊಮ್ಮೆಯಾದರೂ ಗಟಾರುಗಳನ್ನು ಸ್ವಚ್ಛಗೊಳಿಸಬೇಕು. ಅಸ್ವಚ್ಛತೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ಗಟಾರುಗಳು ಗಬ್ಬೆದ್ದು ನಾರುತ್ತಿವೆ’ ಎಂಬುದು ವಕೀಲ ಬಿ.ಎಸ್. ಬಾಳೇಶ್ವರಮಠ ಅವರ ಆರೋಪ.

‘14 ಎಕೆರೆ ವಿಸ್ತೀರ್ಣದಲ್ಲಿ ಘನತ್ಯಾಜ್ಯ ಘಟಕ ನಿರ್ಮಿಸಿದ್ದು ಅಲ್ಲಿಗೆ ಪಟ್ಟಣದ ಕಸವನ್ನು ಸಾಗಿಸಲಾಗುತ್ತಿದೆ. ದಿನಾಲೂ ಐದಾರು ವಾಹನಗಳಲ್ಲಿ ಕಸ ಸಂಗ್ರಹಿಸಲಾಗುತ್ತಿದೆ. ಸಾರ್ವಜನಿಕರೂ ಸಹ ಅಲ್ಲಲ್ಲಿ ಕಸ ಬಿಸಾಕದೆ ವಾಹನಗಳಲ್ಲಿ ಹಾಕಬೇಕು’ ಎಂದು ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಮನವಿ ಮಾಡುತ್ತಾರೆ.

ರೋಗ ಹರಡುವ ತಾಣಗಳಾದ ಚರಂಡಿಗಳು

ಶಿರಹಟ್ಟಿಪಟ್ಟಣದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಇಲ್ಲಿನ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಪಟ್ಟಣದ ಮಟ್ಟಿಭಾವಿ ಪ್ಲಾಟ್‌ನಲ್ಲಿ ಮೂಲಸೌಕರ್ಯಗಳಿಲ್ಲದ ಕಾರಣ ಚರಂಡಿ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಹಂದಿಗಳ ಆವಾಸ ‍ಸ್ಥಾನವಾಗಿ ಮಾರ್ಪಟ್ಟಿದೆ. ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಸಾರ್ವಜನಿಕ ಶೌಚಾಲಯದ ನೀರು ರಸ್ತೆಯಲ್ಲೇ ಹರಿಯುವುದರಿಂದ ಸೊಳ್ಳೆಗಳ ಕಾಟಕ್ಕೆ ಜನತೆ ಕಂಗೆಟ್ಟಿದ್ದಾರೆ.

‘ಶಿರಹಟ್ಟಿಯಿಂದ ಲಕ್ಷ್ಮೇಶ್ವರಕ್ಕೆ ಹೋಗುವ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಹರಿಪುರದಿಂದ ಹರಿದು ಬರುವ ತ್ಯಾಜ್ಯ ನೀರು ಹರಿದು ಹೋಗಲು ಚರಂಡಿ ಇಲ್ಲದ ಕಾರಣ ನೀರು ಗುಂಡಿಯಲ್ಲಿ ಸಂಗ್ರಹವಾಗಿದ್ದು, ರಾತ್ರಿ ಹೊತ್ತಿನಲ್ಲಿ ಗಾಳಿ ಬಿಸಿದಾಗ ಇಡೀ ಬಡಾವಣೆಗೆ ದುರ್ವಾಸನೆ ಬಡಿಯುತ್ತದೆ’ ಎಂದು ಸಾರ್ವಜನಿಕರ ಅಲವತ್ತುಕೊಳ್ಳುತ್ತಾರೆ.

ಪುರಸಭೆಗೆ ಕಸ ನಿರ್ವಹಣೆಯ ಸವಾಲು

ಗಜೇಂದ್ರಗಡಪಟ್ಟಣದ ಸ್ವಚ್ಛತೆಗೆ ಪುರಸಭೆ ಶ್ರಮಿಸುತ್ತಿದೆಯಾದರೂ ಕೆಲವು ಬಡಾವಣೆಗಳಲ್ಲಿ ಸಮರ್ಪಕ ವಾಗಿ ತ್ಯಾಜ್ಯ ನಿರ್ವಹಣೆ, ಚರಂಡಿಗಳನ್ನು ಸ್ವಚ್ಛಗೊಳಿಸದ ಕಾರಣ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಪಟ್ಟಣದ ಲಂಬಾಣಿ ತಾಂಡಾ, ಕೊರವರ ಓಣಿ, ಜನತಾ ಪ್ಲಾಟ್, ಗೋಲಗೇರಿ ಪ್ಲಾಟ್ ಸೇರಿದಂತೆ ಹಲವು ಕಡೆಗಳಲ್ಲಿ ಪುರಸಭೆಯವರು ನಿಯಮಿತವಾಗಿ ಕಸ ಸಂಗ್ರಹಣೆ, ಸ್ವಚ್ಛತಾ ಕಾರ್ಯ ಕೈಗೊಳ್ಳದ ಕಾರಣ ಜನರು ರಸ್ತೆ ಬದಿಯಲ್ಲಿ, ಚರಂಡಿಗಳಲ್ಲಿ ತ್ಯಾಜ್ಯ ಎಸೆಯುತ್ತಿರುವುದರಿಂದ ಚರಂಡಿಗಳು ಹೂಳು ತುಂಬಿ ಗಬ್ಬೆದ್ದು ನಾರುತ್ತಿವೆ. ಅಲ್ಲದೆ ಪಟ್ಟಣದಲ್ಲಿರುವ ಖಾಲಿ ನಿವೇಶನಗಳಲ್ಲಿ ನಿರ್ವಹಣೆ ಇಲ್ಲದ ಕಾರಣ ತ್ಯಾಜ್ಯ ಹಾಕುವ ಸ್ಥಳಗಳಾಗಿ ಮಾರ್ಪಾಡಾಗುತ್ತಿವೆ.

ಪಟ್ಟಣದಲ್ಲಿ 23 ವಾರ್ಡ್‌ಗಳಿದ್ದು, 40 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಇಲ್ಲಿನ ಪುರಸಭೆಯಲ್ಲಿ 42 ಜನ ಪೌರ ಕಾರ್ಮಿಕರಿದ್ದು, ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವ 7 ವಾಹನಗಳು ಹಾಗೂ 2 ಟ್ರ್ಯಾಕ್ಟರ್‌ಗಳಿವೆ. ಪಟ್ಟಣದಲ್ಲಿ ಸಂಗ್ರಹವಾಗುವ ಒಣ ಹಾಗೂ ಹಸಿ ಕಸವನ್ನು ಬೇರ್ಪಡಿಸಿ ಪಟ್ಟಣದ ಹೊರವಲಯದಲ್ಲಿರುವ ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಎರೆಹುಳು ಗೊಬ್ಬರ ತಯಾರಿಸಲಾಗುತ್ತಿದೆ.

‘ಪಟ್ಟಣವನ್ನು ಸ್ವಚ್ಛ ಹಾಗೂ ಸುಂದರವಾಗಿಡುವ ನಿಟ್ಟಿನಲ್ಲಿ ಪುರಸಭೆ ಅಧಿಕಾರಿಗಳು ಸೇರಿದಂತೆ ಪೌರಕಾರ್ಮಿಕರು ಶ್ರಮಿಸುತ್ತಿದ್ದು, ಪ್ರತಿದಿನ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಲಾಗುತ್ತಿದೆ. ಇಕ್ಕಟ್ಟಿನ ಜಾಗವಿರುವ ಕೆಲವು ವಾರ್ಡ್‌ಗಳಲ್ಲಿ ಮುಂದಿನ ದಿನಗಳಲ್ಲಿ ಕೈಯಿಂದ ತಳ್ಳುವ ವಾಹನದ ಮೂಲಕ ಕಸ ಸಂಗ್ರಹಿಸಲು ನಿರ್ಧರಿಸಲಾಗಿದೆ’ ಎಂದು ಪುರಸಭೆ ಆರೋಗ್ಯ ಸಹಾಯಕ ಎ.ಎಸ್.ಮಂತಾ ಹೇಳಿದರು.

(‘ಪ್ರಜಾವಾಣಿ’ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ನಾಗರಾಜ ಎನ್‌.ಹಣಗಿ, ಖಲೀಲಅಹ್ಮದ ಶೇಖ, ಬಸವರಾಜ ಹಲಕುರ್ಕಿ, ಶ್ರೀಶೈಲ ಕುಂಬಾರ, ಚಂದ್ರಶೇಖರ ಭಜಂತ್ರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT