ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಕಸದ ತೊಟ್ಟಿಗಳಾದ ಖಾಲಿ ನಿವೇಶನಗಳು

ನೋಟಿಸ್‌ ನೀಡಿ ಸುಮ್ಮನಾಗುವ ಅಧಿಕಾರಿಗಳು; ನಿಯಮಿತವಾಗಿ ಬಾರದ ಕಸ ಸಂಗ್ರಹಣಾ ವಾಹನಗಳು
Last Updated 27 ಡಿಸೆಂಬರ್ 2021, 4:21 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯಾಗಿ 25 ವರ್ಷಗಳಾದರೂ ಮೂಲಸೌಕರ್ಯಗಳ ಕೊರತೆಯಿಂದ ನಲುಗುತ್ತಿರುವ ಗದಗ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಸ್ವಚ್ಛತೆಯ ಕೊರತೆ ಕಾಡುತ್ತಿದೆ. ಕಸ ವಿಲೇವಾರಿ, ಬಯಲು ಬಹಿರ್ದೆಸೆ, ರಸ್ತೆ ದುರವಸ್ಥೆ, ಕುಡಿಯುವ ನೀರಿನ ಸಮಸ್ಯೆಯಿಂದ ಜನರು ಬಳಲುತ್ತಿದ್ದಾರೆ. ಅದೇ ರೀತಿಯಾಗಿ, ಜಿಲ್ಲೆಯಾದ್ಯಂತ ಇರುವ ಖಾಲಿ ನಿವೇಶನಗಳು ಡಂಪಿಂಗ್‌ ಯಾರ್ಡ್‌ಗಳಂತಾಗಿದ್ದು, ರೋಗ ಹರಡುವ ತಾಣಗಳಾಗಿ ಮಾರ್ಪಟ್ಟಿವೆ.

ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಡುವ ಕೆಲಸವನ್ನು ಸೈಟ್‌ನ ಮಾಲೀಕರು ಅಥವಾ ಸ್ಥಳೀಯ ಸಂಸ್ಥೆಗಳು ಮಾಡುತ್ತಿಲ್ಲ. ಕೆಲವರು ಸೈಟ್‌ ಖರೀದಿಸಿ ಹತ್ತಾರು ವರ್ಷಗಳಾದರೂ ಮನೆ ಕಟ್ಟುವುದಿಲ್ಲ. ಇಂತಹ ಸ್ಥಳಗಳು ಕಸ ಎಸೆಯುವ ತಾಣವಾಗಿ ಮಾರ್ಪಾಟಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.

ಸೈಟ್‌ಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ನೋಟಿಸ್‌ ನೀಡುತ್ತಾರೆ. ಆದರೆ, ಮಾಲೀಕರು ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುವುದಿಲ್ಲ. ಇದು ಸಾಲದು ಎಂಬಂತೆ ಕೆಲವು ಸಾರ್ವಜನಿಕರು ತಮ್ಮ ಮನೆಯ ಕಸ ಮುಸುರೆಯನ್ನೆಲ್ಲಾ ಖಾಲಿ ಸೈಟ್‌ಗೆ ತಂದು ಸುರುವಿ ಹೋಗುತ್ತಾರೆ. ಕಸವೆಲ್ಲಾ ಕೊಳೆತು ನಾರುವುದರಿಂದ ಇಡೀ ವಾತಾವರಣ ಹದಗೆಡುತ್ತಿದೆ. ಅಧಿಕಾರಿಗಳು ನೋಟಿಸ್‌ ನೀಡುವುದಕ್ಕಷ್ಟೇ ಸೀಮಿತರಾಗದೇ ಎಲ್ಲೆಂದರಲ್ಲಿ ಕಸ ಎಸೆಯುವ ಜನರಿಗೂ ದಂಡ ವಿಧಿಸಿ, ಬಿಸಿ ಮುಟ್ಟಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ನಗರಸಭೆ ವ್ಯಾಪ್ತಿಯಲ್ಲಿ 35 ವಾರ್ಡ್‌ಗಳಿದ್ದು, ಕಸ ಸಂಗ್ರಹಣಾ ವಾಹನಗಳ ಕೊರತೆ ಇದೆ. ಈ ಕಾರಣದಿಂದಾಗಿ, ಕೆಲವು ವಾರ್ಡ್‌ಗಳಿಗೆ ಎರಡು ಮೂರು ದಿನವಾದರೂ ಕಸ ಸಂಗ್ರಹ ಗಾಡಿ ಬರುವುದಿಲ್ಲ. ಈ ಕಾರಣದಿಂದಾಗಿಯೂ ಖಾಲಿ ನಿವೇಶಗಳು ಕಸದ ತೊಟ್ಟಿಗಳಾಗಿ ಮಾರ್ಪಾಟಾಗಿದ್ದು, ಇದಕ್ಕೆ ನಗರಸಭೆ ಅಧಿಕಾರಿಗಳೇ ನೇರ ಹೊಣೆಯಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಸಕಡ್ಡಿ, ಮುಳ್ಳಿನ ಕಂಟಿಗಳ ತಾಣ
ಲಕ್ಷ್ಮೇಶ್ವರ
: ಪಟ್ಟಣದ ನೂತನ ಬಡಾವಣೆಗಳಲ್ಲಿ ಖಾಲಿ ಬಿದ್ದಿರುವ ನಿವೇಶನಗಳು ಕಸದ ತೊಟ್ಟಿಗಳಾಗುತ್ತಿವೆ. ಪಟ್ಟಣದಲ್ಲಿ ಹತ್ತಾರು ಕಡೆ ನೂತನ ಬಡವಾಣೆಗಳು ನಿರ್ಮಾಣಗೊಂಡಿವೆ. ಉಳ್ಳವರು ನಿವೇಶನಗಳನ್ನು ಖರೀದಿಸಿ 10-12 ವರ್ಷಗಳಿಂದ ಮನೆ ಕಟ್ಟಿಸದೆ ಹಾಗೇ ಬಿಟ್ಟಿದ್ದಾರೆ. ಈಗ ಅವು ಹಂದಿಗಳ ವಾಸಸ್ಥಾನಗಳಾಗಿವೆ.

ಪುರಸಭೆ ಅಂಕಿಸಂಖ್ಯೆಗಳ ಪ್ರಕಾರ ಪಟ್ಟಣದಲ್ಲಿ ಬರೋಬ್ಬರಿ ಆರು ಸಾವಿರ ಖಾಲಿ ನಿವೇಶನಗಳು ಇದ್ದು, ಅವುಗಳಲ್ಲಿ 10-15 ಅಡಿಗಳ ಎತ್ತರದವರೆಗೆ ಕಸಕಡ್ಡಿ, ಮುಳ್ಳಿನ ಕಂಟಿಗಳು ಬೆಳೆದು ನಿಂತು ಕಾಡಿನಂತೆ ಕಾಣುತ್ತಿವೆ. ಅಲ್ಲದೆಅಕ್ಕಪಕ್ಕದ ನಿವಾಸಿಗಳು ಖಾಲಿ ನಿವೇಶನಗಳಲ್ಲಿ ಕಸ ಮುಸುರಿ ಒಗೆಯುವುದರಿಂದ ಅಲ್ಲಿ ಹಂದಿಗಳೂ ಸಹ ವಾಸಿಸುತ್ತಿವೆ. ಇದರಿಂದಾಗಿ ನೂತನ ಬಡಾವಣೆಗಳು ಸ್ಲಂಗಳಂತೆ ಕಾಣುತ್ತಿವೆ.

ಪುರಸಭೆ ಖಾಲಿ ನಿವೇಶಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಮಾಲೀಕರಿಗೆ ತಾಕೀತು ಮಾಡಬೇಕಾಗಿತ್ತು. ಆದರೆ ಆ ಕೆಲಸವೂ ಈಡೇರಿಲ್ಲ. ಅಲ್ಲಿನ ನಿವಾಸಿಗಳ ಮಾತ್ರ ಹಾವು-ಚೇಳುಗಳ ಭಯದಲ್ಲೇ ಬದುಕು ಸಾಗಿಸುವಂತ ಪರಿಸ್ಥಿತಿ ಇದೆ.

ಸಾಂಕ್ರಾಮಿಕ ರೋಗ ಹರಡುವ ಕೇಂದ್ರ
ಮುಂಡರಗಿ:
ಪಟ್ಟಣದ ಎಂಟು ದಿಕ್ಕುಗಳಲ್ಲಿಯೂ ಹಲವಾರು ನೂತನ ಬಡಾವಣೆಗಳಾಗಿದ್ದು, ಅಲ್ಲಿರುವ ಬಹುತೇಕ ಖಾಲಿ ನಿವೇಶನಗಳು ದೊಡ್ಡ ಗಿಡ ಗಂಟೆಗಳಿಂದ ಆವೃತ್ತವಾಗಿವೆ. ಬಡಾವಣೆ ನಿರ್ಮಾಣಕ್ಕೆ ಅನುಮತಿ ನೀಡುವ ವಿವಿಧ ಹಂತಗಳ ಅಧಿಕಾರಿಗಳು ನಂತರ ಅವುಗಳತ್ತ ಕಣ್ಣೆತ್ತಿ ನೋಡುವುದಿಲ್ಲ. ಹೀಗಾಗಿ ಖಾಲಿ ನಿವೇಶನಗಳು ಅದರ ಅಕ್ಕಪಕ್ಕದ ಜನರಿಗೆ ಬಹುದೊಡ್ಡ ಸಮಸ್ಯೆಗಳಾಗಿವೆ.

ಪಟ್ಟಣದ ಪ್ರಮುಖ ಸ್ಥಳಗಳು ಸೇರಿದಂತೆ ವಿವಿಧ ಭಾಗಗಳಲ್ಲಿ ನೂರಾರು ಖಾಲಿ ನಿವೇಶನಗಳಿದ್ದು, ಅಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಇದರಿಂದಾಗಿ ಅಲ್ಲಿ ಬೀದಿನಾಯಿ, ಹಂದಿ ಹಾಗೂ ಮತ್ತಿತರ ಪ್ರಾಣಿಗಳು ನಿರಾತಂಕದಿಂದ ವಾಸಿಸುತ್ತಲಿವೆ. ಅಲ್ಲಿ ಜನರು ಕಸಕಡ್ಡಿಗಳನ್ನು ಹಾಕುತ್ತಿರುವುದರಿಂದ ಅವು ಸಾಂಕ್ರಾಮಿಕ ರೋಗ ಹರಡುವ ಕೇಂದ್ರಗಳಾಗಿವೆ.

ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಿ ಅದರ ಖರ್ಚು ವೆಚ್ಚವನ್ನು ಖಾಲಿ ನಿವೇಶನದಮಾಲೀಕರ ಉತಾರದಲ್ಲಿ ಬೋಜಾ ಸೇರಿಸಲು ಪುರಸಭೆಯ ಅಧಿಕಾರಿಗಳಿಗೆ ಸಾಕಷ್ಟು ಅವಕಾಶವಿದೆ.

ಆದರೆ ಈವರೆಗೂ ಯಾವ ಅಧಿಕಾರಿಯೂ ಅಂತಹ ಧೈರ್ಯ ಮಾಡುತ್ತಿಲ್ಲ. ಪಟ್ಟಣದ ಕೆಲವು ಭಾಗಗಳಲ್ಲಿ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಿ ಅದರ ಖರ್ಚನ್ನು ಮಾಲೀಕರ ಮೇಲೆ ಹಾಕಿದರೆ ಉಳಿದವರೆಲ್ಲ ಹೆದರಿ ಸ್ವ–ಇಚ್ಛೆಯಿಂದ ತಮ್ಮ ನಿವೇಶನಗಳನ್ನು ಸ್ವಚ್ಛಗೊಳಿಸುತ್ತಾರೆ. ಪುರಸಭೆಯ ಅಧಿಕಾರಿಗಳು ಈ ಕ್ರಮವನ್ನು ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಕೆಲವು ಭಾಗಗಳಲ್ಲಿ ಪೌರಕಾರ್ಮಿಕರು ನಿಯಮಿತವಾಗಿ ರಸ್ತೆ ಹಾಗೂ ಚರಂಡಿಗಳನ್ನು ಸ್ವಚ್ಛಗೊಳಿಸದೇ ಇರುವುದರಿಂದ ಅಕ್ಕಪಕ್ಕದ ಜನರು ತಮ್ಮ ಮನೆಯಕಸಕಡ್ಡಿಯನ್ನು ಹತ್ತಿರದಲ್ಲಿರುವ ಖಾಲಿ ನಿವೇಶನಗಳಲ್ಲಿ ಹಾಕುತ್ತಿದ್ದಾರೆ. ಹೀಗಾಗಿ ಕೆಲವು ಖಾಲಿ ನಿವೇಶನಗಳು ಕಸದ ತೊಟ್ಟಿಗಳಾಗಿ ಮಾರ್ಪಟ್ಟಿವೆ.

ತ್ಯಾಜ್ಯ ಸಂಗ್ರಹಾಗಾರ
ಡಂಬಳ:
ಸ್ವಚ್ಛ ಭಾರತ್‌ ಅಭಿಯಾನದ ಮೂಲಕ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಬೀದಿ ನಾಟಕಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ, ಗ್ರಾಮೀಣ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ.

ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡೂ ಬದಿಯಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಜನರು ಕಸ ತಂದು ಹಾಕುತ್ತಿರುವುದರಿಂದ, ಡಂಬಳ ಸೇರಿದಂತೆ ವಿವಿಧ ಗ್ರಾಮದ ಪರಿಸರ ಹಾಗೂ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ ಜನರು ಸೊಳ್ಳೆಯ ಕಾಟದಿಂದ ಹೈರಾಣಾಗಿದ್ದಾರೆ. ಸಾಂಕ್ರಾಮಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.

ಗ್ರಾಮದ ಸ್ವಚ್ಛತೆಯಲ್ಲಿ ಪ್ರತಿಯೊಬ್ಬರ ಪಾತ್ರವೂ ಮಹತ್ವದ್ದಾಗಿದೆ. ಜನಜಾಗೃತಿ ಹೆಚ್ಚಾಗಬೇಕು. ಮನೆಯ ಆವರಣ, ವಾರ್ಡ್, ಗ್ರಾಮ ಸ್ವಚ್ಛವಾಗಿದ್ದರೆ ಮಾತ್ರ ಜನರ ಆರೋಗ್ಯ ಸದೃಢವಾಗಿರಲು ಸಾಧ್ಯ ಎನ್ನುತ್ತಾರೆ ಡಂಬಳದ ಸಾಮಾಜಿಕ ಕಾರ್ಯಕರ್ತ ಖಾಜಿಸಾಬ್ ಹೊಸಪೇಟಿ ಹಾಗೂ ಮಂಜುನಾಥ ತಳವಾರ.

ಬಸ್ ನಿಲ್ದಾಣದ ಹತ್ತಿರ ಕಸದ ರಾಶಿ
ಮುಳಗುಂದ:
ಇಲ್ಲಿನ ಬಸ್ ನಿಲ್ದಾಣದ ಹತ್ತಿರದ ಪಟ್ಟಣ ಪಂಚಾಯ್ತಿಯ ಖಾಲಿ ನಿವೇಶದಲ್ಲಿ ಕಸದ ರಾಶಿ ಬೀಳುತ್ತಿದ್ದು ಸುತ್ತಮುತ್ತಲಿನ ವಾತಾವರಣಕ್ಕೆ ಧಕ್ಕೆ ತಂದಿದೆ.

ಹಲವು ವರ್ಷಗಳಿಂದ ಈ ನಿವೇಶನ ಖಾಲಿ ಉಳಿದಿದ್ದು, ಜಾಲಿಗಿಡಗಳು ಬೆಳೆದು ನಿಂತಿವೆ. ಇಲ್ಲಿ ಅಂಚೆ ಕಚೇರಿ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಲಾಗಿದೆ. ಆದರೆ, ಇಲಾಖೆ ಅದನ್ನು ಉಪಯೋಗ ಮಾಡದೇ ಇರುವುದರಿಂದ ಸಾರ್ವಜನಿಕರು ಅಲ್ಲಿಗೆ ಕಸ ತಂದು ಸುರಿಯುತ್ತಿದ್ದಾರೆ. ಪಕ್ಕದಲ್ಲೇ ಪಶು ಆಸ್ಪತ್ರೆ ನಿರ್ಮಾಣವಾಗಿದ್ದು, ಕಾಂಪೌಂಡ್‌ ಕೂಡ ಇಲ್ಲದಾಗಿದೆ.

ಊರಿಗೆ ಪ್ರವೇಶ ಪಡೆಯುವ ಸ್ಥಳದಲ್ಲೇ ಗಲೀಜು, ಕಸದ ರಾಶಿ ಕಾಣುತ್ತಿದ್ದು ಊರೊಳಗೆ ಸ್ವಚ್ಛವಿದ್ದರೂ ಇದರಿಂದ ಅಂದ ಹಾಳಾಗಿದೆ. ಸುತ್ತಮುತ್ತಲಿನ ಅಂಗಡಿಗಳ ತ್ಯಾಜ್ಯವನ್ನೆಲ್ಲಾ ಇಲ್ಲೇ ಸುರಿಯಲಾಗುತ್ತಿದೆ. ಇದರ ಹತ್ತಿರವೇ ಸರ್ಕಾರಿ ಆಸ್ಪತ್ರೆ ಇದ್ದು ಗಲೀಜು, ದುರ್ನಾತ ಬೀರುವಂತಾಗಿದೆ. ಖಾಲಿ ನಿವೇಶನ ಸ್ವಚ್ಛತೆ ಮತ್ತು ನಿರ್ವಹಣೆ ಮಾಡಬೇಕು. ಸುತ್ತಮುತ್ತಲಿನ ಪರಿಸರ ಶುದ್ಧವಾಗಿ ಇಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮರೆಯಾದ ಸ್ವಚ್ಛತೆ
ರೋಣ:
ನಗರದಲ್ಲಿರುವ ಖಾಲಿ ನಿವೇಶನಗಳು ಕಸ ಎಸೆಯುವ ತಾಣವಾಗಿ ಮಾರ್ಪಟ್ಟಿವೆ. ಇದರ ಜತೆಗೆ ಜನರು ಎಲ್ಲೆಂದರಲ್ಲಿ ಕಸ ಎಸೆಯುವ ಕಾರಣದಿಂದಾಗಿ ರೋಣ ಪಟ್ಟಣದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಪಟ್ಟಣದ ಸೌಂದರ್ಯ ಹಾಳಾಗಿದೆ.

ಕಲ್ಯಾಣ ನಗರ ಸೇರಿದಂತೆ ಪಟ್ಟಣದ ವಿವಿಧೆಡೆ ಇರುವ ಖಾಲಿ ನಿವೇಶನಗಳು ಕಸ ಹಾಕುವ ಸ್ಥಳಗಳಾಗಿವೆ. ಕಸದ ರಾಶಿಯಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಿದೆ. ಈಗಲಾದರೂ ಪುರಸಭೆಯವರು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಚಂದ್ರಶೇಖರ ಕನ್ನೂರ ಹೇಳಿದರು.

ಕಸ ಹಾಕುವ ಜಾಗವಾದ ಖಾಲಿ ನಿವೇಶನ
ನರೇಗಲ್:
ಪಟ್ಟಣದ ವ್ಯಾಪ್ತಿಯಲ್ಲಿರುವ ಖಾಲಿ ನಿವೇಶನಗಳು ತ್ಯಾಜ್ಯ ಸಂಗ್ರಹಾಗಾರಗಳಾಗುತ್ತಿವೆ.

ಪಟ್ಟಣದ ಹೃದಯಭಾಗವಾದ ಸಂತೆ ಬಜಾರಿನ ವ್ಯಾಪ್ತಿಯಲ್ಲಿ ಕಟ್ಟಿಸುತ್ತಿರುವ ಗ್ರಂಥಾಲಯದ ಹಿಂಬದಿ, ಕಲ್ಮೇಶ್ವರ ದೇವಸ್ಥಾನದ ಸಮೀಪದ ಖಾಲಿ ನಿವೇಶನ,ಗದಗ ಮಾರ್ಗದ ಮಸೀದಿ ಎದುರಿನಜಾಗ ಸೇರಿದಂತೆ ರಸ್ತೆ ಪಕ್ಕದ, ಗ್ರಾಮದ ಮಧ್ಯದಲ್ಲಿ ಇರುವ ಖಾಲಿ ನಿವೇಶನಗಳು ಕಸ ಹಾಕುವ ಸ್ಥಳಗಳಾಗಿವೆ.

ಕಸದ ರಾಶಿಯ ದುರ್ನಾತ, ಅಕ್ಕಪದ ಮನೆಗಳ ಕಸ ಸುರಿಯುವ ಜಾಗಗಳಾಗಿ, ಹಂದಿ, ದನ, ನಾಯಿಗಳ ತಾಣಗಳಾಗಿವೆ. ಕೆಲವು ಖಾಲಿ ನಿವೇಶನಗಳು ತಕರಾರಿನ ಕಾರಣದಿಂದಾಗಿ ನ್ಯಾಯಾಲಯದಲ್ಲಿ ವ್ಯಾಜ್ಯಗಳು ನಡೆಯುತ್ತಿವೆ. ಹಾಗಾಗಿ, ಅಲ್ಲಿ ಮನೆಗಳನ್ನು ಕಟ್ಟಿಸಿಲ್ಲ. ಇದರಿಂದಾಗಿ ಕಸ ಹಾಕುವವರಿಗೆ ಅನಕೂಲವಾಗಿವೆ.

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ಕಾಶೀನಾಥ ಬಿಳಿಮಗ್ಗದ, ಚಂದ್ರಶೇಖರ ಭಜಂತ್ರಿ, ಲಕ್ಷ್ಮಣ ಎಚ್ ದೊಡ್ಡಮನಿ, ಚಂದ್ರು ಎಂ.ರಾಥೋಡ್‌, ನಾಗರಾಜ ಎಸ್‌.ಹಣಗಿ, ಬಸವರಾಜ ಪಟ್ಟಣಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT