560 ಗ್ರಾಂ ತೂಕದ ಮಗುವನ್ನು ರಕ್ಷಿಸಿದ ಜಿಮ್ಸ್‌ ವೈದ್ಯರು

ಬುಧವಾರ, ಏಪ್ರಿಲ್ 24, 2019
30 °C
ಅವಧಿ ಪೂರ್ವ ಜನನ; ಕಾಂಗರೂ ಮದರ್ ಕೇರ್ ಮೂಲಕ ರಕ್ಷಣೆ

560 ಗ್ರಾಂ ತೂಕದ ಮಗುವನ್ನು ರಕ್ಷಿಸಿದ ಜಿಮ್ಸ್‌ ವೈದ್ಯರು

Published:
Updated:
Prajavani

ಗದಗ: ಅವಧಿ ಪೂರ್ವದಲ್ಲಿ ಜನಿಸಿದ 26 ವಾರಗಳ 560 ಗ್ರಾಂ ತೂಕದ ನವಜಾತ ಹೆಣ್ಣು ಶಿಶುವನ್ನು ಸೂಕ್ತ ಆರೈಕೆಯ ಮೂಲಕ ರಕ್ಷಿಸುವಲ್ಲಿ ಇಲ್ಲಿನ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಜಿಮ್ಸ್‌) ವೈದ್ಯರ ತಂಡ ಯಶಸ್ವಿಯಾಗಿದೆ.

ಗದಗ ಮೂಲದ ಪೂಜಾ ಪರಶುರಾಮ ಭಂಡಾರಿ (20) ಅವರು ಫೆಬ್ರುವರಿ ಮೊದಲ ವಾರದಲ್ಲಿ ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಅವಧಿ ಪೂರ್ವದಲ್ಲಿ ಜನಿಸಿದ, ಉಸಿರಾಟದ ತೀವ್ರ ತೊಂದರೆಯಿಂದ ಬಳಲುತ್ತಿದ್ದ ಈ ಮಗು ಬದುಕಿ ಉಳಿಯುವುದು ಕಷ್ಟ ಎಂದು ಅಲ್ಲಿನ ವೈದ್ಯರು ಹೇಳಿದ್ದರು.

ನಂತರ ಮಗುವನ್ನು ಉಳಿಸಿಕೊಳ್ಳಲು ದಂಪತಿ ನಗರದ ಹಲವು ಖಾಸಗಿ ಆಸ್ಪತ್ರೆಗಳನ್ನು ಸಂಪರ್ಕಿಸಿದ್ದರು. ಆದರೆ, ದುಬಾರಿ ಚಿಕಿತ್ಸಾ ವೆಚ್ಚ ಭರಿಸುವ ಶಕ್ತಿ ಇಲ್ಲದೆ, ಅಂತಿಮವಾಗಿ ‘ಜಿಮ್ಸ್‌’ನಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು.

‘ಜಿಮ್ಸ್‌’ನ ನವಜಾತ ಶಿಶು ತುರ್ತು ಚಿಕಿತ್ಸಾ ವಿಭಾಗ ಡಾ.ಶಿವನಗೌಡ ಜೋಳದರಾಶಿ ಅವರ ತಂಡವು, ಕೃತಕ ಉಸಿರಾಟ ವ್ಯವಸ್ಥೆ ಮತ್ತು ಕಾಂಗರೂ ಮದರ್ ಕೇರ್ (ಕೆಎಂಸಿ) ವಿಧಾನದ ಮೂಲಕ, ಹಂತ ಹಂತವಾಗಿ ಮಗುವಿನ ಆರೋಗ್ಯ ಸುಧಾರಿಸಿದೆ.

‘ಮಗು ‘ಜಿಮ್ಸ್‌’ಗೆ ದಾಖಲಾಗಿ ಇದೀಗ ಎರಡೂವರೆ ತಿಂಗಳು ಕಳೆದಿದೆ.ಸದ್ಯ ಮಗು 1.5 ಕೆ.ಜಿ ತೂಕವಿದ್ದು, ಆರೋಗ್ಯವಾಗಿದೆ. ಸ್ವತಂತ್ರವಾಗಿ ಉಸಿರಾಡುತ್ತಿದೆ.ಇನ್ನೊಂದು ವಾರದಲ್ಲಿ ಡಿಸ್ಚಾರ್ಜ್‌ ಮಾಡಲಾಗುವುದು’ ಎಂದು ಡಾ. ಶಿವನಗೌಡ ಜೋಳದರಾಶಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಷ್ಟೊಂದು ಕಡಿಮೆ ತೂಕದ ನವಜಾತ ಶಿಶುವನ್ನು ರಕ್ಷಿಸಿದ್ದು ಜಿಲ್ಲೆಯಲ್ಲಿ ಇದೇ ಮೊದಲು. 1 ಕೆಜಿಗಿಂತ ಕಡಿಮೆ ತೂಕದ ಶಿಶುವಿನ ಆರೈಕೆ ಸವಾಲಿನ ಕೆಲಸ. ನಮ್ಮ ವೈದ್ಯರ ತಂಡ ಅದನ್ನು ಸಮರ್ಥವಾಗಿ ನಿಭಾಯಿಸಿದೆ’ ಎಂದು ಜಿಮ್ಸ್‌’ನಿರ್ದೇಶಕ ಪಿ.ಎಸ್‌ ಭೂಸರೆಡ್ಡಿ ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !