ಭಾನುವಾರ, ಸೆಪ್ಟೆಂಬರ್ 22, 2019
22 °C
ಧರ್ಮದರ್ಶಿಗಳಿಂದ ಸ್ವಚ್ಛತಾ ಕಾರ್ಯ

ಕಾಲಕಾಲೇಶ್ವರ ಕ್ಷೇತ್ರ; ಪುಷ್ಕರಣಿಯಲ್ಲಿ ಉಕ್ಕಿತು ಜೀವ ಜಲ

Published:
Updated:
Prajavani

ಗಜೇಂದ್ರಗಡ: ಎಂದೂ ಬತ್ತದ ಕಲ್ಯಾಣಿ ಎಂದೇ ಪ್ರಸಿದ್ಧಿ ಪಡೆರುವ ಇಲ್ಲಿನ ಕಾಲಕಾಲೇಶ್ವರ ಕ್ಷೇತ್ರದ ಐತಿಹಾಸಿಕ ಕಲ್ಯಾಣಿಯ ಸ್ವಚ್ಛತಾ ಕಾರ್ಯ, ದೇವಸ್ಥಾನದ ಧರ್ಮದರ್ಶಿಗಳು ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ನಡೆದಿದ್ದು, ಅಂತಿಮ ಹಂತಕ್ಕೆ ಬಂದಿದೆ.

ಈ ಕಲ್ಯಾಣಿಯಲ್ಲಿನ ನೀರನ್ನು ಜನರು  ಮೊದಲು ಕುಡಿಯಲು ಬಳಸುತ್ತಿದ್ದರು. ಆದರೆ, ದೇವಸ್ಥಾನಕ್ಕೆ ಬರುವ ಭಕ್ತರು ಇದರಲ್ಲಿ ಹೂವು, ಹಣ್ಣು, ಕಾಯಿ ಸೇರಿದಂತೆ ಪೂಜಾ ಸಾಮಗ್ರಿಗಳನ್ನು ಎಸೆದು ನೀರು ಕಲುಷಿತಗೊಳಿಸಿದ್ದರು.  ದೇವಸ್ಥಾನದ ಧರ್ಮದರ್ಶಿಗಳ ನೇತೃತ್ವದಲ್ಲಿ ಕಳೆದ 8 ದಿನಗಳಿಂದ ಕಲ್ಯಾಣಿಯಲ್ಲಿನ ಕಲುಷಿತ ನೀರನ್ನು ಹೊರಹಾಕಿ, ಹೂಳು ತೆಗೆಯುವ ಕಾರ್ಯ ನಡೆಯುತ್ತಿದೆ.

ಆಯಿಲ್‌ ಎಂಜಿನ್‌ ಬಳಸಿ, ಪುಷ್ಕರಣಿಯಲ್ಲಿನ ಕಲುಷಿತ ನೀರು  ಹೊರಹಾಕುವುದರ ಜತೆಗೆ ಸ್ವಯಂ ಸೇವಕರು, ಗ್ರಾಮಸ್ಥರು ಹಾಗೂ 40ಕ್ಕೂ ಹೆಚ್ಚು ಜನರು ವೇತನದ ಆಧಾರದಲ್ಲಿ ಪುಷ್ಕರಣಿಯಲ್ಲಿನ ಹೂಳನ್ನು ಹೊರತಗೆಯುತ್ತಿದ್ದಾರೆ. ಪುಷ್ಕರಣಿಯ ಸುತ್ತ ಸುಣ್ಣ ಹಚ್ಚಿದ್ದಾರೆ. ಈಗ ಬಹುತೇಕ ಕೆಲಸ ಮುಗಿದಿದ್ದು, ತಳದಲ್ಲಿ ತಿಳಿಯಾದ ಜೀವ ಜಲ ಜಿನುಗುತ್ತಿದೆ.

ಈ ಭಾಗದಲ್ಲಿ ಸಮೃದ್ದ ಮಳೆಯಾದರೆ ಇಲ್ಲಿನ ಕಲ್ಯಾಣಿಗಳು ತುಂಬಿ ಹರಿಯುತ್ತವೆ. ಸದ್ಯ ಎಲ್ಲೆಡೆ ಭೀಕರ ಬರಗಾಲ ಆವರಿಸಿ ಜಲ ಮೂಲಗಳು ಬತ್ತಿ ಹೋಗಿದೆ. ಮಳೆಗಾಲಕ್ಕೆ ಮುನ್ನವೇ ಪುಷ್ಕರಣಿ ಸ್ವಚ್ಛಗೊಳಿಸಿರುವುದು,ಜಲ ಮೂಲವನ್ನು ಸಂರಕ್ಷಿಸಿದಂತಾಗಿದೆ’ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಧರ್ಮದರ್ಶಿಗಳಾದ ಘೋರ್ಪಡೆ ಮನೆತನದವರು ತಮ್ಮ ಸ್ವಂತ ಖರ್ಚಿನಲ್ಲಿ ಐತಿಹಾಸಿಕ ಕಲ್ಯಾಣಿ ಹೂಳೆತ್ತಿ, ಸ್ವಚ್ಛತೆ ಮಾಡಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಈ ಜೀವಜಲ ಕಲುಷಿತವಾಗದಂತೆ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ’ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ಶಶಿಧರ ಹೂಗಾರ ಅಭಿಪ್ರಾಯಪಟ್ಟರು.

Post Comments (+)