ಇದು ಸರ್ಕಾರಿ ಶಾಲೆಯ ಚುಕುಬುಕು ರೈಲು..!

7
ಮಕ್ಕಳ ದಾಖಲಾತಿ, ಹಾಜರಾತಿ ಹೆಚ್ಚಿಸಲು ಜಿಲ್ಲಾಡಳಿತದಿಂದ ವಿನೂತನ ಪ್ರಯತ್ನ

ಇದು ಸರ್ಕಾರಿ ಶಾಲೆಯ ಚುಕುಬುಕು ರೈಲು..!

Published:
Updated:
Deccan Herald

ಗದಗ: ಪ್ರಯಾಣಿಕರ ಗಮನಕ್ಕೆ, ಗಾಡಿ ಸಂಖ್ಯೆ... ಕೆಲವೇ ನಿಮಿಷಗಳಲ್ಲಿ ಪ್ಲಾಟ್‌ಫಾರಂಗೆ ಬರಲಿದೆ... 

ರೈಲು ನಿಲ್ದಾಣದಲ್ಲಿ ರೈಲಿನ ಹಾದಿ ಕಾಯುತ್ತಿರುವಾಗ ಆಗಾಗ್ಗ ಮೈಕ್‌ನಿಂದ ಕೇಳಿಸುವ ಈ ಧ್ವನಿಯೇ ಪ್ರಯಾಣದ ಖುಷಿಯನ್ನು ಇಮ್ಮಡಿಗೊಳಿಸುತ್ತದೆ. ಮನಸ್ಸನ್ನು ಮುದಗೊಳಿಸುತ್ತದೆ. 

ಇಲ್ಲೂ ಕೂಡ ರೈಲು ಗಾಡಿ ಹೊರಟಿದೆ. ಮಕ್ಕಳು ಕೂಡ ಖುಷಿ, ಖುಷಿಯಿಂದ ರೈಲು ಹತ್ತಿದ್ದಾರೆ. ಶಿಕ್ಷಕರೂ ಜತೆಗಿದ್ದಾರೆ. ಕಿಟಕಿ ಪಕ್ಕದಲ್ಲಿ ಕುಳಿತ ಮಕ್ಕಳ ಮುಖದಲ್ಲಿ ಸಂತೋಷ, ಬೆರಗಿನ ಮಿಶ್ರ ಭಾವ. ಇದು ಸರ್ಕಾರಿ ಶಾಲೆಯ ಚುಕುಬುಕು ರೈಲು.

ಮಕ್ಕಳ ಕಲಿಕೆಯ ಖುಷಿಯನ್ನು ಹೆಚ್ಚಿಸಲು, ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಜಿಲ್ಲಾಡಳಿತ ಕಂಡುಕೊಂಡಿರುವ ವಿನೂತನ ಉಪಾಯ. ಪರಿಣಾಮ ಇಲ್ಲಿನ ಬೆಟಗೇರಿಯ ಶರಣ ಬಸವೇಶ್ವರ ನಗರದ 6ನೇ ನಂಬರ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವರಾಂಡ ರೈಲ್ವೆ ಪ್ಲಾಟ್‌ಫಾರಂ ಆಗಿ ಬದಲಾಗಿದೆ. ನಿಲ್ದಾಣದಲ್ಲಿ ರೈಲು ಬಂದು ನಿಂತಿರುವ ರೀತಿಯಲ್ಲಿ ಶಾಲಾ ಕೊಠಡಿಗಳಿಗೆ ಬಣ್ಣ ಬಳಿಯಲಾಗಿದೆ. ದೂರದಿಂದ ನೋಡಿದರೆ ಇಲ್ಲೊಂದು ರೈಲು ನಿಲ್ದಾಣವೇ ತಲೆಯೆತ್ತಿದೆ ಎನ್ನುವ ಮಟ್ಟಿಗೆ ಕಲಾವಿದರು ಕೈಚಳಕ ತೋರಿದ್ದಾರೆ. 3ಡಿ ಪೇಂಟಿಂಗ್‌ ಬಳಸಿ ಶಾಲಾ ಕೊಠಡಿಗಳನ್ನೇ ರೈಲು ಬೋಗಿಗಳಾಗಿ ಅಲಂಕರಿಸಲಾಗಿದೆ.

ಈಗಾಗಲೇ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹಾರೋಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳನ್ನು ರೈಲು ಬೋಗಿ ಹೋಲುವಂತೆ ಬಣ್ಣ ಬಳಿದು ಸಿಂಗರಿಸಲಾಗಿದೆ. ಇದೇ ಮಾದರಿಯಲ್ಲಿ ಗದುಗಿನ ಶಾಲೆಗೂ ಚುಕುಬುಕು ರೈಲಿನ ಸ್ಪರ್ಶ ನೀಡಲಾಗಿದೆ. ಹಿಂದಿನ ಗದಗ ಜಿಲ್ಲಾಧಿಕಾರಿ ಮನೋಜ್‌ ಜೈನ್‌ ಮತ್ತು ಗದಗ ಶಹರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ.ರಡ್ಡೇರ ಅವರ ವಿಶೇಷ ಆಸಕ್ತಿಯ ಫಲವಾಗಿ ಇದು ಸಾಕಾರಗೊಂಡಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಹೆಚ್ಚಿಸುವುದು ಇದರ ಮುಖ್ಯ ಉದ್ದೇಶ.

ಶಾಲಾ ಕೊಠಡಿಗಳನ್ನು ಕುಂಚದ ಮೂಲಕ ರೈಲು ಬೋಗಿಗಳಂತೆ ಮಾರ್ಪಡಿಸಿದವರು ಬೆಂಗಳೂರಿನ ಎ.ಜೆ. ಆರ್ಟ್ಸ್‌ ಗ್ಯಾಲರಿಯ ಕಲಾವಿದರು. 250 ಅಡಿ ಉದ್ದ ಹಾಗೂ 13 ಅಗಲದ ಗೋಡೆ ಮೇಲೆ ಕಲಾವಿದರಾದ ಅನಿಲ ಜಾನ್, ಚಿದಾನಂದ ಯಾದವಾಡ, ಭೀಮರಾವ್ ಪಾತಾಳ ಅವರು ನೈಜತೆ ಪ್ರತಿಬಿಂಬಿಸುವಂತೆ ರೈಲಿನ ಚಿತ್ರ ಬಿಡಿಸಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ನಿರ್ಮಿತಿ ಕೇಂದ್ರದ ಅಧಿಕಾರಿಗಳ ಶ್ರಮವೂ ಇದರ ಹಿಂದಿದೆ.

1ರಿಂದ 6ನೇ ತರಗತಿವರೆಗಿನ ಕೊಠಡಿಗಳು ರೈಲಿನ ಬೋಗಿಗಳನ್ನು ಮತ್ತು 7ನೇ ತರಗತಿ ಕೋಣೆಯು ರೈಲಿನ ಎಂಜಿನ್‌ ಹೋಲುವಂತಿದೆ.

‘ನಮ್ಮ ಶಾಲೆಗೆ ರೈಲು ಬಂದಿದೆ. ಇದೇ ರೈಲಿನಲ್ಲಿ ಪ್ರವಾಸಕ್ಕೆ ಹೋಗಬೇಕು ಎಂದು ಸ್ನೇಹಿತರೊಂದಿಗೆ ಮಾತನಾಡಿಕೊಳ್ಳುತ್ತೇವೆ’ ಎಂದು ಶಾಲೆಯ ವಿದ್ಯಾರ್ಥಿನಿಯರಾದ ಪವಿತ್ರಾ ಗಾರವಾಡ, ಕಾವೇರಿ ಹೂಗಾರ, ಕುಸಮಾ ಗಿಂಡಿ ಸಂತಸ ವ್ಯಕ್ತಪಡಿಸಿದರು.

ಮಕ್ಕಳ ಹಾಜರಾತಿ ಹೆಚ್ಚಳ

ಶಾಲೆಗೆ ರೈಲಿನ ಸ್ಪರ್ಶ ಸಿಗುತ್ತಿದ್ದಂತೆ ಇದು ಆಕರ್ಷಣೆಯ ಕೇಂದ್ರವಾಗಿದೆ. ‘ಚಿತ್ರ ಬಿಡಿಸಿ, 16 ದಿನ ಆಗಿದೆ. ಮಕ್ಕಳ ಹಾಜರಾತಿ ಹೆಚ್ಚಿದೆ. ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವಲ್ಲಿ ಇದು ಖಂಡಿತ ಸಹಕಾರಿಯಾಗುತ್ತದೆ’ ಎಂದು ಮುಖ್ಯ ಶಿಕ್ಷಕ ಕೆ.ಸಿ.ನಭಾಪೂರ, ಶಿಕ್ಷಕಿ ಮಹಾಲಕ್ಷ್ಮಿ ತೊಂಡಿಹಾಳ ಅಭಿಪ್ರಾಯಪಟ್ಟರು.

‘ಈ ಶಾಲಾ ರೈಲಿಗೆ ಮುಖ್ಯಶಿಕ್ಷಕ ಸ್ಟೇಷನ್ ಮಾಸ್ಟರ್. ಸಹ ಶಿಕ್ಷಕರು ಟಿಟಿಗಳು ಆಗಿದ್ದಾರೆ ಎಂಬ ಭಾವನೆ ಮಕ್ಕಳಲ್ಲಿದೆ. ಇದು ಅವರ ಕಲಿಕಾ ಆಸಕ್ತಿ ಹೆಚ್ಚಿಸಿದೆ’ ಎಂದು ಅವರು ಹೇಳಿದರು.

ಶಾಲೆ ಅಂದರೆ ಮಕ್ಕಳಿಗೆ ಪ್ರೀತಿ ಹುಟ್ಟಬೇಕು. ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಈ ಪ್ರಯತ್ನ ಮಾಡಲಾಗಿದೆ.ದಾನಿಗಳು ಮುಂದೆ ಬಂದರೆ ಇದನ್ನು ಇನ್ನಷ್ಟು ಶಾಲೆಗಳಿಗೆ ವಿಸ್ತರಿಸಬಹುದು
ಎಂ.ಎ.ರಡ್ಡೇರ, ಗದಗ ಶಹರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !