ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

99422 ಹೊಸ ಮತದಾರರ ಸೇರ್ಪಡೆ

ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಚರ್ಚೆ
Last Updated 27 ಮಾರ್ಚ್ 2018, 11:24 IST
ಅಕ್ಷರ ಗಾತ್ರ

ತುಮಕೂರು: ಬರುವ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಜಿಲ್ಲೆಯ ಅರ್ಹ ಮತದಾರರು ಮತದಾನದಿಂದ ವಂಚಿತರಾಗದಂತೆ ಕ್ರಮವಹಿಸಲು 99,422 ಮತದಾರರನ್ನು ಹೊಸದಾಗಿ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸೋಮವಾರ ಚುನಾವಣೆ ಸಿದ್ಧತೆ ಕುರಿತು ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಚುನಾವಣಾ ಗುರುತಿನ ಚೀಟಿಗಾಗಿ ಹೊಸದಾಗಿ ನೋಂದಾಯಿಸಿಕೊಂಡ ಮತದಾರರ ಪೈಕಿ 44836 ಮಂದಿಗೆ ಮಾರ್ಚ್ 15ರ ವರೆಗೆ ಹೊಸ ಎಪಿಕ್‌ ಕಾರ್ಡುಗಳನ್ನು ವಿತರಿಸಲಾಗಿದೆ. ಉಳಿದ ಮತದಾರರಿಗೆ ಕೂಡಲೇ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮತದಾರರ ಪಟ್ಟಿಗೆ ಹೊಸದಾಗಿ ಹೆಸರನ್ನು ಸೇರಿಸಲು 2017ರ ಡಿಸೆಂಬರ್‌ 1ರಿಂದ 2018ರ ಜನವರಿ 22ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು. ಹೊಸದಾಗಿ ಪಟ್ಟಿಗೆ ಹೆಸರನ್ನು ಸೇರಿಸುವವರಿಗೆ ಈಗಲೂ ಕಾಲಾವಕಾಶವಿದ್ದು, ಜಿಲ್ಲೆಯ ಅರ್ಹ ಮತದಾರರು ಪ್ರಯೋಜನ ಪಡೆಯಬೇಕು ಎಂದರು.

ತುಮಕೂರು ನಗರದಲ್ಲಿ ಬೋಗಸ್ ಮತದಾರರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ ಎನ್ನುವ ದೂರು ಸತ್ಯಕ್ಕೆ ದೂರವಾದುದು. ಯಾವ ವ್ಯಕ್ತಿ ಎಪಿಕ್ ಕಾರ್ಡ್, ಪಡಿತರ ಚೀಟಿ, ಆಧಾರ್ ಕಾರ್ಡ್ ಹೊಂದಿರುವ ಸ್ಥಳದಲ್ಲಿಯೇ ವಾಸವಾಗಿದ್ದರೆ ಆತನನ್ನು ಅರ್ಹ ಮತದಾರನೆಂದು ಪರಿಗಣಿಸಲಾಗುವುದು. ಈ ದಾಖಲೆಗಳಿಲ್ಲದೇ ಇರುವವರನ್ನು ಪಟ್ಟಿಯಿಂದ ಕೈಬಿಡಲಾಗುವುದು ಎಂದು ತಿಳಿಸಿದರು.

ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರುಗಳನ್ನು ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ಸಂಖ್ಯೆ 0816–2272928 ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ದೂರುಗಳನ್ನು ಲಿಖಿತ ರೂಪದಲ್ಲಿ ನೇರವಾಗಿಯೂ ಹಾಗೂ ಜಾಲತಾಣ www.tumkuru.nic.in ಮೂಲಕ ದೂರುಗಳನ್ನು ನೋಂದಾಯಿಸಬಹುದು ಎಂದರು.

ಚುನಾವಣೆಯನ್ನು ಕ್ರಮಬದ್ಧ ಹಾಗೂ ನಿಷ್ಪಕ್ಷಪಾತವಾಗಿ ನಡೆಸುವ ನಿಟ್ಟಿನಲ್ಲಿ ಚುನಾವಣಾ ಆಯೋಗವು 3 ಮೊಬೈಲ್‌ ಆ್ಯಪ್‌ಗಳನ್ನು ಬಿಡುಗಡೆ ಮಾಡಿದೆ ಎಂದರು.

ರಾಜಕೀಯ ಪಕ್ಷಗಳು ಚುನಾವಣೆ ಪ್ರಚಾರ, ರ‍್ಯಾಲಿ, ಹೆಲಿಪ್ಯಾಡ್, ಧ್ವನಿವರ್ಧಕಗಳ ಬಳಕೆಗೆ ಅನುಮತಿಗಾಗಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಲು ಏಕಕವಾಕ್ಷಿ ‘ಸುವಿಧ’ ಆ್ಯಪ್‌, ಚುನಾವಣೆಗಾಗಿ ಬಳಸುವ ವಾಹನಗಳಿಗೆ ಜಿಪಿಆರ್‌ಎಸ್ ಅಳವಡಿಸಿ ಅವುಗಳ ಸಂಚಾರದ ಬಗ್ಗೆ ನಿಗಾವಹಿಸಲು ‘ಸುಗಮ’ ಆ್ಯಪ್‌ ಹಾಗೂ ಸಾರ್ವಜನಿಕರು ದೂರು ಸಲ್ಲಿಸಲು ‘ಸಮಾಧಾನ್’ ಆ್ಯಪ್‌ಗಳನ್ನು ಪರಿಚಯಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಅನೀಸ್ ಕಣ್ಮಣಿ ಜಾಯ್, ಚುನಾವಣಾ ತಹಶೀಲ್ದಾರ್ ಹನುಮಂತಪ್ಪ, ರಾಜಕೀಯ ಪಕ್ಷಗಳ ಮುಖಂಡರು, ಅಧಿಕಾರಿಗಳು ಹಾಜರಿದ್ದರು.

**

ನೀತಿ ಸಂಹಿತೆಯ ಪಾಠ

ಚುನಾವಣೆ ಘೋಷಣೆಯಾದ ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಮತದಾರರಿಗೆ ಹಣ, ವಸ್ತುಗಳ ಆಮಿಷವೊಡ್ಡುವಂತಿಲ್ಲ. ಪ್ರಚಾರಕ್ಕಾಗಿ ಫ್ಲೆಕ್ಸ್, ಬಂಟಿಂಗ್ಸ್‌ಗಳನ್ನು ಬಳಸುವಂತಿಲ್ಲ. ನೀತಿ ಸಂಹಿತೆ ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಉನ್ನತ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಮೋಹನ್‌ರಾಜ್‌ ಹೇಳಿದರು.

ಪಕ್ಷ ಅಥವಾ ಅಭ್ಯರ್ಥಿಯ ಪರವಾದ ಪ್ರಚಾರ ಮಾಹಿತಿಯನ್ನು ಸುದ್ದಿ ರೂಪದಲ್ಲಿ ಮಾಧ್ಯಮಗಳಲ್ಲಿ ಪ್ರಕಟಿಸಿದರೆ ಅದನ್ನು ಕಾಸಿಗಾಗಿ ಸುದ್ದಿ (ಪೇಯ್ಡ್ ನ್ಯೂಸ್) ಎಂದು ಪರಿಗಣಿಸಿ, ಚುನಾವಣಾ ವೆಚ್ಚಕ್ಕೆ ಸೇರಿಸಲಾಗುವುದು ಎಂದು ರಾಜಕೀಯ ಪಕ್ಷಗಳ ಮುಖಂಡರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT