ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳನ್ನು ಮೊಬೈಲ್‌ನಿಂದ ದೂರವಿರಿಸಿ’

ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ‘ಗುರುನಮನ 2022’
Last Updated 23 ಸೆಪ್ಟೆಂಬರ್ 2022, 4:55 IST
ಅಕ್ಷರ ಗಾತ್ರ

ಗದಗ: ‘ಮಕ್ಕಳಿಗೆ ಮೊಬೈಲ್ ಗೀಳಾಗಿ ಪರಿಣಮಿಸಿದ್ದು, ಇದು ಅವರ ಬುದ್ಧಿಶಕ್ತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೀಗಾಗಿ ಪಾಲಕರು ಮಕ್ಕಳ ಕೈಗೆ ಮೊಬೈಲ್ ಕೊಡಬಾರದು. ಮಕ್ಕಳನ್ನು ಮೊಬೈಲ್‌ನಿಂದ ದೂರವಿರಿಸಬೇಕು’ ಎಂದು ಶಿವಾನಂದಮಠದ ಶಿವಾನಂದ ಸ್ವಾಮೀಜಿ ಸಲಹೆ ನೀಡಿದರು.

ನಗರದ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ‘ಗುರುನಮನ-2022’ ಕಾರ್ಯಕ್ರಮದಲ್ಲಿ ಅವರು ಗುರುವಂದನೆ ಸ್ವೀಕರಿಸಿ ಮಾತನಾಡಿದರು.

‘ಐದು ವರ್ಷದ ಮಗು ಮೊಬೈಲ್‌ನ್ನು ಲೀಲಾಜಾಲವಾಗಿ ಬಳಸುತ್ತಾನೆ. ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದ್ದು, ಮಕ್ಕಳ ಪಾಲಿಗೆ ಮಾತ್ರ ಅಪಾಯದ ಕರೆಗಂಟೆ ಎನಿಸತೊಡಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ವಿಆರ್‌ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ವಿಜಯ ಸಂಕೇಶ್ವರ ಮಾತನಾಡಿ, ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆದರೂ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಹೊಡೆಯುವುದು, ದಂಡಿಸುವ ಮಾತೇ ಇಲ್ಲ. ಗುಣಮಟ್ಟದ ಶಿಕ್ಷಣದ ಜತೆಗೆ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರವನ್ನೂ ನೀಡಬೇಕು’ ಎಂದರು.

‘ಸಾಧನೆ ಹಿಂದೆ ಸಾಧಕರು ಸಾಕಷ್ಟು ಕಷ್ಟಗಳನ್ನು ಅನುಭವಿಸಿರುತ್ತಾರೆ. ಟೀಕೆ, ಸವಾಲುಗಳನ್ನು ಎದುರಿಸಿ ಗೆಲುವಿನ ದಡ ಮುಟ್ಟಿರುತ್ತಾರೆ. ಕೈಗೆತ್ತಿಕೊಂಡಿರುವ ಕೆಲಸದ ಮೇಲಿರುವ ಶ್ರದ್ಧೆ ಹಾಗೂ ಸತತ ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯ. ಮಕ್ಕಳು ಗುರಿಯೊಂದಿಗೆ ವಿದ್ಯಾಭ್ಯಾಸ ಮಾಡಿದರೆ ಉನ್ನತ ಸ್ಥಾನಕ್ಕೆ ಏರಬಹುದು’ ಎಂದು ಹೇಳಿದರು.

ಪುಣೆಯ ಸಂತಸಾಯಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಎಸ್.ಎನ್.ಡವಳೇಶ್ವರ, ಗುರೂಜಿ ಬಸವರಾಜ ಹಡಗಲಿ ಮಾತನಾಡಿದರು.

ಚಿಕ್ಕಟ್ಟಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಸ್.ವೈ.ಚಿಕ್ಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಸಾಧಕರನ್ನು ಕರೆದು ಸನ್ಮಾನಿಸುವ ಮೂಲಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಸ್ಫೂರ್ತಿ ತುಂಬುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿಆರ್‌ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ವಿಜಯ ಸಂಕೇಶ್ವರ, ಗುರೂಜಿ ಬಸವರಾಜ ಹಡಗಲಿ, ಪುಣೆಯ ಸಂತಸಾಯಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಎಸ್.ಎನ್. ಡವಳೇಶ್ವರ ಮತ್ತು ಸುನೀತಾ ಡವಳೇಶ್ವರ, ಧಾರವಾಡದ ಅಕ್ಷರ ತಾಯಿ ಲೂಸಿ ಸಾಲ್ಡಾನಾ, ನಿವೃತ್ತ ಬಿಇಒ ಶಂಕರ ಹೂಗಾರ, ಮಜಾಗಟ್ ಮಾಸ್ತರ ಎಂ.ಎಸ್.ಪೂಜಾರ, ನಿವೃತ್ತ ಪ್ರಾಚಾರ್ಯ ಎಂ.ಎಂ.ನರಗುಂದ ಅವರನ್ನು ಸನ್ಮಾನಿಸಲಾಯಿತು.

ಲಲಿತಾ ವಿಜಯ ಸಂಕೇಶ್ವರ ವೇದಿಕೆಯಲ್ಲಿದ್ದರು. ದೀಪಾ ಚಿಕ್ಕಟ್ಟಿ, ಕವಿತಾ ಮುದರಡ್ಡಿ, ಶೋಭಾ ಭಟ್ ಇದ್ದರು. ಪ್ರಾಚಾರ್ಯ ವಿನಯ್‌ ಚಿಕ್ಕಟ್ಟಿ ಸ್ವಾಗತಿಸಿದರು. ಪ್ರಾಚಾರ್ಯ ಬಿಪಿನ್ ಚಿಕ್ಕಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT