99 ಬ್ಯಾಚ್ ವಿದ್ಯಾರ್ಥಿಗಳಿಂದ ಗುರುವಂದನೆ: ಮುಶಿಗೇರಿ ಗ್ರಾಮದ ಸರ್ಕಾರಿ ಶಾಲೆ

ಗಜೇಂದ್ರಗಡ: ‘ಮುಶಿಗೇರಿ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ವಿದ್ಯಾರ್ಥಿಗಳಿಗೆ ಇಲ್ಲಿನ ಸರ್ಕಾರಿ ಪ್ರೌಢಶಾಲೆಯು ಒಂದು ವಿಶ್ವವಿದ್ಯಾಲಯದಂತೆ ಕಾರ್ಯನಿರ್ವಹಿಸಿದೆ’ ಎಂದು ಗದಗ ಡಯಟ್‌ನ ಹಿರಿಯ ಉಪನ್ಯಾಸಕ ಡಿ.ವೈ.ಅಸುಂಡಿ ಹೇಳಿದರು.
ತಾಲ್ಲೂಕಿನ ಮುಶಿಗೇರಿ ಗ್ರಾಮದಲ್ಲಿ ನಡೆದ 1999-2000ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘21 ವರ್ಷಗಳ ಹಿಂದೆ ಕಲಿತ ವಿದ್ಯಾರ್ಥಿಗಳು ಇಂದು ಒಂದೆಡೆ ಸೇರಿ ಇಂತಹ ಅಪರೂಪದ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ತರಿಸಿದೆ. ಮುಶಿಗೇರಿ ಗ್ರಾಮದಲ್ಲಿ ಸರಸ್ವತಿ ನೆಲೆಸಿದ್ದಾಳೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು, ಉನ್ನತ ಸ್ಥಾನಕ್ಕೇರಬೇಕು. ವಿದ್ಯೆಯು ಒಂದು ಶಕ್ತಿಯಾಗಿದ್ದು, ಅದಕ್ಕೆ ಸರಿಸಮಾನವಾದ ಸ್ಥಾನ ಮತ್ತೊಂದು ಇಲ್ಲ’ ಎಂದು ಹೇಳಿದರು.
ಬಸವನ ಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ತಳವಾರ ಮಾತನಾಡಿ, ‘ಮುಶಿಗೇರಿ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿದ್ದಾಗ, ಸಾವಿರಾರು ಗಿಡಗಳನ್ನು ನೆಡಲು ಮತ್ತು ತಂತಿಬೇಲಿ ನಿರ್ಮಿಸಲು ಅಂದು ಗ್ರಾಮದ ಹಿರಿಯರು ಸಹಕಾರ ನೀಡಿದ್ದರು’ ಎಂದು ಸ್ಮರಿಸಿದರು.
‘ಮಕ್ಕಳಿಗೆ ಭವಿಷ್ಯ ಕಟ್ಟಿಕೊಡುವ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವುದು ಶಿಕ್ಷಣ ಇಲಾಖೆಯ ಆಶಯ ಮತ್ತು ಕರ್ತವ್ಯವಾಗಿದೆ. ಯಾವ ಶಾಲೆಯಿಂದ ಎಂತಹ ಪ್ರತಿಭೆ ಹೊರಹೊಮ್ಮುತ್ತದೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಅಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಶಿಕ್ಷಕರು ಮಾಡುತ್ತಿದ್ದು, ಶಿಕ್ಷಕ ವೃತ್ತಿ ಹೆಮ್ಮೆ ತರಿಸಿದೆ’ ಎಂದರು.
ಹಳೆಯ ವಿದ್ಯಾರ್ಥಿ ಶಿವಾನಂದ ಕುಂಕದ ಮಾತನಾಡಿ, ‘ಬೆಳ್ಳಿ ಬಂಗಾರ, ವಜ್ರಕ್ಕಿಂತ ಮನುಕುಲಕ್ಕೆ ವಿದ್ಯೆಯನ್ನು ಕೊಡುಗೆಯಾಗಿ ನೀಡಿದ ಶಿಕ್ಷಕರ ಪಾತ್ರ ದೊಡ್ಡದು. ವಿದ್ಯೆ ಎಂಬುದು ಕದಿಯಲಾಗದ ಆಸ್ತಿ’ ಎಂದು ಹೇಳಿದರು.
ಎಂ.ಡಿ.ಸರಕಾವಸ್, ಬಿ.ಎಸ್.ಜಾಲಿಹಾಳ, ಎಂ.ಎಂ.ಹೆಬ್ಬಾಳ, ಬಿ.ಆರ್.ಗದಗಿನ, ಜೆ.ಪಿ.ಪಾಟೀಲ. ಕೆ.ಟಿ.ಲಮಾಣಿ ಮಾತನಾಡಿದರು.
ಶಂಕ್ರಮ್ಮ ಮಾಲಗಿತ್ತಿ, ಶರಣಪ್ಪ ನಾಯಕರ, ನಾಗರಾಜ ಅಂಗಡಿ, ಸಂತೋಷ ಕುಲಕರ್ಣಿ, ಗುರುಬಸವ ಬೇವಿನಮರದ, ಬಸವರಾಜ ಗೂಡೂರ, ವಾಸು ಬೇವಿನಗಿಡದ ಉಪಸ್ಥಿತರಿದ್ದರು. ಕಾನಪ್ಪಗೌಡ ಪಾಟೀಲ ನಿರೂಪಿಸಿದರು.
ವಿದ್ಯಾರ್ಥಿಗಳ ಮೊಗದಲ್ಲಿ ಸಂತಸದ ಹೊನಲು
ಎರಡು ದಶಕಗಳ ನಂತರ ನಡೆದ ಸ್ನೇಹ ಸಮ್ಮಿಲನ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಸ್ನೇಹಿತರು ಮತ್ತು ವಿದ್ಯೆ ಕಲಿಸಿದ ಗುರುಗಳನ್ನು ಕಣ್ತುಂಬಿಕೊಂಡ ವಿದ್ಯಾರ್ಥಿಗಳ ಮೊಗದಲ್ಲಿ ಸಂತಸ ಮನೆಮಾಡಿತ್ತು.
ಸ್ನೇಹ ಸಮ್ಮಿಲನ ಕಾರ್ಯಕ್ರಮ ಭಾವ ಸಮ್ಮಿಲನ ಕಾರ್ಯಕ್ರಮವಾಗಿಯೂ ಗಮನ ಸಳೆಯಿತು. ಸ್ನೇಹಿತರೊಂದಿಗೆ ವಿಚಾರ ವಿನಿಮಯ, ಹಾಡು ಹರಟೆ, ಹಾಸ್ಯ ಚಟಾಕಿ ಹಾರಿಸುವ ಮೂಲಕ 99 ಬ್ಯಾಚ್‌ನ ವಿದ್ಯಾರ್ಥಿಗಳೆಲ್ಲರೂ ಮತ್ತೊಮ್ಮೆ ಶಾಲಾ ದಿನಗಳತ್ತ ಜಾರಿದರು. ಇಡೀ ದಿನ ಸ್ನೇಹಿತರೊಂದಿಗೆ ಕಾಲ ಕಳೆದು, ಹಳೆಯ ನೆನಪುಗಳೊಂದಿಗೆ ಜೀಕಿದರು. ಕೊನೆಯಲ್ಲಿ ಬಾಯಿ ಸಿಹಿ ಮಾಡಿಕೊಂಡು ಮಧುರ ನೆನಪುಗಳೊಂದಿಗೆ ಮನೆಯ ಕಡೆಗೆ ಹೆಜ್ಜೆ ಹಾಕಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.