ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ: ಹನೂರು ಆರನೇ ಬಾರಿ ಮೊದಲ ಸ್ಥಾನ

Last Updated 21 ಮೇ 2022, 4:57 IST
ಅಕ್ಷರ ಗಾತ್ರ

ಹನೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಐದು ಬಾರಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿ ಗಮನ ಸೆಳೆದಿದ್ದ ಹನೂರು ಶೈಕ್ಷಣಿಕ ವಲಯ ಈ ಬಾರಿಯೂ ಉತ್ತಮ ಫಲಿತಾಂಶ ದಾಖಲಿಸಿದ್ದು, ಶೇ 96.89 ರಷ್ಟು ವಿದ್ಯಾರ್ಥಿಗಳ ತೇರ್ಗಡೆಯಾಗುವ ಮೂಲಕ ತನ್ನ ಮೊದಲನೇ ಸ್ಥಾನವನ್ನು ಉಳಿಸಿಕೊಂಡಿದೆ.

ಶೈಕ್ಷಣಿಕ ವಲಯದಲ್ಲಿ 18 ಸರ್ಕಾರಿ ಪ್ರೌಢಶಾಲೆ, 10 ಅನುದಾನಿತ ಶಾಲೆ, 11 ಖಾಸಗಿ ಶಾಲೆ ಹಾಗೂ 4 ವಸತಿ ಶಾಲೆಗಳಿವೆ. ಈ ಬಾರಿ, 1,993 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 1953 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 43 ಶಾಲೆಗಳ ಪೈಕಿ 7 ಸರ್ಕಾರಿ, 3 ವಸತಿ, 2 ಅನುದಾನಿತ ಹಾಗೂ 8 ಖಾಸಗಿ ಶಾಲೆಗಳು ಶೇ 100 ಫಲಿತಾಂಶ ಗಳಿಸಿವೆ. 10 ವಿದ್ಯಾರ್ಥಿಗಳು 600 ಕ್ಕಿಂತಲೂ ಅಧಿಕ ಅಂಕ ಗಳಿಸಿದ್ದಾರೆ. ಪಟ್ಟಣದ ಗೌತಮ್ ಇಂಗ್ಲಿಷ್‌ ಪಬ್ಲಿಕ್ ಶಾಲೆಯ ತೇಜಸ್ವಿನಿ 617 ಅಂಕಗಳನ್ನು ಪಡೆಯುವ ಮೂಲಕ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

‘ನಮ್ಮ ಶಾಲೆಯಿಂದ ಮೊದಲ ಬಾರಿಗೆ ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದರು. ವಿಶೇಷ ತರಗತಿಗಳನ್ನು ಆಯೋಜಿಸಿ ಮಕ್ಕಳನ್ನು ಪರೀಕ್ಷೆಗೆ ಸಜ್ಜುಗೊಳಿಸಿದ್ದರೂ, ಮೊದಲ ಬಾರಿ ಪರೀಕ್ಷೆ ಬರೆಯುತ್ತಿರುವುದರಿಂದ ಎಲ್ಲರಂತೆ ಶಾಲಾ ಆಡಳಿತ ಮಂಡಳಿಗೆ ಆತಂಕ ಇತ್ತು. 25 ಮಕ್ಕಳು ಹಾಜರಾಗಿದ್ದರು. ಈ ಪೈಕಿ 24 ಮಕ್ಕಳು ಉತ್ತಮ ಅಂಕಗಳನ್ನು ಪಡೆಯುವ ಮೂಲಕ ತೇರ್ಗಡೆಯಾಗಿದ್ದಾರೆ. ಅದರಲ್ಲೂ ತಾಲ್ಲೂಕಿಗೆ ಮೊದಲ ಸ್ಥಾನ ಪಡೆದಿರುವ ವಿದ್ಯಾರ್ಥಿ ನಮ್ಮ ಶಾಲೆಯ ವಿದ್ಯಾರ್ಥಿನಿ ಎಂಬುದು ಹೆಮ್ಮೆಯ ಸಂಗತಿ’ ಎಂದು ಗೌತಮ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ರವೀಂದ್ರ ಅವರು ಸಂತಸವನ್ನು ಹಂಚಿಕೊಂಡರು.

ಐದು ಬಾರಿ ಮೊದಲ ಸ್ಥಾನ ಗಳಿಸಿದ್ದ ಹನೂರು ಶೈಕ್ಷಣಿಕ ವಲಯಕ್ಕೆ ಈ ಬಾರಿಯ ಪರೀಕ್ಷೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು.

‘ಬಹುತೇಕ ಶಾಲೆಗಳಲ್ಲಿ ವಿಶೇಷ ತರಗತಿಗಳು, ರಾತ್ರಿ ತರಗತಿಗಳನ್ನು ನಡೆಸುವುದರ ಮುಖೇನ ಮಕ್ಕಳನ್ನು ಪರೀಕ್ಷೆಗೆ ಸಜ್ಜುಗೊಳಿಸಲಾಗಿತ್ತು. ಹಳೆಯ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿ ಕಠಿಣ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸುವ ಕೌಶಲದ ಬಗ್ಗೆ ತಿಳಿಸಿಕೊಟ್ಟಿದ್ದರ ಪರಿಣಾಮ ನಾವು ಈ ಬಾರಿಯೂ ಪ್ರಥಮ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು’ ಎನ್ನುತ್ತಾರೆ ಶಿಕ್ಷಕರು.

*
ಆರನೇ ಬಾರಿಗೆ ಪ್ರಥಮ ಸ್ಥಾನ ಗಳಿಸಿರುವುದು ಸಂತಸದ ವಿಚಾರ. ಮಕ್ಕಳಲ್ಲಿರುವ ಪರೀಕ್ಷೆ ಭಯವನ್ನು ಶಿಕ್ಷಕರು ಹೋಗಲಾಡಿಸಿದ್ದರಿಂದ ಈ ಸಾಧನೆ ಸಾಧ್ಯವಾಯಿತು.
-ಟಿ.ಆರ್. ಸ್ವಾಮಿ, ಬಿಇಒ, ಹನೂರು

*
ಸಾಧನೆ ಖುಷಿ ತಂದಿದೆ. ಶಿಕ್ಷಕರು ನೀಡಿದ ಉತ್ತಮ ಮಾರ್ಗದರ್ಶನ ಹಾಗೂ ತಂದೆ ತಾಯಿ ಕುಟುಂಬದವರ ಸಹಕಾರದಿಂದಾಗಿ ಉತ್ತಮ ಅಂಕಗಳು ಬಂದಿವೆ.
-ತೇಜಸ್ವಿನಿ, ಗೌತಮ್ ಇಂಗ್ಲಿಷ್ ಪಬ್ಲಿಕ್ ಶಾಲೆ, ಹನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT