ಸೋಮವಾರ, ಜುಲೈ 4, 2022
23 °C
ಬಹುತ್ವ ಕರ್ನಾಟಕ ಸತ್ಯಶೋಧನಾ ತಂಡ ಆರೋಪ

ಮುಸ್ಲಿಂ ಯುವಕನ ಹತ್ಯೆ– ತಿಕ್ಕಾಟಕ್ಕೆ ದ್ವೇಷ ಭಾಷಣವೇ ಕಾರಣ

ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

Prajavani

ಗದಗ: ನಾಲ್ಕು ವರ್ಷಗಳ ಹಿಂದೆ ನರಗುಂದ ಗುಡ್ಡದಲ್ಲಿ ಬಾವುಟ ಹಾರಿಸುವುದಕ್ಕೆ ಸಂಬಂಧಿಸಿದಂತೆ ನಡೆದ ಘರ್ಷಣೆಯಲ್ಲಿ ಹೊತ್ತಿಕೊಂಡ ಕಿಡಿ, ಜ.17ರಂದು ನಡೆದ ಮುಸ್ಲಿಂ ಯುವಕನ ಹತ್ಯೆವರೆಗೂ ವ್ಯಾಪಿಸಿದೆ. ಈ ಅವಧಿಯ ನಡುವೆ ಹಿಂದೂ ಮತ್ತು ಮುಸ್ಲಿಂ ಸಮುದಾಯದ ನಡುವೆ ಸಾಕಷ್ಟು ಹೊಡೆದಾಟ ಬಡಿದಾಟಗಳು ನಡೆದಿವೆ. ಆದರೆ, ಪೊಲೀಸರು ಎರಡೂ ಕಡೆಯವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸದ ಕಾರಣದಿಂದಲೇ ಪರಿಸ್ಥಿತಿ ಕೊಲೆ ನಡೆಯುವ ಹಂತಕ್ಕೆ ಹೋಯಿತು ಎಂದು ಬಹುತ್ವ ಕರ್ನಾಟಕ ಸತ್ಯಶೋಧನಾ ತಂಡ ಆರೋಪಿಸಿದೆ.

ಸದ್ಯ ಗದಗ ಜಿಲ್ಲೆಯ ನರಗುಂದ ಪಟ್ಟಣದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇದೆ. ಘಟನೆ ಸಂಬಂಧ ಪೊಲೀಸರು ಈಗಾಗಲೇ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. ಈ ನಡುವೆ, ‘ಇನ್ನು ಮುಂದೆ ಯಾರನ್ನಾದರೂ ಬಂಧಿಸಿದರೆ ನರ ಗುಂದ ಹೊತ್ತಿ ಉರಿಯುತ್ತದೆ’ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಮತ್ತೊಮ್ಮೆ ಪ್ರಚೋದನಕಾರಿ ಹೇಳಿಕೆ ನೀಡಿರುವುದು ಪಟ್ಟಣದ ಜನತೆಯಲ್ಲಿ ಭೀತಿ ಮೂಡಿಸಿದೆ.

ಜ.17ರಂದು ನರಗುಂದದಲ್ಲಿ ಹತ್ಯೆಯಾದ ಸಮೀರ್‌ ಪ್ರಕರಣಕ್ಕೂ ಹಿಂದಿನಿಂದಲೇ ಹಿಂದೂ ಮತ್ತು ಮುಸ್ಲಿಮರ ನಡುವೆ ಸಂಘರ್ಷಗಳು
ನಡೆಯುತ್ತ ಬಂದಿವೆ. ಐತಿಹಾಸಿಕ ನರಗುಂದ ಗುಡ್ಡ ಹಾಗೂ ಪಟ್ಟಣದ ಲೋದಿಗಲ್ಲಿಯಲ್ಲಿ ತಮ್ಮ ತಮ್ಮ ಧರ್ಮದ ಧ್ವಜಗಳನ್ನು ಹಾರಿಸುವ ಸಂಬಂಧ ತಿಕ್ಕಾಟಗಳು ನಡೆದಿವೆ. ನಂತರವೂ ಹಿಂಸಾತ್ಮಕ ಘಟನೆಗಳು ನಡೆದಿದ್ದು, ಅನೇಕ ಪ್ರಕರಣಗಳು ಪೊಲೀಸ್‌ ಠಾಣೆ ಮೆಟ್ಟಿಲು ಹತ್ತಿಲ್ಲ. ಸಂಧಾನದ ಮೂಲಕ ಇತ್ಯರ್ಥವಾಗಿವೆ. 

‘2021ರ ನ.17ರಂದು ನಡೆದ ಸಣ್ಣ ಘಟನೆ ಎರಡೂ ಸಮುದಾಯದ ನಡುವಿನ ದ್ವೇಷದ ಕೆಂಡಕ್ಕೆ ಬೀಸಣಿಗೆ ಆಯಿತು. ಅಲ್ಲಿಂದ ಜ.17
ರವರೆಗೆ ಪ್ರತಿ 15–20 ದಿನಗಳಿಗೊಮ್ಮೆ ಸಣ್ಣಪುಟ್ಟ ಘರ್ಷಣೆಗಳು ನಡೆಯುತ್ತಿ ದ್ದವು. ಎರಡೂ ಕಡೆಯವರಿಂದ ರ‍್ಯಾಲಿ, ಪ್ರತಿಭಟನೆಗಳು ನಡೆಯುತ್ತಿದ್ದವು. ಮೌಲಾನಾ ಆಜಾದ್‌ ಶಾಲೆ, ಸಿದ್ದೇಶ್ವರ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿತ್ತು. ಈ ಘಟನೆ ಸಂಬಂಧ ಪೊಲೀಸರು ಯಾರನ್ನೂ ಬಂಧಿಸಿಲ್ಲ. ಕಾಲೇಜಿನ ವಿದ್ಯಾರ್ಥಿಯೊಬ್ಬ ಬ್ಯಾಗ್‌ನಲ್ಲಿ ಚೂರಿ ಇಟ್ಟು ಕೊಂಡಿದ್ದ ಎಂದು ಆರೋಪಿಸಿ ಹಲ್ಲೆ ಮಾಡಿದ್ದರು. ‍ಪ್ರಾಂಶುಪಾಲರ ಎದುರಿ ನಲ್ಲೇ ಈ ಘಟನೆ ನಡೆದಿದ್ದರೂ ಪ್ರಕರಣ ದಾಖಲಾಗಿಲ್ಲ’ ಎನ್ನುತ್ತಾರೆ ಸತ್ಯಶೋಧನಾ ತಂಡದ ಶಬ್ಬೀರ್‌ ಅಹ್ಮದ್‌. 

‘ಜ.14ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಬಜರಂಗ ದಳದ ಮುಖಂಡ ಸಂಜು ನಲವಡೆ ಅವರನ್ನು ಪೊಲೀಸರು ಬಂಧಿಸಿದ್ದರೆ, ಸಮೀರ್‌ ಹತ್ಯೆ ನಡೆಯುತ್ತಿರಲಿಲ್ಲ. ಸಂಜು ಅವರು ದ್ವೇಷ ಭಾಷಣ ಮಾಡಿದರೂ, ಅವರ ವಿರುದ್ಧ ಪ್ರಕರಣ ದಾಖಲಿಸಲಿಲ್ಲ. ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಲಿಲ್ಲ’ ಎಂದು ಅವರು ದೂರಿದ್ದಾರೆ.

‘ಗದಗ ಜಿಲ್ಲಾ ಎಸ್‌ಪಿ ಶಿವಪ್ರಕಾಶ್‌ ದೇವರಾಜು ಅವರ ಹೇಳಿಕೆ ಆಧರಿಸಿ ಬಹುತ್ವ ಕರ್ನಾಟಕ ಸತ್ಯಶೋಧನಾ ತಂಡ ನರಗುಂದಕ್ಕೆ ಭೇಟಿ ನೀಡಿ ಸ್ಥಳೀಯರು, ಪೊಲೀಸರಿಂದ ವಿವರ ಕಲೆ ಹಾಕಿದೆ. ಸಂತ್ರಸ್ತ ಕುಟುಂಬಗಳು ಭಯದಲ್ಲಿವೆ. ತಮ್ಮದೇ ಕ್ಷೇತ್ರದಲ್ಲಿ ಕೊಲೆ ಆಗಿದ್ದರೂ ಸಚಿವ ಸಿ.ಸಿ.ಪಾಟೀಲ ಅವರು ಸೌಜನ್ಯಕ್ಕಾದರೂ ಭೇಟಿ ನೀಡಿಲ್ಲ. ತಹಶೀಲ್ದಾರ್‌, ಜಿಲ್ಲಾಧಿಕಾರಿ ಕೂಡ ಕುಟುಂಬದವರಿಗೆ ಸಾಂತ್ವನ ಹೇಳಿಲ್ಲ. ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಪೊಲೀಸರು ಬಂಧಿಸಬೇಕು. ದ್ವೇಷ ಭಾಷಣ, ಸೌಹಾರ್ದ ಕದಡುವ ಪ್ರಚೋದನಕಾರಿ ಹೇಳಿಕೆ ನೀಡುವವರಿಗೆ ಚುರುಕು ಮುಟ್ಟಿಸಬೇಕು’ ಎಂದು ಅವರು ಆಗ್ರಹಿಸಿದರು.

***

ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ನಾಲ್ವರನ್ನು ಬಂಧಿಸಲಾಗಿದೆ. ಘಟನೆ ನಡೆಯಲು ಪೊಲೀಸರ ನಿರ್ಲಕ್ಷ್ಯ ಕಾರಣ ಎಂಬುದು ಹೇಳಿಕೆ ನೀಡುವವರ ವೈಯಕ್ತಿಕ ಅಭಿಪ್ರಾಯ.

- ಶಿವಪ್ರಕಾಶ್‌ ದೇವರಾಜು, ಎಸ್‌ಪಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು