ಸೋಮವಾರ, ನವೆಂಬರ್ 18, 2019
20 °C
ಜಿಲ್ಲೆಯಾದ್ಯಂತ ಜಾರಿ; ಹೆಲ್ಮೆಟ್‌ ಧರಿಸಿದ ಶೇ 80ರಷ್ಟು ಸವಾರರು

ಫಲ ನೀಡಿದ ‘ನೋ ಪೆಟ್ರೋಲ್‌’ ಅಭಿಯಾನ

Published:
Updated:
Prajavani

ಗದಗ: ಹೆಲ್ಮೆಟ್‌ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌ ಧರಿಸುವಂತೆ ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ಪೊಲೀಸ್‌ ಇಲಾಖೆ ಜಾರಿಗೆ ತಂದ ‘ನೋ ಹೆಲ್ಮೆಟ್; ನೋ ಪೆಟ್ರೋಲ್’‌ ಅಭಿಯಾನ ಸಾಕಷ್ಟು ಫಲ ನೀಡಿದೆ.

ಸದ್ಯ ಶೇ 80ರಷ್ಟು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸಿ ವಾಹನ ಚಲಾಯಿಸುತ್ತಿದ್ದು, ಕಾನೂನು ಉಲ್ಲಂಘಿಸುವವರಿಗೆ ಪೊಲೀಸರು ದಂಡದ ಬಿಸಿ ಮುಟ್ಟಿಸುತ್ತಿದ್ದಾರೆ.

ಪಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಅ.10ರಿಂದ ಈ ಅಭಿಯಾನ ಆರಂಭಿಸಲಾಗಿದೆ. ಹೆಲ್ಮೆಟ್‌ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಪೆಟ್ರೋಲ್‌ ಇಲ್ಲ ಎನ್ನುವ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ. ಬಂಕ್‌ಗಳಲ್ಲಿ ಇದರ ಮೇಲೆ ನಿಗಾ ವಹಿಸಲು ಪೊಲೀಸರನ್ನೂ ನಿಯೋಜಿಸಲಾಗಿದೆ. ಹೀಗಾಗಿ ಸವಾರರು ಅನ್ಯ ದಾರಿ ಇಲ್ಲದೇ ಹೆಲ್ಮೆಟ್‌ ಖರೀದಿಸಿ ಬಳಸುತ್ತಿದ್ದಾರೆ.

ಈ ಅಭಿಯಾನ ಪ್ರಾರಂಭಿಸಲಾದ ಮೊದಲೆರಡು ದಿನ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೆಲ್ಮೆಟ್‌ ಧರಿಸದೆ ಬಂಕ್‌ಗೆ ಬಂದ ಸವಾರರು, ಪೆಟ್ರೋಲ್‌ ಹಾಕುವಂತೆ ಬಂಕ್‌ ಸಿಬ್ಬಂದಿ ಜತೆಗೆ ವಾಗ್ವಾದಕ್ಕೆ ಇಳಿದಿದ್ದರು. ಆದರೆ, ಅಲ್ಲೇ ಇದ್ದ ಪೊಲೀಸರು ಕಾನೂನು ಉಲ್ಲಂಘನೆಗೆ ಅವಕಾಶ ನೀಡಿರಲಿಲ್ಲ. ಪೊಲೀಸರು ಈ ಅಭಿಯಾನವನ್ನು ಸವಾಲಾಗಿ ಸ್ವೀಕರಿಸಿ ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದರಿಂದ ಇದು ಯಶಸ್ವಿಯಾಗಿದೆ.

ಹಿಂದೆ ಕೆ.ಸಂತೋಷಬಾಬು ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದಾಗ ಎರಡು ಬಾರಿ ಜಿಲ್ಲೆಯಲ್ಲಿ ಹೆಲ್ಮೆಟ್‌ ಕಡ್ಡಾಯಗೊಳಿಸಿದ್ದರು.ಆದರೆ, ಬಿಸಿಲು, ದೂಳು ಹೆಚ್ಚು ಇರುವುದರಿಂದ ಸವಾರರು ಈ ನಿಯಮವನ್ನು ಗಾಳಿಗೆ ತೂರಿದ್ದರು. ಸವಾರರಿಗೆ ಕಿರಿಕಿರಿಯಾಗುತ್ತದೆ ಎಂಬ ಕಾರಣಕ್ಕೆ ಪೊಲೀಸರೂ ಹೆಲ್ಮೆಟ್‌ ಧರಿಸುವುದರಿಂದ ಸ್ವಲ್ಪ ವಿನಾಯ್ತಿ ನೀಡಿದ್ದರು.

ಆದರೆ, ಮೋಟಾರು ವಾಹನ ತಿದ್ದುಪಡಿ ಮಸೂದೆ ಜಾರಿಯಾದ ಬಳಿಕ, ಈಗಿನ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ಅವರು ಹೆಲ್ಮೆಟ್‌ ಕಡ್ಡಾಯಗೊಳಿಸಿದ್ದಾರೆ. ಹೆಲ್ಮೆಟ್‌ ಧರಿಸದ ಸವಾರರಿಗೆ ಯಾವುದೇ ಮುಲಾಜಿಲ್ಲದೆ ದಂಡ ವಿಧಿಸಿ, ಪ್ರಕರಣ ದಾಖಲಿಸುವಂತೆಯೂ ಸಿಬ್ಬಂದಿಗೆ ಸೂಚಿಸಿದ್ದಾರೆ. ಹೀಗಾಗಿ ಪೆಟ್ರೋಲ್‌ ಬಂಕ್‌ಗಳಲ್ಲಿ ಮಾತ್ರವಲ್ಲ, ರಸ್ತೆಯ ಪ್ರಮುಖ ವೃತ್ತಗಳಲ್ಲಿ ಕಾದು ನಿಲ್ಲುವ ಪೊಲೀಸರು ಹೆಲ್ಮೆಟ್‌ ಧರಿಸದ ಸವಾರರಿಗೆ ದಂಡ ವಿಧಿಸುತ್ತಿದ್ದಾರೆ. ಹೆಲ್ಮೆಟ್‌ ಧರಿಸದೇ ವಾಹನ ಚಲಾಯಿಸಿದರೆ ₹ 1 ಸಾವಿರ ದಂಡ ತೆರಬೇಕಾಗುತ್ತದೆ. ಹೀಗಾಗಿ ಹೆಚ್ಚಿನ ಸವಾರರು, ದಂಡ ಕಟ್ಟುವ ಬದಲು ಅದೇ ಹಣದಲ್ಲಿ ಹೆಲ್ಮೆಟ್‌ ಖರೀದಿಸಲು ಆಸಕ್ತಿ ತೋರಿಸುತ್ತಿದ್ದಾರೆ.

ಈ ಅಭಿಯಾನ ಪ್ರಾರಂಭಗೊಂಡ ಬೆನ್ನಲ್ಲೇ, ಜಿಲ್ಲೆಗೆ ಹೆಲ್ಮೆಟ್‌ ಮಾರಾಟಗಾರರು ದಾಂಗುಡಿಯಿಟ್ಟಿದ್ದಾರೆ. ಪ್ರಮುಖ ವೃತ್ತಗಳಲ್ಲಿ ₹150ರಿಂದ ಆರಂಭಿಸಿ ₹1,500 ಮೌಲ್ಯದವರೆಗಿನ ವಿವಿಧ ಕಂಪೆನಿಗಳ ಹೆಲ್ಮೆಟ್‌ಗಳು ಲಭಿಸುತ್ತಿವೆ. ಸದ್ಯ ‘ದಂಡ’ದ ಬಿಸಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ, ಕೆಲವು ಸವಾರರು ‘ಐಎಸ್‌ಐ’ ಮಾರ್ಕ್‌ ಇಲ್ಲದ ಕಳಪೆ ಗುಣಮಟ್ಟದ ಹೆಲ್ಮೆಟ್‌ ಖರೀದಿಸಿ ಬಳಸುತ್ತಿದ್ದಾರೆ. ಪೊಲೀಸರು ಇನ್ನೊಂದು ವಾರದ ನಂತರ ಈ ಅಭಿಯಾನ ನಿಲ್ಲಿಸುತ್ತಾರೆ, ನಂತರ ಹೆಲ್ಮೆಟ್‌ ಕೇಳುವರಿಲ್ಲ ಎಂದು ಸವಾರರು ಮಾತನಾಡಿಕೊಳ್ಳುತ್ತಿದ್ದಾರೆ.

‘ಆದರೆ, ಪೊಲೀಸ್‌ ಇಲಾಖೆ ಐಎಸ್‌ಐ ಮಾರ್ಕ್‌ ಇಲ್ಲದ ಹೆಲ್ಮೆಟ್‌ ವಿರುದ್ಧವೂ ಕಾರ್ಯಾಚರಣೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ವಿಮೆ, ಹೊಗೆ ತಪಾಸಣೆ ಪ್ರಮಾಣಪತ್ರ ಸೇರಿದಂತೆ ವಾಹನಕ್ಕೆ ಸಂಬಂಧಿಸಿದ ಉಳಿದ ದಾಖಲೆಗಳನ್ನೂ ಸವಾರರು ತಮ್ಮ ಬಳಿ ಇಟ್ಟುಕೊಂಡಿರಬೇಕು, ಇಲ್ಲದಿದ್ದರೆ ದಂಡ ಬೀಳುತ್ತದೆ’ ಎನ್ನುತ್ತಾರೆ ಸಂಚಾರ ಪೊಲೀಸರು.

ಪ್ರತಿಕ್ರಿಯಿಸಿ (+)