7
ಬೆಟಗೇರಿ ಬಸ್ ನಿಲ್ದಾಣದ ಸಮೀಪ ₹ 2 ಕೋಟಿ ವೆಚ್ಚದಲ್ಲಿ ನಿರ್ಮಾಣ; ಶೀಘ್ರ ಬಳಕೆಗೆ ಮುಕ್ತ

ತಲೆ ಎತ್ತಲಿದೆ ಹೈಟೆಕ್‌ ತರಕಾರಿ ಮಾರುಕಟ್ಟೆ

Published:
Updated:
ಬೆಟಗೇರಿ ಬಸ್‌ ನಿಲ್ದಾಣದ ಸಮೀಪದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೈಟೆಕ್ ತರಕಾರಿ ಮಾರುಕಟ್ಟೆ

ಗದಗ: ಬೆಟಗೇರಿ ಬಸ್ ನಿಲ್ದಾಣದ ಸಮೀಪದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೈಟೆಕ್‌ ತರಕಾರಿ ಮಾರುಕಟ್ಟೆ ಕಾಮಗಾರಿ ಶೇ 95ರಷ್ಟು ಪೂರ್ಣಗೊಂಡಿದ್ದು, ಶೀಘ್ರದಲ್ಲೇ ವ್ಯಾಪಾರಿಗಳ, ಗ್ರಾಹಕರ ಬಳಕೆಗೆ ಮುಕ್ತಗೊಳ್ಳಲಿದೆ.

ಎರಡೂವರೆ ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ. ನಗರಸಭೆಯಿಂದ ಅಂದಾಜು ₹ 2 ಕೋಟಿ ವೆಚ್ಚದಲ್ಲಿ ಈ ತರಕಾರಿ ಮಾರುಕಟ್ಟೆ ನಿರ್ಮಿಸುತ್ತಿದೆ. ಇಲ್ಲಿ 50ಕ್ಕೂ ಹೆಚ್ಚು ಸುಸಜ್ಜಿತ ತರಕಾರಿ ಮಾರಾಟ ಮಳಿಗೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಸದ್ಯ ಮಳಿಗೆಗೆ ವಿದ್ಯುತ್‌ ದೀಪ, ಫ್ಯಾನ್‌ ಅಳವಡಿಕೆ ಕಾರ್ಯ ಭರದಿಂದ ನಡೆದಿದೆ. ಗೋಡೆಗಳಿಗೆ ಟೈಲ್ಸ್‌ ಅಳವಡಿಸುವ ಕಾರ್ಯ ನಡೆಯುತ್ತಿದೆ. ಪ್ರತಿಯೊಂದು ಮಳಿಗೆ ಕಳೆಗೆ, ತರಕಾರಿ ಸಂಗ್ರಹಿಸಿ ಇಡಲು ನೆಲಮಾಳಿಗೆ ಸೌಲಭ್ಯ ಕಲ್ಪಿಸಲಾಗಿದೆ.

‘ಬೆಟಗೇರಿಯ ಹೈಟೆಕ್‌ ತರಕಾರಿ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಕಾರ್ಯ ಜನವರಿ 26ರ ಒಳಗೆ ಪೂರ್ಣವಾಗಬೇಕಿತ್ತು. ಸ್ವಲ್ಪ ವಿಳಂಬವಾಗಿದೆ. ಸದ್ಯ ಶೇ 95ರಷ್ಟು ಕೆಲಸ ಮುಗಿದಿದೆ. ಮಾರುಕಟ್ಟೆಯ ಸಮೀಪ ಸಾರ್ವಜನಿಕ ಶೌಚಾಲಯ ನವೀಕರಣಕ್ಕೂ ನಗರಸಭೆಯಿಂದ ₹ 5 ಲಕ್ಷ ಅನುದಾನ ಒದಗಿಸಲಾಗಿದೆ. ನಗರಸಭೆಗೆ ಸೇರಿದ ಜಾಗದಲ್ಲಿ 50ಕ್ಕೂ ಹೆಚ್ಚು ಕಿರಾಣಿ ಮಳಿಗೆಗೆಗಳನ್ನು ನಿರ್ಮಾಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ’ ಎಂದು ನಗರಸಭೆ ಅಧ್ಯಕ್ಷ ಬಿ.ಬಿ.ಅಸೂಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮೂಲ ಸೌಲಭ್ಯಕ್ಕೆ ಆದ್ಯತೆ ನೀಡಿ: ಬೆಟಗೇರಿ ಬಸ್‌ ನಿಲ್ದಾಣ ಪಕ್ಕದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಗರಸಭೆಯು ಡಿಎಸ್‌ಎಂಟಿ ಯೋಜನೆ ಅಡಿ 2003ರಲ್ಲಿ ತರಕಾರಿ ಮಾರುಕಟ್ಟೆ­ಯನ್ನು ನಿರ್ಮಿಸಿತ್ತು. ಆರಂಭದಲ್ಲಿ ವ್ಯಾಪಾರ ನಡೆಯಿತು. ನಂತರ ವ್ಯಾಪಾರಿಗಳು ಮೂಲಸೌಕರ್ಯ ಅಭಿವೃದ್ಧಿಯಾಗಿಲ್ಲ ಎಂದು ಟೆಂಗಿನಕಾಯಿ ಬಜಾರ್‌ ರಸ್ತೆ ಅಕ್ಕಪಕ್ಕದಲ್ಲಿಯೇ ವ್ಯಾಪಾರ, ವಹಿವಾಟು ಆರಂಭಿಸಿದರು. ಇದರಿಂದ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಸಾಕಷ್ಟು ತೊಂದರೆ ಆಗತೊಡಗಿತು. ಮೂರು ವರ್ಷಗಳ ಹಿಂದೆ, ಈಗ ನಿರ್ಮಾಣಗೊಳ್ಳುತ್ತಿರುವ ಮಾರುಕಟ್ಟೆ ಸಮೀಪದ ಖಾಲಿ ಸ್ಥಳಕ್ಕೆ ತರಕಾರಿ ಮಾರುಕಟ್ಟೆ ಸ್ಥಳಾಂತರಿಸಲಾಗಿದೆ.

‘ಹೊಸ ಮಾರುಕಟ್ಟೆ ನಿರ್ಮಾಣ ಕಾರ್ಯ ಬೇಗ ಮುಗಿಸಿ, ಬೇಗ ಬಳಕೆಗೆ ಅವಕಾಶ ನೀಡಬೇಕು. ನೀರು, ವಿದ್ಯುತ್‌ ಸೇರಿ ಮೂಲಸೌಕರ್ಯ ಒದಗಿಸಲು ನಗರಸಭೆ ಕ್ರಮ ವಹಿಸಬೇಕು’ ಎಂದು ತರಕಾರಿ ವ್ಯಾಪಾರಿಗಳು ಒತ್ತಾಯಿಸಿದರು.

‘ಹೈಟೆಕ್‌ ಮಾರುಕಟ್ಟೆ ವ್ಯಾಪ್ತಿಯಲ್ಲಿ 50 ತರಕಾರಿ ಮಾರಾಟ ಮಳಿಗೆಗಳು ಸೇರಿ ಒಟ್ಟು 120ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ. ಮೂಲ ಸೌಲಭ್ಯ ಒದಗಿಸಲು ಆದ್ಯತೆ ನೀಡಲಾಗುವುದು’ ಎಂದು ನಗರಸಭೆ ಪೌರಾಯುಕ್ತ  ಮನ್ಸೂರ್‌ ಅಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಟಗೇರಿ ಹೈಟೆಕ್‌ ತರಕಾರಿ ಮಾರುಕಟ್ಟೆ 15 ದಿನದೊಳಗೆ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ. ಇದನ್ನು ಮಾದರಿ ತರಕಾರಿ ಮಾರುಕಟ್ಟೆ ಆಗಿಸಲು ಕ್ರಮ ವಹಿಸಲಾಗುವುದು.
ಮನ್ಸೂರ್‌ ಅಲಿ, ಪೌರಾಯುಕ್ತ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !