ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಹಿಜಾಬ್‌ಗೆ ಅವಕಾಶ ಕಲ್ಪಿಸಲು ವಿದ್ಯಾರ್ಥಿನಿಯರ ಆಗ್ರಹ

Last Updated 8 ಫೆಬ್ರುವರಿ 2022, 13:28 IST
ಅಕ್ಷರ ಗಾತ್ರ

ಗದಗ: ಹಿಜಾಬ್‌ ಧರಿಸಿ ಬಂದಿದ್ದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಸಿಬ್ಬಂದಿ ತರಗತಿಗೆ ಸೇರಿಸದ ಕಾರಣ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರು ಪ್ರಾಂಶುಪಾಲರು ಹೊರಡಿಸಿದ್ದ ಆದೇಶ ಧಿಕ್ಕರಿಸಿ ಹಿಜಾಬ್‌ ಧರಿಸಿ ಬಂದಿದ್ದರು. ಅವರು ಹಿಜಾಬ್‌ ಧರಿಸಿ ಬರುವುದಾದರೆ ನಾವು ಕೂಡ ಕೇಸರಿ ಶಾಲು ಹಾಕಿಕೊಂಡು ಬರುತ್ತೇವೆ ಎಂದು ಕೆಲವು ವಿದ್ಯಾರ್ಥಿನಿಯರು ಸೋಮವಾರ ಸಮವಸ್ತ್ರದ ಮೇಲೆ ಕೇಸರಿ ಶಾಲು ಹಾಕಿಕೊಂಡು ಬಂದಿದ್ದರು. ಈ ಘಟನೆ ನಂತರ, ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಸಮವಸ್ತ್ರದಲ್ಲಿಯೇ ಬರಬೇಕು ಎಂದು ಪ್ರಾಂಶುಪಾಲರು ಆದೇಶ ಹೊರಡಿಸಿದ್ದರು.

ಮಂಗಳವಾರ ಬೆಳಿಗ್ಗೆ ಕಾಲೇಜಿಗೆ ಬಂದ ಪ್ರತಿಯೊಬ್ಬ ವಿದ್ಯಾರ್ಥಿನಿಯರನ್ನೂ ಸಿಬ್ಬಂದಿ ಪರಿಶೀಲಿಸಿದರು. ಹಿಜಾಬ್‌ ಧರಿಸಿದ್ದ ವಿದ್ಯಾರ್ಥಿನಿಯರಿಗೆ ತರಗತಿಗೆ ಪ್ರವೇಶ ನೀಡಲಿಲ್ಲ. ಇದರಿಂದ ಕೆರಳಿದ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

‘ಇಷ್ಟು ದಿವಸ ಇಲ್ಲದ ಕಾನೂನು ಈಗ ಏಕೆ ಎಂದು ತಿಳಿಯುತ್ತಿಲ್ಲ. ಮೊದಲಿನಿಂದಲೂ ನಾವು ಕಾಲೇಜಿಗೆ ಹಿಜಾಬ್‌ ಧರಿಸಿಯೇ ಬರುತ್ತಿದ್ದೇವೆ. ಸೋಮವಾರ ಕೇಸರಿ ಶಾಲು ಹಾಕಿಕೊಂಡು ಬಂದಿದ್ದ ವಿದ್ಯಾರ್ಥಿನಿಯರು ಇಂದು ತರಗತಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದಾರೆ. ನಮ್ಮನ್ನು ಮಾತ್ರ ಹೊರ ಹಾಕಿರುವುದು ಯಾವ ನ್ಯಾಯ? ಕಾಲೇಜಿಗೆ ದಾಖಲಾತಿ ಮಾಡುಕೊಳ್ಳುವ ಮುನ್ನವೇ ಹಿಜಾಬ್‌ಗೆ ಅವಕಾಶ ಇಲ್ಲ ಎಂದು ಹೇಳಿದ್ದರೆ ನಾವು ಸೇರುತ್ತಿರಲಿಲ್ಲ’ ಎಂದು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಮಧ್ಯ ಪ್ರವೇಶಿಸಿ ವಿದ್ಯಾರ್ಥಿಗಳ ಮನ ಒಲಿಸಿ ಕಳುಹಿಸಿದರು. ಬಳಿಕ ಕಾಲೇಜಿಗೆ ರಜೆ ಘೋಷಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT