ಅವಸಾನದ ಅಂಚಿನಲ್ಲಿ ಐತಿಹಾಸಿಕ ಕೋಟೆ!

7
‘ಹುಡೆ’ಗಳು ಇರುವ ಊರಲ್ಲಿ ‘ಹುಡೇದ’ಎಂಬ ಅಡ್ಡ ಹೆಸರಿನ ಮನೆತನಗಳು

ಅವಸಾನದ ಅಂಚಿನಲ್ಲಿ ಐತಿಹಾಸಿಕ ಕೋಟೆ!

Published:
Updated:
Deccan Herald

ಲಕ್ಷ್ಮೇಶ್ವರ: ಪಟ್ಟಣದ ಹಳೆಯ ಪೊಲೀಸ್ ಠಾಣೆಯ ಸಮೀಪದಲ್ಲಿರುವ ಐತಿಹಾಸಿಕ ಮಣ್ಣಿನ ಕೋಟೆ ಸಮರ್ಪಕ ನಿರ್ವಹಣೆ ಇಲ್ಲದೆ ಅವಸಾನದ ಅಂಚಿನಲ್ಲಿದೆ.

‘ಲಕ್ಷ್ಮಣರಸ’ಎಂಬ ರಾಜನು 6ನೇ ಶತಮಾನದಲ್ಲಿ ಈ ಕೋಟೆ ಕಟ್ಟಿಸಿದ ಎನ್ನುತ್ತದೆ ಇತಿಹಾಸ.‘ಲಕ್ಷ್ಮೇಶ್ವರವು ಮಿರಜ್‌ ಸಂಸ್ಥಾನದ ಆಡಳಿತದ ಭಾಗವಾದ ನಂತರ, ರಾಜವಂಶಸ್ಥರು ಈ ಕೋಟೆಯನ್ನೇ ತಮ್ಮ ನಿವಾಸವಾಗಿ ಬದಲಿಸಿಕೊಂಡರು ಎಂದು ಪಟ್ಟಣದ ನಿವಾಸಿ, ನಿವೃತ್ತ ಶಿಕ್ಷಕ ಹಾಗೂ ಲೇಖಕ ಪೂರ್ಣಾಜಿ ಖರಾಟೆ ಹೇಳುತ್ತಾರೆ.

ಈ ಮಣ್ಣಿನ ಕೋಟೆಯು ಅನೇಕ ರಹಸ್ಯಗಳನ್ನು ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿದ್ದು ಇಂದಿಗೂ ಇದು ಜನರ ಕೌತುಕದ ತಾಣವಾಗಿದೆ. ರಾಜಾಡಳಿತ ಇದ್ದ ಕಾಲದಲ್ಲಿ ಊರನ್ನು ಕಾಯಲು ಎತ್ತರವಾದ ಕೋಟೆಗಳನ್ನು ಕಟ್ಟಲಾಗುತ್ತಿತ್ತು. ಇವುಗಳನ್ನು ಮಣ್ಣಿನಿಂದಲೇ ನಿರ್ಮಿಸುತ್ತಿದ್ದುದು ವಿಶೇಷ. ಈ ಮಣ್ಣಿನ ಕೋಟೆಗಳನ್ನು ಸ್ಥಳೀಯವಾಗಿ ‘ಹುಡೆ’ ಎಂದೂ, ಅವುಗಳನ್ನು ಕಾಯುತ್ತಿದ್ದವರಿಗೆ ‘ಹುಡೇದ’ಎಂದೂ ಕರೆಯುತ್ತಿದ್ದರು. ಈಗಲೂ ‌ಹುಡೆಗಳು ಇರುವ ಊರಲ್ಲಿ ಹುಡೇದ ಎಂಬ ಅಡ್ಡ ಹೆಸರಿನ ಮನೆತನಗಳೂ ಇರುವುದನ್ನು ಗಮನಿಸಬಹುದು.

ಪಟ್ಟಣದ ಈ ಮಣ್ಣಿನ ಕೋಟೆ ಅಂದಾಜು 8 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿದೆ. ಗೋಡೆಗಳು 25 ಅಡಿ ಎತ್ತರವಿದ್ದು, ನಾಲ್ಕರಿಂದ ಐದು ಅಡಿ ಅಗಲ ಹೊಂದಿವೆ. ಕೋಟೆಯ ಪೂರ್ವ ದಿಕ್ಕಿಗೆ ಸುಮಾರು 50 ಅಡಿ ಎತ್ತರವಾದ ಕಾವಲು ಗೋಪುರ ಇದೆ. ಈ ಗೋಪುರದ ಮೇಲೆ ನಿಂತು ಸೈನಿಕರು ಕೋಟೆಯನ್ನು ಕಾಯುತ್ತಿದ್ದರು. ವೈರಿಗಳು ನುಸುಳುವುದನ್ನು ದೂರದಿಂದಲೇ ಪತ್ತೆ ಹಚ್ಚಿ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡುತ್ತಿದ್ದರು. ಕೋಟೆಯೊಳಗೆ ವೈರಿಗಳು ನುಸುಳಬಾರದು ಎಂದು ಕೋಟೆಯ ಸುತ್ತಲೂ ಆಳವಾದ ಕಂದಕ ತೆಗೆದು, ಅದರಲ್ಲಿ ನೀರು ತುಂಬಿಸಲಾಗುತ್ತಿತ್ತು. ಈ ಕೋಟೆಯ ಸುತ್ತ ಈಗಲೂ ಅದರ ಕುರುಹುಗಳು ಕಾಣಿಸುತ್ತವೆ.

ಮಣ್ಣಿನ ಕೋಟೆ ಅತಿಕ್ರಮಣ: ಈ ಐತಿಹಾಸಿಕ ಮಣ್ಣಿನ ಕೋಟೆ ಜಾಗವನ್ನು ಒತ್ತುವರಿ ಮಾಡಲಾಗಿದೆ. ಕೋಟೆ ಆವರಣದಲ್ಲಿ ಪೊಲೀಸ್ ಕ್ವಾರ್ಟರ್ಸ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಉಪ ನೋಂದಣಿ ಕಚೇರಿ, ನ್ಯಾಯಾಲಯ ನಿರ್ಮಿಸಲಾಗಿದೆ. ಇದರಿಂದ ಕೋಟೆಯ ಕುರುಹುಗಳು ಒಂದೊಂದಾಗಿ ನಾಶವಾಗುತ್ತಿವೆ. ಪೂರ್ವ ದಿಕ್ಕಿನಲ್ಲಿದ್ದ ಕೋಟೆ ಬಾಗಿಲು ಸಂಪೂರ್ಣ ಹಾಳಾಗಿದೆ. ಸುತ್ತಲಿನ ಗೋಡೆಗಳು ಕುಸಿದು ಬಿದ್ದಿವೆ.

ಗೋಪುರ ಕಟ್ಟಿರುವ ಜಾಗ ಅತ್ಯಂತ ವಿಶಾಲವಾಗಿದೆ. ಕೋಟೆಯನ್ನು ಪ್ರವೇಶಿಸಲು ಬಾಗಿಲು ಇತ್ತು. ಆದರೆ, ಕೋಟೆ ಅವಸಾನದತ್ತ ಸಾಗಿದಂತೆ ಈ ಬಾಗಿಲು ಮುಚ್ಚಲಾಗಿದೆ. ಮಳೆ, ಗಾಳಿಗೆ ಗೋಪುರ ಕುಸಿಯುತ್ತಲೇ ಇದೆ.

ಕೋಟೆಯ ಪ್ರವೇಶ ಬಾಗಿಲಿನಲ್ಲಿ ಪುರಾತತ್ವ ಇಲಾಖೆಯಿಂದ ಕಾಟಾಚಾರಕ್ಕಾಗಿ ಫಲಕ ಅಳವಡಿಸಲಾಗಿದೆ. ಕೋಟೆಯೊಳಗೆ ಅಲ್ಲಲ್ಲಿ ಶಾಸನಗಳು ಹಾಗೂ ಬರಹಗಳು ಇವೆ. ಅವುಗಳ ಕುರಿತು ಅಧ್ಯಯನ ನಡೆಸಿದರೆ, ಇದರ ಅಭಿವೃದ್ಧಿಗೆ ಕ್ರಮ ವಹಿಸಿದರೆ, ಈ ಐತಿಹಾಸಿಕ ಕೋಟೆ ಉಳಿಯಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !