‘ಮೋದಿ ಸೇನೆ’ ಹೇಳಿಕೆ: ಮೋದಿ, ಯೋಗಿ ವಿರುದ್ಧ ಕ್ರಮಕ್ಕೆ ಎಚ್.ಕೆ. ಪಾಟೀಲ ಆಗ್ರಹ

ಶನಿವಾರ, ಏಪ್ರಿಲ್ 20, 2019
23 °C

‘ಮೋದಿ ಸೇನೆ’ ಹೇಳಿಕೆ: ಮೋದಿ, ಯೋಗಿ ವಿರುದ್ಧ ಕ್ರಮಕ್ಕೆ ಎಚ್.ಕೆ. ಪಾಟೀಲ ಆಗ್ರಹ

Published:
Updated:
Prajavani

ಗದಗ: ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಚುನಾವಣಾ ಆಯೋಗವು ಕಣದಿಂದ ಅನರ್ಹಗೊಳಿಸಬೇಕು ಹಾಗೂ ಭಾರತೀಯ ಸೇನೆಯನ್ನು ‘ಮೋದಿ ಸೇನೆ’ ಎಂದು ಕರೆದು ಅವಮಾನಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ಕ್ರಮ ಕೈಗೊಳ್ಳಬೇಕು’ ಕೆಪಿಸಿಸಿ ಪ್ರಚಾರ ಸಮಿತಿ ಅದ್ಯಕ್ಷ ಎಚ್.ಕೆ. ಪಾಟೀಲ ಒತ್ತಾಯಿಸಿದರು.

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪುಲ್ವಾಮಾ ಘಟನೆಯನ್ನು ಟಿವಿಯಲ್ಲಿ ಕಂಡ ಚಿಕ್ಕ ಮಕ್ಕಳು ಕೂಡ ಕಣ್ಣೀರು ಹಾಕಿದ್ದಾರೆ. ಆದರೆ, ಘಟನೆ ನಡೆದ ದಿನ, ಈ ವಿಷಯ ಗಮನಕ್ಕೆ ಬಂದರೂ ಮೋದಿ ಮಿಲಿಟರಿ ಡ್ರೆಸ್, ಕನ್ನಡಕ ಧರಿಸಿಕೊಂಡು ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು’ ಎಂದು ವಾಗ್ದಾಳಿ ನಡೆಸಿದರು.

‘ರಾಜಸ್ತಾನ ರಾಜ್ಯಪಾಲ ಕಲ್ಯಾಣ ಸಿಂಗ್ ಅವರು ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು‘ನಾನು ಬಿಜೆಪಿ ಕಾರ್ಯಕರ್ತ, ಬಿಜೆಪಿಗೆ ಮತ ನೀಡಿ ಎನ್ನುವ ಮೂಲಕ ದೇಶದ್ರೋಹದ ಕೆಲಸ ಮಾಡಿದ್ದಾರೆ. ಅವರನ್ನು ಚುನಾವಣೆ ಮುಗಿಯುವವರೆಗೆ ಅಮಾನತಿನಲ್ಲಿಡಬೇಕು’ಎಂದು ಆಗ್ರಹಿಸಿದರು.

‘ರಫೇಲ್ ಹಗರಣದಲ್ಲಿ ಸುಪ್ರೀಂ ಕೋರ್ಟ್‍ನ ನಿರ್ಧಾರದ ಬಳಿಕ ಬಿಜೆಪಿ ಬಣ್ಣ ಬಯಲಾಗುತ್ತಿದೆ’ಎಂದು ಪ್ರಶ್ನೆಯೊಂದಕ್ಕೆ ಉ‌ತ್ತರಿಸಿದರು.

‘ಕಾಂಗ್ರೆಸ್‌ ಚುನಾವಣೆ ಪ್ರಣಾಳಿಕೆ ನೋಡಿ, ಭಯಗೊಂಡಿರುವ ಬಿಜೆಪಿ, ಧರ್ಮದ ಹೆಸರಲ್ಲಿ ಮತ ಕೇಳಲಾರಂಭಿಸಿದೆ. ಬ್ರಿಟಿಷರ ಬೆದರಿಕೆಗೆ ಎದೆಗುಂದದೇ ತಿರುಗಿ ನಿಂತ ಕಾಂಗ್ರೆಸ್‍ಗೆ ಬಿಜೆಪಿ ದೇಶಭಕ್ತಿ ಕಲಿಸಿಕೊಡಬೇಕಿಲ್ಲ’ಎಂದರು.

ಬಿದರೂರಗೆ ಸ್ವಾಗತ: ‘ಶ್ರೀಶೈಲಪ್ಪ ಬಿದರೂರ ಅವರು ಬಿಜೆಪಿ ತೊರೆದು ಕಾಂಗ್ರೆಸ್‍ಗೆ ಬಂದಿರುವುದು ಪಕ್ಷಕ್ಕೆ ದೊಡ್ಡ ಶಕ್ತಿ ಬಂದಿದೆ. ಇದರಿಂದ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್. ಪಾಟೀಲ ಅವರ ಗೆಲುವಿನ ಅಂತರ ಇನ್ನಷ್ಟು ಹೆಚ್ಚಲಿದೆ’ ಎಂದು ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.

ಬಿದರೂರ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.

‘ಉಸಿರುಗಟ್ಟುವ ವಾತಾವರಣ ಇದ್ದಾಗ ಹೊರಬರಬೇಕು. ಹೀಗಾಗಿ ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್‍ಗೆ ಬಂದಿದ್ದೇನೆ. ಡಿ.ಆರ್. ಪಾಟೀಲರ ಗೆಲುವಿಗೆ ಶ್ರಮಿಸುತ್ತೇನೆ’ ಎಂದು ಬಿದರೂರ ಹೇಳಿದರು.

ಎಸ್.ಎಂ. ಪಾಟೀಲ, ಮಾಜಿ ಶಾಸಕ ಬಿ.ಆರ್. ಯಾವಗಲ್‌, ಜಿ.ಎಸ್. ಗಡ್ಡದ್ದೇವರಮಠ, ರಾಮಕೃಷ್ಣ ದೊಡ್ಡಮನಿ, ಜಿಲ್ಲಾ ಪಂಚಾಯತ್ ಅದ್ಯಕ್ಷ ಎಸ್.ಪಿ. ಬಳಿಗಾರ ಇದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !