ಲಕ್ಷ್ಮೇಶ್ವರ : ಮಳೆ ಕೊರತೆ ಕಾರಣದಿಂದಾಗಿ ಒಣಮೆಣಸಿನಕಾಯಿಗೆ ಈ ವರ್ಷ ಬೇಡಿಕೆ ಹೆಚ್ಚುವ ನಿರೀಕ್ಷೆಯಿದ್ದು, ಈಗಾಗಲೇ ಇದರ ಬೆಲೆ ಹೆಚ್ಚಳವಾಗಿದೆ.
ತಾಲ್ಲೂಕಿನಲ್ಲಿ ಈ ಬಾರಿ ಐದುನೂರು ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗಿದೆ. ಆರಂಭದಲ್ಲಿ ಉತ್ತಮ ಮಳೆ ಆಗಿದ್ದಿದ್ದರೆ ಇಷ್ಟೊತ್ತಿಗೆ ಮೆಣಸಿನಕಾಯಿ ಮಾರಾಟಕ್ಕೆ ಬರುತ್ತಿತ್ತು. ಆದರೆ ಮಳೆ ಕೊರತೆಯಿಂದಾಗಿ ರೈತರು ನಿರೀಕ್ಷಿಸಿದ ಪ್ರಮಾಣದಲ್ಲಿ ಬೆಳೆ ದಕ್ಕಲಿಲ್ಲ. ಸಕಾಲಕ್ಕೆ ಮಳೆ ಆಗಿದ್ದರೆ ಎಕರೆಗೆ ನಾಲ್ಕರಿಂದ ಐದು ಕ್ವಿಂಟಲ್ ಇಳುವರಿ ಬರುತ್ತಿತ್ತು. ಆದರೆ ಈ ವರ್ಷ ಎಕರೆಗೆ ಒಂದು ಕ್ವಿಂಟಲ್‍ಗಿಂತ ಕಡಿಮೆ ಇಳುವರಿ ಬರುವ ಲಕ್ಷಣವಿದೆ. ಹೀಗಾಗಿ ಬೆಲೆ ಹೆಚ್ಚಿದ್ದರೂ ಇಳುವರಿ ಕುಸಿದ ಪರಿಣಾಮ ರೈತರಿಗೆ ಹೇಳಿಕೊಳ್ಳುವಂತಹ ಲಾಭ ಸಿಗದು ಎಂದು ಬೆಳೆಗಾರರು ತಿಳಿಸಿದ್ದಾರೆ.
ಬರಗಾಲದ ಮಧ್ಯೆಯೂ ತಾಲ್ಲೂಕಿನ ರಾಮಗಿರಿ, ಮಾಡಳ್ಳಿ, ಯಳವತ್ತಿ, ಗೋವನಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಮೆಣಸಿನಹಣ್ಣು ಬಿಡಿಸುತ್ತಿದ್ದಾರೆ. ಆದರೆ ಎರಡು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆ ಹಣ್ಣು ಒಣಗಲು ಅಡ್ಡಿಯಾಗಿದ್ದು ಹಣ್ಣು ಬಿಡಿಸಿದ ರೈತರು ಬೆಳೆಯನ್ನು ರಕ್ಷಿಸಿಕೊಳ್ಳಲು ಪರದಾಡುತ್ತಿದ್ದಾರೆ.
ಪೂರೈಕೆ ಕುಸಿತದಿಂದಾಗಿ ದರ ಹೆಚ್ಚಾಗುತ್ತಿದೆ. ಲಕ್ಷ್ಮೇಶ್ವರದ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಒಣಮೆಣಸಿನಕಾಯಿ ದರ ₹600 ಇದೆ.
‘ಸದ್ಯ ಎಪಿಎಂಸಿ ಮಾರುಕಟ್ಟೆಯಲ್ಲಿ ಒಣಮೆಣಸಿನಕಾಯಿ ದರ ಕ್ವಿಂಟಲ್‌ಗೆ ₹45ರಿಂದ ₹50 ಸಾವಿರ ಇದೆ. ಹೊರಗಡೆ ₹60 ಸಾವಿರದವರೆಗೆ ಇದೆ. ಆಂಧ್ರಪ್ರದೇಶದ ಗುಂಟೂರು ಕಾಯಿ ಆವಕವಾದರೆ ಬ್ಯಾಡಗಿ ಮೆಣಸಿನಕಾಯಿ ದರ ಸ್ವಲ್ಪ ಕಡಿಮೆಯಾಗಬಹುದು. ಲಕ್ಷ್ಮೇಶ್ವರ ಎಪಿಎಂಸಿಗೆ ಮೆಣಸಿನಕಾಯಿ ಮಾರಾಟಕ್ಕೆ ಬರುವುದು ಬಹಳ ಕಡಿಮೆ. ಹೆಚ್ಚಿನ ಫಸಲು ಬ್ಯಾಡಗಿ ಮಾರುಕಟ್ಟೆಗೆ ಹೋಗುತ್ತದೆ’ ಎಂದು ಎಪಿಎಂಸಿಯಲ್ಲಿನ ಖರೀದಿದಾರ ಈರಣ್ಣ ಅಕ್ಕೂರ ತಿಳಿಸಿದರು.
‘ಗದಗ ಎಪಿಎಂಸಿಗೆ ಇನ್ನೂ ಮೆಣಸಿನಕಾಯಿ ಆವಕ ಆರಂಭಗೊಂಡಿಲ್ಲ. ಮಳೆ ಕಡಿಮೆ ಆಗಿರುವ ಕಾರಣ ಕಳೆದ ಬಾರಿಯಂತೆ ಈ ಸಲವೂ ಒಣಮೆಣಸಿನಕಾಯಿ ದರ ಹೆಚ್ಚುವ ಸಂಭವ ಇದೆ’ ಎಂದು ಗದಗ ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.
ಮಳೆ ಕೊರತೆಯಿಂದ ಮೆಣಸಿನಕಾಯಿ ಬೆಳೆ ಉತ್ತಮವಾಗಿಲ್ಲ. ನಾಲ್ಕೈದು ಕ್ವಿಂಟಲ್ ಬರಬೇಕಿದ್ದ ಬೆಳೆ ಕೇವಲ ಅರ್ಧ ಕ್ವಿಂಟಲ್‌ಯಿಂದ ಒಂದು ಕ್ವಿಂಟಲ್‌ಗೆ ಸೀಮಿತವಾಗಿದೆಸೋಮಣ್ಣ ಡಾಣಗಲ್ಲ ರೈತ ಶಿಗ್ಲಿ ಗ್ರಾಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.