ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡರಗಿ: ಇಲ್ಲಿ ಆ.14ರ ಮಧ್ಯರಾತ್ರಿಯೇ ಧ್ವಜಾರೋಹಣ..!

ಕ್ರಾಂತಿ ಸೇನೆಯ ಅನನ್ಯ ದೇಶ ಭಕ್ತಿ; ಕನಕಪ್ಪನ ಗುಡ್ಡದ ಹಾರಾಡುವ ಬಾವುಟ
Last Updated 13 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಮುಂಡರಗಿ: ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದು ಆ.14ರ ಮಧ್ಯರಾತ್ರಿ 12ಗಂಟೆಗೆ. ಅದರ ಸವಿನೆನಪಿಗಾಗಿ ಇಲ್ಲಿನ ಕನ್ನಡ ಕ್ರಾಂತಿ ಸೇನೆಯ ಕಾರ್ಯಕರ್ತರು ಎರಡೂವರೆ ದಶಕಗಳಿಂದ ಪಟ್ಟಣದ ಕನಕಪ್ಪನ ಗುಡ್ಡದ ಮೇಲಿರುವ ಕೋಟೆಯ ಬುರುಜಿನ ಮೇಲೆ ಆ.14ರ ಮಧ್ಯರಾತ್ರಿಯೇ ಧ್ವಜಾರೋಹಣ ಮಾಡುತ್ತಿದ್ದಾರೆ.

ಜಿಲ್ಲೆಯ ಉಳಿದ ಕಡೆಗಳಲ್ಲಿ ಆ.15ರಂದು ಬೆಳಿಗ್ಗೆ ಧ್ವಜಾರೋಹಣ ನಡೆಯುತ್ತದೆ. ಆದರೆ, ಮುಂಡರಗಿ ಕನಕಪ್ಪನ ಗುಡ್ಡದಲ್ಲಿ ಮಾತ್ರ 14ರ ಮಧ್ಯರಾತ್ರಿಯೇ ತ್ರಿವರ್ಣ ಧ್ವಜ ಹಾರಾಡುತ್ತದೆ. ಈ ಬಾರಿ ಈ ಧ್ವಜಾರೋಹಣಕ್ಕೆ 25 ವರ್ಷಗಳು ತುಂಬುತ್ತಿದ್ದು, ಇದನ್ನು ವಿಶೇಷವಾಗಿ ಆಚರಿಸಲು ಕ್ರಾಂತಿ ಸೇನೆ ಸಿದ್ಧವಾಗಿದೆ. 1995ರ ಅ.15ರಂದು ಪಟ್ಟಣದ ಸಮಾಜ ಸೇವಕ ಮಂಜುನಾಥ ಇಟಗಿ ಅವರ ನೇತೃತ್ವದಲ್ಲಿ ಶಿವಾನಂದ ನವಲಗುಂದ, ಸಿದ್ದು ಅಂಗಡಿ, ಎನ್.ವಿ.ಹಿರೇಮಠ, ಆನಂದ ರಾಮೇನಹಳ್ಳಿ ಹಾಗೂ ಮಹಾದೇವ ದೊಣ್ಣಿ ಅವರನ್ನು ಒಳಗೊಮಡ 6 ಜನರ ತಂಡದೊಂದಿಗೆ ಪ್ರಾರಂಭವಾದ ಕನ್ನಡ ಕ್ರಾಂತಿ ಸೇನೆಯು, ಇಂದಿಗೆ ಹೆಮ್ಮರವಾಗಿ ಬೆಳೆದಿದೆ.

ಆ.14ರಂದು ರಾತ್ರಿ ಕನಕಪ್ಪನ ಗುಡ್ಡವನ್ನು ಏರುವ ಕಾರ್ಯಕರ್ತರು, ಅಲ್ಲಿ ಸರಿಯಾಗಿ 12ಗಂಟೆಗೆ ಧ್ವಜಾರೋಹಣ ನೆರವೇರಿಸಿ ಗಟ್ಟಿಯಾಗಿ ರಾಷ್ಟ್ರಗೀತೆ ಹಾಡುತ್ತಾರೆ. ಕಾರ್ಯಕರ್ತರೆಲ್ಲ ಒಕ್ಕೊರಲಿನಿಂದ ಕೂಗುವ ವಂದೇ ಮಾತರಂ, ಜೈ ಹಿಂದ್, ಭಾರತ ಮಾತಾ ಕೀ ಜೈ ಘೋಷಣೆಗಳು ಪಟ್ಟಣದಲ್ಲಿ ರಾತ್ರಿ ಸುಖ ನಿದ್ರೆಯಲ್ಲಿದ್ದವರನ್ನು ಬಡಿದೆಬ್ಬಿಸುತ್ತವೆ. ದೂರದ ನಗರಗಳಿಂದ ವಿವಿಧ ವಿದ್ವಾಂಸರು, ವಿಚಾರವಾದಿಗಳು, ಚಿಂತಕರು, ಸ್ವಾತಂತ್ರ ಹೋರಾಟಗಾರರು ಮಧ್ಯರಾತ್ರಿ ಜರುಗುವ ಈ ಧ್ವಜಾರೋಹಣದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದ್ದಾರೆ.

ಧ್ವಜಾರೋಹಣದ ನಂತರ, ಬೆಳಿಗ್ಗೆ ಶಾಲಾ ಕಾಲೇಜುಗಳಿಗೆ ತೆರಳಿ ಮಕ್ಕಳಲ್ಲಿ ನಾಡು, ನುಡಿ ಹಾಗೂ ದೇಶ ಭಕ್ತಿ ಕುರಿತು ಜಾಗೃತಿ ಮೂಡಿಸುವ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ‘ಯುವಕರಲ್ಲಿ ದೇಶ ಪ್ರೇಮ ಮೂಡಿಸುವುದರ ಜತೆಗೆ ಅವರನ್ನು ಸಮಾಜ ಸೇವೆಗೆ ಅಣಿಗೊಳಿಸುವ ಉದ್ದೇಶದಿಂದ ಕನ್ನಡ ಕ್ರಾಂತಿ ಸೇನೆಯು ಕಾರ್ಯನಿರ್ವಹಿಸುತ್ತಿದೆ’ ಎಂದು ಸ್ಥಾಪಕ ಮಂಜುನಾಥ ಇಟಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT