ಜನಸ್ಪಂದನಾ ಸಭೆ : ಜಿಲ್ಲಾಧಿಕಾರಿ ಎದುರು ಸಮಸ್ಯೆ ಅನಾವರಣ

7

ಜನಸ್ಪಂದನಾ ಸಭೆ : ಜಿಲ್ಲಾಧಿಕಾರಿ ಎದುರು ಸಮಸ್ಯೆ ಅನಾವರಣ

Published:
Updated:
Deccan Herald

ಮುಂಡರಗಿ: ಸ್ಥಳೀಯ ತಹಶೀಲ್ದಾರ್ ಕಾರ್ಯಾಲಯದಲ್ಲಿ ಶನಿವಾರ ಜಿಲ್ಲಾಧಿಕಾರಿ ಮನೋಜ ಜೈನ ಅವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಜನಸ್ಪಂದನ ಸಭೆ ಏರ್ಪಡಿಸಲಾಗಿತ್ತು.

ಸಭೆ ಆರಂಭವಾಗುತ್ತಿದ್ದಂತೆ ತಾಲ್ಲೂಕು ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್.ಗೌಡರ ಫಸಲ ಬಿಮಾ ವಿಮೆ ಹಣವನ್ನು ಎಲ್ಲ ರೈತರಿಗೂ ಸಮರ್ಪಕವಾಗಿ ವಿತರಿಸಬೇಕು. ಬೆಳೆ ಹಾನಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು. ನಿಯಮಾನುಸಾರ ಎಲ್ಲ ರೈತರಿಗೆ ವಿಮೆ ದೊರೆಯಲಿದೆ ಎಂದು ಡಿಸಿ ಭರವಸೆ ನೀಡಿದರು.

ಸಿಂಗಟಾಲೂರು ಹುಲಿಗುಡ್ಡ ಏತ ನೀರಾವರಿ ಯೋಜನೆಯಲ್ಲಿ ಜಮೀನು ಕಳೆದುಕೊಂಡಿರುವ ಕೆಲವು ರೈತರಿಗೆ ಸಮರ್ಪಕವಾಗಿ ಪರಿಹಾರ ವಿತರಿಸಿಲ್ಲ ಎಂದು ಡಂಬಳ ಗ್ರಾಮದ ಬಸವರಾಜ ಪಟ್ಟಣಶೆಟ್ಟಿ ದೂರಿದರು. ತ್ರಿಚಕ್ರ ವಾಹನ ವಿತರಿಸುವಲ್ಲಿ ಪುರಸಭೆ ಮುಖ್ಯಾಧಿಕಾರಿ ತಾರತಮ್ಯ ಮಾಡಿದ್ದು, ತಮಗೆ ಮಂಜೂರಾಗಿದ್ದ ತ್ರಿಚಕ್ರ ವಾಹನವನ್ನು ಮಾಜಿ ಶಾಸಕರ ಹಿಂಬಾಲಕರಿಗೆ ನೀಡಿದ್ದಾರೆ ಎಂದು ಅಂಗವಿಕಲ ರುದ್ರಪ್ಪ ಬಳಿಗಾರ ಆರೋಪಿಸಿದರು.

ಡಾ.ಅನ್ನದಾನೀಶ್ವರ ಸ್ವಾಮೀಜಿ ಅವರು ಪಟ್ಟಣದ ಗದಗ ರಸ್ತೆಗೆ ಅಂಟಿಕೊಂಡಂತೆ ಕೋಟ್ಯಂತರ ಬೆಲೆ ಬಾಳುವ ಜಮೀನನನ್ನು ರುದ್ರಭೂಮಿಗೆ ಉಚಿತವಾಗಿ ನೀಡಿದ್ದಾರೆ. ಅದಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಡಳಿತಾಧಿಕಾರಿ ಡಾ.ಎಂ.ಬಿ.ಬೆಳವಟಗಿಮಠ, ಕೆ.ವಿ.ಹಂಚಿನಾಳ ಮನವಿ ಸಲ್ಲಿಸಿದರು. ಮಠ ಮಾನ್ಯಗಳು ದೇಣಿಗೆ ನೀಡಿರುವ ಜಮೀನುಗಳಿಗೆ ಪರಿಹಾರ ನೀಡಲು ಬರುವುದಿಲ್ಲ ಎಂದು ಡಿಸಿ ತಿಳಿಸಿದರು.

ಕಳಪೆ ರಸ್ತೆ ಕಾಮಗಾರಿಯಿಂದ ರಸ್ತೆಯ ನೀರೆಲ್ಲ ತಮ್ಮ ಜಮೀನಿಗೆ ನುಗ್ಗಿ ಪ್ರತಿ ವರ್ಷ ಬೆಳೆ ನಾಶವಾಗುತ್ತಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಹೇಶ ಗಡಾದ ಆಗ್ರಹಿಸಿದರು.

ಸುರೇಶ ಹಲವಾಗಲಿ, ಬಸಪ್ಪ ವಡ್ಡರ, ವಿಠಲ ಗಣಾಚಾರಿ, ಶಂಕರನಾರಾಯಣ ಪದಕಿ, ಶಿವನಗೌಡ್ರ ಗೌಡ್ರ, ಮೋದಿನಸಾಬ್ ಡಂಬಳ ಹಲವು ಸಮಸ್ಯೆಗಳನ್ನು ಡಿಸಿ ಮುಂದಿಟ್ಟರು. ಜನರ ಸಮಸ್ಯೆಗಳಿಗೆ ತಕ್ಷಣ ಸೂಕ್ತ ಪರಿಹಾರ ಒದಗಿಸಬೇಕು ಎಂದು ಡಿಸಿ ಆದೇಶ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ತಹಶೀಲ್ದಾರ್ ಭ್ರಮರಾಂಬಾ ಗುಬ್ಬಿಶೆಟ್ಟಿ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !