ಸೋಮವಾರ, ಮೇ 23, 2022
30 °C

ಕಳಸಾ– ಬಂಡೂರಿ ಕಾಮಗಾರಿ ಶೀಘ್ರ ಆರಂಭ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಗುಂದ (ಗದಗ ಜಿಲ್ಲೆ): ‘ಅಧಿಕಾರ ಇಲ್ಲದಿದ್ದರೂ, ಇದ್ದಾಗಲೂ ಕಳಸಾ– ಬಂಡೂರಿ ಯೋಜನೆಗಾಗಿ ನಿರಂತರ ಹೋರಾಟ ಮಾಡಿದ್ದೇವೆ. ಇದಕ್ಕೆ ಪ್ರೇರಕವಾಗಿ ನರಗುಂದ ಬಂಡಾಯ ನೆಲದ ಶಕ್ತಿ ಅಪಾರವಾಗಿದೆ. ಇದನ್ನು ಅರಿತೇ ಈ ಯೋಜನೆಗೆ ₹1 ಸಾವಿರ ಕೋಟಿ ತೆಗೆದಿರಿಸಲಾಗಿದೆ. ಶೀಘ್ರವೇ ಕಾನೂನು ತೊಡಕು ನಿವಾರಿಸಿ ಕಳಸಾ– ಬಂಡೂರಿ ಕಾಮಗಾರಿ ಆರಂಭಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಶುಕ್ರವಾರ ನರಗುಂದ ವಿಧಾನಸಭಾ ಮತಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ಚಾಲನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ಸರ್ಕಾರ ಇದ್ಧಾಗಲೆಲ್ಲಾ ಕಳಸಾ–ಬಂಡೂರಿಯನ್ನು ಮಲಪ್ರಭೆಗೆ ಜೋಡಿಸಲು ನಿರಂತರ ಪ್ರಯತ್ನ ಮಾಡಿದೆ. ನ್ಯಾಯಮಂಡಳಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರು ಕೇಂದ್ರ ಸರ್ಕಾರದಿಂದ ಅಧಿಸೂಚನೆ ಹೊರಡಿಸಿದ್ದಾರೆ. ಬಜೆಟ್‌ನಲ್ಲಿ₹1 ಸಾವಿರ ಕೋಟಿ ಹಣ ಮೀಸಲಿಟ್ಟ ನಂತರ ಎಲ್ಲ ಕಾನೂನು ತೊಡಕು ನಿವಾರಣೆ ಹಾಗೂ ಪರಿಸರ ಇಲಾಖೆ ಅನುಮತಿ ಸಲುವಾಗಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ. ಕಾನೂನು ತೊಡಕು ನಿವಾರಿಸಿ ಕಾಮಗಾರಿ ಆರಂಭಿಸಲಾಗುವುದು’ ಎಂದು ತಿಳಿಸಿದರು.

‘ಸವದತ್ತಿ ಯಲ್ಲಮ್ಮನ ಅಡಿಯಿಂದ ಬಾದಾಮಿ ಬನಶಂಕರಿ ಮುಡಿಯವರೆಗೆ ಮಹದಾಯಿ, ಕಳಸಾ– ಬಂಡೂರಿ, ಮಲಪ್ರಭೆ ನೀರು ಹರಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

‘ಬಿ.ಎಸ್.ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿ ಆಗಿದ್ದಾಗ ಕಳಸಾ– ಬಂಡೂರಿಗೆ ₹100 ಕೋಟಿ ಬಿಡುಗಡೆ ಮಾಡಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ನಾನು ಜಲಸಂಪನ್ಮೂಲ ಸಚಿವನಾದ ಮೇಲೆ 5.5 ಕಿ.ಮೀ. ಕಳಸಾ– ಬಂಡೂರಿ ಜೋಡಣೆ ಕಾಲುವೆ ಕಾಮಗಾರಿ ಮುಗಿಸಲಾಗಿತ್ತು. ಆಗ ಅಂದಿನ ಗೋವಾ ಸರ್ಕಾರ ಹಾಗೂ ಯುಪಿಎ ತಡೆಗೋಡೆ ಕಟ್ಟಿ ನೀರು ಮಲಪ್ರಭೆಗೆ ಸೇರದಂತೆ ಮಾಡಿದರು’ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

‘ನಾನು, ಸಚಿವ ಸಿ.ಸಿ.ಪಾಟೀಲ ಹಾಗೂ ನಮ್ಮ ನಾಯಕರು ಎರಡು ದಶಕಗಳಿಂದ ಈ ಯೋಜನೆಗೆ ಹೋರಾಟ ನಡೆಸಿದ್ದೇವೆ. ಆದರೆ, ಈ ಯೋಜನೆ ಹಿನ್ನೆಡೆಗೆ ಅಂದಿನ ಯುಪಿಎ ಸರ್ಕಾರ ನ್ಯಾಯಮಂಡಳಿ ರಚಿಸುವಂತೆ ಮಾಡಿತು. ಅವರ ನಾಯಕಿ ಗೋವಾದಲ್ಲಿ ಮಹದಾಯಿ ನೀರಿನಲ್ಲಿ ಒಂದು ಹನಿ ನೀರು ಕೊಡುವುದಿಲ್ಲ ಎಂದು ಘೋಷಿಸಿದರು. ಈ ಭಾಗದಲ್ಲಿ ಮಹದಾಯಿ, ಕಳಸಾ– ಬಂಡೂರಿಗೆ ಹೋರಾಟ ನಡೆದಾಗ ಹಿಂದೆ ಏಳು ವರ್ಷ ಅಧಿಕಾರ ನಡೆಸಿದ ಸರ್ಕಾರ ರೈತರ ಮೇಲೆ ಲಾಠಿ ಪ್ರಹಾರ ನಡೆಸಿತು. ರೈತರಿಲ್ಲದಾಗ ಮನೆ ಹೊಕ್ಕು ಮಹಿಳೆಯರನ್ನು ಬೂಟಿನಿಂದ ಒದೆಸಿದ್ದು ಅರಿವಿಲ್ಲವೇ? ಈಗ ಮಹದಾಯಿ ಹೆಸರಲ್ಲಿ ಪಾದಯಾತ್ರೆ ನಡೆಸುತ್ತಿರುವುದು ಎಷ್ಟು ಸರಿ?’ ಎಂದು ಟೀಕಿಸಿದರು.

‘ಕಳಸಾ– ಬಂಡೂರಿಗಾಗಿ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ. ಈ ಯೋಜನೆಗೆ ಬದ್ಧತೆಯಿಂದ ಕೆಲಸ ಮಾಡಲಾಗುವುದು’ ಎಂದು ಹೇಳಿದರು.

ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಮಾತನಾಡಿ, ಕಳಸಾಬಂಡೂರಿಗೆ ₹1 ಸಾವಿರ ಕೋಟಿ ಮೀಸಲಿಟ್ಟ ಮುಖ್ಯಮಂತ್ರಿಗಳು ಅಭಿನಂದನಾರ್ಹರಾಗಿದ್ದಾರೆ. ಹಿಂದೆ ಇದ್ದ ಸರ್ಕಾರ ತಾಲ್ಲೂಕಿನಲ್ಲಿ ಏಳು ಏತ ನೀರಾವರಿ ಯೋಜನೆ ಜಾರಿ ಮಾಡಿ ನಿರ್ಮಿಸಿದೆ. ಆದರೆ ಅವುಗಳ ಕಳಪೆ ಕಾಮಗಾರಿಯಿಂದ ಒಂದು ಎಕರೆಗೆ ನೀರು ಹರಿಯದಂತಾಗಿದೆ. ಆದ್ದರಿಂದ ನೀರಾವರಿ ಇಲಾಖೆ ಮೂಲಕ ಇವುಗಳ ನಿರ್ಮಾಣಕ್ಕೆ ₹92 ಕೋಟಿ ಅನುದಾನ ಬಿಡುಗಡೆ ಮಾಡಿ ₹9 ಸಾವಿರ ಹೆಕ್ಟೇರ್ ಭೂಮಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.

ವಿಡಿಯೊ ಪ್ರದರ್ಶನ: ಅಭಿವೃದ್ಧಿ ಕಾಮಗಾರಿಗಳ ಸಂಪೂರ್ಣ ವಿವರ ಹಾಗೂ ಕಳಸಾ– ಬಂಡೂರಿ ಹೋರಾಟದ ಎರಡು ದಶಕಗಳ ಎಲ್ಲ ವಿವರವನ್ನು ಬೃಹತ್ ವಿಡಿಯೊ ಪರದೆ ಮೂಲಕ ತೋರಿಸಲಾಯಿತು.

ಸನ್ಮಾನ: ಸಚಿವ ಸಿ.ಸಿ.ಪಾಟೀಲರು ಎತ್ತು ಚಕ್ಕಡಿ ಇದ್ದ ಬೆಳ್ಳಿಯ ಸ್ಮರಣಿಕೆಯನ್ನು ನೀಡಿ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

ಸಮಾರಂಭದಲ್ಲಿಯೇ ಎಲ್ಲ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಭೂಮಿಪೂಜೆಗೆ ಮುಖ್ಯಮಂತ್ರಿ ರಿಮೋಟ್ ಮೂಲಕ ಚಾಲನೆ ನೀಡಿದರು. ಸ್ಲಂಬೋರ್ಡ್‌ನಿಂದ ಫಲಾನುಭವಿಗಳಿಗೆ ವಸತಿ ನಿವೇಶನದ ಹಕ್ಕು ಪತ್ರ ವಿತರಿಸಿದರು.

ಸಮಾರಂಭದಲ್ಲಿ ಸಚಿವ ಬಿ.ಸಿ.ಪಾಟೀಲ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಶಾಸಕ ಕಳಕಪ್ಪ ಬಂಡಿ, ಸಂಸದರಾದ ಪಿ.ಸಿ.ಗದ್ದಿಗೌಡ್ರ, ಶಿವಕುಮಾರ ಉದಾಸಿ, ಎಸ್.ವಿ.ಸಂಕನೂರ, ಕಾಂತಿಲಾಲ್ ಬನ್ಸಾಲಿ, ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಹವಾಲ್ದಾರ, ಉಪಾಧ್ಯಕ್ಷೆ ಅನ್ನಪೂರ್ಣ ಯಲಿಗಾರ, ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು, ಸಿಇಒ ಡಾ.ಸುಶೀಲಾ ಬಿ., ಮುಖಂಡರಾದ ಎಂ.ಎಸ್.ಕರಿಗೌಡ್ರ, ಎ.ಎಂ.ಹಡೇದ, ಎಂ.ಎಸ್.ಪಾಟೀಲ, ಜೆ.ಪಿ.ಪಾಟೀಲ, ರುದ್ರಗೌಡ ಪೊಲೀಸ್ ಪಾಟೀಲ ಇದ್ದರು.

ಕಿಕ್ಕಿರಿದ ಜನಸಾಗರ: ಸಮಾರಂಭ ಸಂಜೆ 4.35ಕ್ಕೆ ಆರಂಭವಾದರೂ ಮಧ್ಯಾಹ್ನ 12 ಗಂಟೆಯಿಂದಲೇ ನರಗುಂದ ಮತಕ್ಷೇತ್ರದ ವಿವಿಧ ಹಳ್ಳಿಗಳಿಂದ ಜನರು ಎಪಿಎಂಸಿ ಆವರಣಕ್ಕೆ ಬಂದು ಸಮಾರಂಭಕ್ಕೆ ಸಾಕ್ಷಿಯಾದರು. 10 ಸಾವಿರಕ್ಕೂ ಹೆಚ್ಚು ಜನ ಸೇರಿದ್ದು ಕಂಡು ಬಂತು.

ಹಾಡುಗಳ ಸುರಿಮಳೆ: ಸಮಾರಂಭಕ್ಕೂ ಮೊದಲು ಗಾಯಕರಿಂದ ನಿರಂತರ ಹಾಡುಗಳು ಮೊಳಗಿದವು. ಇದರಿಂದ ಉರಿಬಿಸಿಲಿನಲ್ಲೂ ಜನರು ಕದಲದೇ ಇರುವುದು ಕಂಡು ಬಂತು.

ಟ್ರಾಫಿಕ್ ಜಾಮ್: ಟ್ರಕ್, ಟ್ಯ್ರಾಕ್ಟರ್, ಟ್ರ್ಯಾಕ್ಸ್‌ಗಳಲ್ಲಿ ಬಂದಿದ್ದ ಜನರು ಎಲ್ಲೆಂದರಲ್ಲಿ ತಮ್ಮ ವಾಹನ, ಬೈಕ್ ನಿಲ್ಲಿಸಿದ್ದರಿಂದ ವಾಹನ, ಜನದಟ್ಟಣೆ ಕಂಡು ಬಂತು. ಎಲ್ಲೆಂದರಲ್ಲಿ ಬಿಜೆಪಿ ಧ್ವಜಗಳು, ಕಟೌಟ್‌ಗಳು ರಾರಾಜಿಸುತ್ತಿದ್ದುದು ಕಂಡು ಬಂತು.

ಮನೆ ಏರಿದ ಜನ: ಸಿಎಂ ಹೆಲಿಕಾಪ್ಟರ್ ನೋಡಲು ಜನರು ಮನೆ ಮೇಲೆ ಏರಿ ನಿಂತು ನೋಡಿದ್ದು ಕಂಡು ಬಂತು.

ರೊಟ್ಟಿ, ಬುತ್ತಿ ನೆನೆದು ಭಾವುಕರಾದ ಸಿಎಂ

ತಮ್ಮ ರಾಜಕೀಯ ಜೀವನದ ಆರಂಭದ ದಿನಗಳನ್ನು ನೆನೆದು ಮುಖ್ಯಮಂತ್ರಿ ಬೊಮ್ಮಾಯಿ ಭಾಷಣದ ಮಧ್ಯದಲ್ಲಿಯೇ ಭಾವುಕರಾದರು.

ಕಳಸಾ–ಬಂಡೂರಿ ಹೋರಾಟದ ಪಾದಯಾತ್ರೆ ಸಂದರ್ಭದಲ್ಲಿ ಹಳ್ಳಿಹಳ್ಳಿಗಳಲ್ಲಿ ನೀಡಿದ್ದ ರೊಟ್ಟಿ ಬುತ್ತಿಯನ್ನು ನೆನೆದು  ಭಾವುಕರಾದರು. ಆ ಸಂದರ್ಭದಲ್ಲಿ ಸಹಾಯ ಮಾಡಿದ ಮಿತ್ರರನ್ನು ನೆನಪಿಸಿಕೊಂಡರು.

ಸಚಿವ ಸಿ.ಸಿ.ಪಾಟೀಲರು ನನ್ನ ಹಿಂದಿನ ಶಕ್ತಿಯಾಗಿದ್ದಾರೆ. ಕೊನೆಯ ಉಸಿರು ಇರುವವರೆಗೂ ಅವರನ್ನು ನೆನೆಯುತ್ತೇನೆ. ಅವರು ಕೇವಲ ಶಾಸಕರಲ್ಲ, ಜನೋಪಯೋಗಿ ಶಾಸಕರಾಗಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆ ಹರಿಸಿದ್ದಾರೆ ಎಂದು ಹೇಳಿದರು. 

‘ಧೈರ್ಯ ಎದುರಿಸಲು ಶಕ್ತಿ ತಂದುಕೊಳ್ಳಿ’

‘ಕೆ.ಎಸ್‌.ಈಶ್ವರಪ್ಪ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆದಿದೆ. ಅವರು ನೈತಿಕ ಹೊಣೆ ಹೊತ್ತು ಸ್ವ ಪ್ರೇರಣೆಯಿಂದ ರಾಜೀನಾಮೆ ಕೊಟ್ಟಿದ್ದಾರೆ. ತನಿಖೆ ಸಂಪೂರ್ಣ ನಿಸ್ಪಕ್ಷಪಾತವಾಗಿ, ನಿಷ್ಠುರವಾಗಿ ನಡೆಯಲಿದೆ’ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

‘ನಾವು ಸ್ವಚ್ಛ ಮುತ್ತುಗಳು ಎಂದು ಹೇಳುತ್ತಿರುವ ಕಾಂಗ್ರೆಸ್‌ನವರು ಸ್ವಲ್ಪ ದಿವಸ ಕಾದರೆ ಸತ್ಯ ಹೊರಬರಲಿದೆ. ಅದನ್ನು ಎದುರಿಸುವ ಶಕ್ತಿಯನ್ನು ಈಗಿನಿಂದಲೇ ಪಡೆದುಕೊಳ್ಳಿ’ ಎಂದು ಎಚ್ಚರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು