ಲಕ್ಷ್ಮೇಶ್ವರ: ‘ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಇದ್ದು ಜಗತ್ತಿನ ಪ್ರಸಿದ್ಧ ಭಾಷೆಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಇದೆ. ಅನ್ಯ ಭಾಷೆಗಳಿಂದ ಎಷ್ಟೇ ದಾಳಿ ನಡೆದರೂ ಕನ್ನಡ ಅಳಿಸಲು ಸಾಧ್ಯ ಇಲ್ಲ’ ಎಂದು ಸಾಹಿತಿ ಎಂ.ಎಸ್. ಪೂಜಾರ ಹೇಳಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.2ರಲ್ಲಿ ಭಾನುವಾರ ತಾಲ್ಲೂಕು ಸರ್ಕಾರಿ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಅಸೋಸಿಯೇಶನ್ ಆಶ್ರಯದಲ್ಲಿ ತಾಲ್ಲೂಕಿನ ಬಾಲೆಹೊಸೂರು ಗ್ರಾಮದ ಹಿರಿಯ ಸಾಹಿತಿ ನಿವೃತ್ತ ಶಿಕ್ಷಕ ಎಸ್.ಜಿ. ಮಾದಾಪುರಮಠ ಅವರು ರಚಿಸಿರುವ ಬೆಳ್ಳಕ್ಕಿ, ಹರ್ಷಋತು, ತೋಚಿದ್ದು-ಗೀಚಿದ್ದು ಕವನ ಸಂಕಲನಗಳ ಬಿಡುಗಡೆ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
‘ಪ್ರತಿಯೊಬ್ಬ ಕನ್ನಡಿಗನೂ ಮಾತೃ ಭಾಷೆಯನ್ನು ಪ್ರೀತಿಸಬೇಕು. ಮಕ್ಕಳಿಗೆ ಪ್ರೀತಿ, ಅಭಿಮಾನದಿಂದ ಕನ್ನಡ ಕಲಿಸಬೇಕು. ಕೇವಲ ಸಮ್ಮೇಳನ ಮಾಡುವುದರಿಂದ ಕನ್ನಡ ಬೆಳೆಯಲಾರದು. ಭಾಷೆ ಉಳಿಸಬೇಕು ಎಂಬ ಭಾವ ಕನ್ನಡಿಗರಲ್ಲಿ ಮೂಡಿಸುವ ಕೆಲಸವನ್ನು ಕನ್ನಡ ಪರ ಸಂಘಟನೆಗಳು ಮಾಡಲಿ’ ಎಂದರು.
ಎಂ.ಎಸ್. ಪೂಜಾರ, ಸಿ.ಜಿ. ಹಿರೇಮಠ, ತಾಲ್ಲೂಕು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜ ಹಣಗಿ ಕವನ ಸಂಕಲನ ಬಿಡುಗಡೆ ಮಾಡಿದರು. ಮಕ್ಕಳ ಹಿರಿಯ ಸಾಹಿತಿ ಪೂರ್ಣಾಜಿ ಖರಾಟೆ, ವೀರಯ್ಯ ಹಿರೇಮಠ, ಜೆ.ಎಸ್. ರಾಮಶೆಟ್ರ, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಆರ್.ಎನ್. ಪಂಚಭಾವಿ ಮಾತನಾಡಿದರು.
ಸರ್ಕಾರಿ ನಿವೃತ್ತ ಅಸೋಸಿಯೇಶನ್‍ನ ಲಕ್ಷ್ಮೇಶ್ವರ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಸ್. ಈಳಗೇರ ಅಧ್ಯಕ್ಷತೆ ವಹಿಸಿದ್ದರು. ಎನ್.ಆರ್. ಸಾತಪುತೆ, ಉಮೇಶ ನೇಕಾರ, ಆರ್.ಎಚ್. ಕಾಳೆ, ಬಾಗೇವಾಡಿ, ಎಂ.ಕೆ. ಕಳ್ಳಿಮನಿ, ಬಸವರಾಜ ಯತ್ನಳ್ಳಿ, ಬಿ.ಎನ್. ರಾಟಿ, ಬಿ.ಎಂ. ಕುಂಬಾರ, ಎಸ್.ವಿ. ಅಂಗಡಿ ಇದ್ದರು.