ಗುರುವಾರ , ಆಗಸ್ಟ್ 11, 2022
21 °C

ಗಡಿಯಲ್ಲಿ ಕನ್ನಡ ದೀಪ ಬೆಳಗಿದ ಚಿಂಚಣಿಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಮರಾಠಿ ಪ್ರಾಬಲ್ಯದ ಕನ್ನಡ ಪ್ರದೇಶಗಳಲ್ಲಿ ಕನ್ನಡ ಮತ್ತು ಕನ್ನಡಿಗರ ಸ್ಥಿತಿ ದಯನೀಯವಾಗಿದೆ. ಕನ್ನಡಿಗರಲ್ಲಿ ಭಾಷಾಭಿಮಾನ ಬೆಳೆಸುವ ಜತೆಗೆ ಮರಾಠಿಗರೂ ಕನ್ನಡವನ್ನು ಪ್ರೀತಿಸುವ ವಾತಾವರಣ ಸೃಷ್ಟಿಸುವ ಹಿನ್ನೆಲೆಯಲ್ಲಿ ಚಿಂಚಣಿ ಮಠದ ಪಾತ್ರ ಹಿರಿದು’ ಎಂದು ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ತಿಳಿಸಿದರು.

ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ಎಡೆಯೂರು ಜಗದ್ಗುರು ತೋಂಟದಾರ್ಯ ಮಠದಲ್ಲಿ ನಡೆದ ‘ಕನ್ನಡದ ಗಡಿ ಕಾಯ್ದ ಲಿಂಗಾಯತ ಮಠಗಳು’ ಕುರಿತ ಶಿವಾನುಭವದಲ್ಲಿ ಅವರು ಮಾತನಾಡಿದರು.

‘ಕನ್ನಡ ರಾಜ್ಯೋತ್ಸವವನ್ನು ಗಡಿಗ್ರಾಮಗಳಲ್ಲಿ ಆಚರಿಸುವ ಮೂಲಕ ಕನ್ನಡಿಗರಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯವನ್ನು ಸ್ವಾಮೀಜಿ ಮಾಡುತ್ತಿದ್ದಾರೆ. ಕನ್ನಡ ದೀಪವನ್ನು ಗಡಿಭಾಗದಲ್ಲಿ ಬೆಳಗಿದ ಕೀರ್ತಿ ಚಿಂಚಣಿ ಮಠದ್ದಾಗಿದೆ. ಮಠದ ಪುಸ್ತಕಗಳು ಕನ್ನಡದ ಅಸ್ಮಿತೆಯನ್ನೇ ಪ್ರಧಾನವಾಗಿಟ್ಟುಕೊಂಡು ಪ್ರಕಟಗೊಂಡು, ಸಾಹಿತ್ಯಾಸಕ್ತರ ಪ್ರಶಂಸೆಗೆ ಪಾತ್ರವಾಗಿವೆ’ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಸಿದ್ಧಸಂಸ್ಥಾನಮಠದ ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ‘ತೋಂಟದ ಸಿದ್ಧಲಿಂಗ ಸ್ವಾಮೀಜಿ ಪ್ರೇರಣೆಯಿಂದ ಗಡಿಭಾಗದಲ್ಲಿ ಕನ್ನಡ ಕಟ್ಟುವ ಕಾರ್ಯ ಮಾಡಲಾಗುತ್ತಿದೆ. ಲಿಂಗಾಯತ ಧರ್ಮದ ಭಾಷೆ ಕನ್ನಡವಾಗಿರುವುದರಿಂದ ಕನ್ನಡ ಏಳ್ಗೆಯನ್ನು ಮಠದ ಏಳ್ಗೆ ಎಂದು ಭಾವಿಸಿದ್ದೇವೆ. ಕನ್ನಡ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ. ಅಲ್ಲದೇ, ಶಿಕ್ಷಕರ ಪ್ರಮಾಣ ಕೂಡ ಕಡಿಮೆ ಇರುವುದರಿಂದ ಕನ್ನಡ ಕಲಿಕೆಗೆ ಹಿನ್ನಡೆಯಾಗುತ್ತಿದೆ. ಈ ದಿಸೆಯಲ್ಲಿ ಸರ್ಕಾರದ ಪಾತ್ರ ಮಹತ್ವವಾದುದು’ ಎಂದು ಹೇಳಿದರು.

‘ಕನ್ನಡಕ್ಕೆ ಚಿಂಚಣಿ ಸಿದ್ಧಸಂಸ್ಥಾನಮಠದ ಕೊಡುಗೆ’ ವಿಷಯವಾಗಿ ವಿದ್ವಾಂಸ ಡಾ.ವಿ.ಎಸ್. ಮಾಳಿ ಉಪನ್ಯಾಸ ನೀಡಿ, ‘ಚಿಂಚಣಿ ಮಠ ಚಿಕ್ಕ ಮಠವಾಗಿದ್ದರೂ ಕನ್ನಡದ ತೇರನ್ನು ಗಡಿಭಾಗದಲ್ಲಿ ಎಳೆದು ಕನ್ನಡಿಗರಲ್ಲಿ ಸ್ವಾಭಿಮಾನ ಮತ್ತು ಭಾಷಾ ಪ್ರೇಮವನ್ನು ಬೆಳೆಸಿದೆ. ಸೌಹಾರ್ದ ಮತ್ತು ಸಾಮರಸ್ಯದಿಂದ ಮರಾಠಿಗರನ್ನು ಮುದ್ದಿಸಿ, ತಿದ್ದಿ ಕನ್ನಡ ಕಲಿಸಿದವರು ಚಿಂಚಣಿಯ ಸ್ವಾಮಿಗಳು’ ಎಂದು ತಿಳಿಸಿದರು.

ಡಾ. ಎ.ಬಿ.ಘಾಟಗೆ ರಚಿಸಿದ ‘ಕರ್ನಾಟಕ-ಮಹಾರಾಷ್ಟ್ರ ಸಾಂಸ್ಕೃತಿಕ ಅಧ್ಯಯನಗಳ ತಾತ್ತ್ವಿಕತೆ’ ಪುಸ್ತಕವನ್ನು ತೋಂಟದ ಸಿದ್ಧರಾಮ ಶ್ರೀಗಳು ಲೋಕಾರ್ಪಣೆಗೊಳಿಸಿದರು.‌

ಕೆಮಿಕಲ್ ಟೆಕ್ನಾಲಜಿ ಕ್ಷೇತ್ರದಲ್ಲಿನ ವಿಶೇಷ ಸಾಧನೆಗಾಗಿ ಡಾ. ಅರುಣ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಆದರ್ಶ ಶಿಕ್ಷಣ ಸಮಿತಿಯ ಎ.ಎಸ್.ಎಸ್. ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಶ್ರೀಧರ ಗಾಣಿಗೇರ, ರೋಹಿತ ನಾಯ್ಕರ್, ರಶ್ಮಿ ಅರಸಿದ್ಧಿ ಹಾಗೂ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಡಿ.ಎಸ್.ನಾಯಕ, ಸಂಘದ ಅಧ್ಯಕ್ಷ ಎಂ.ಸಿ.ಐಲಿ, ಶಿವಾನುಭವ ಸಮಿತಿ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು