ಗದಗ: ಕಪ್ಪತ್ತಗುಡ್ಡದಲ್ಲಿ ವನ್ಯಜೀವಿಗಳ ಸಂಖ್ಯೆ ವೃದ್ಧಿಸಿರುವುದು ಅರಣ್ಯ ಇಲಾಖೆ ಈಚೆಗೆ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ಇದೇ ಮೊದಲ ಬಾರಿಗೆ ಅತಿ ಅಪರೂಪದ ಪ್ರಾಣಿಗಳಾದ ಚಿಂಕಾರ ಹಾಗೂ ರೆಸ್ಟಿ ಸ್ಪಾಟೆಡ್ ಬೆಕ್ಕುಗಳು ಕಂಡು ಬಂದಿವೆ.
ಕಪ್ಪತ್ತಗುಡ್ಡ ವನ್ಯಜೀವಿಧಾಮವು ಗದಗ, ಮುಂಡರಗಿ ಹಾಗೂ ಶಿರಹಟ್ಟಿ ತಾಲ್ಲೂಕಿನಲ್ಲಿ 65 ಕಿ.ಮೀ. ಉದ್ದ ವ್ಯಾಪಿಸಿದೆ. ಅಲ್ಲಿರುವ ಸಸ್ಯಾಹಾರಿ ಮತ್ತು ಮಾಂಸಾಹಾರಿ ಪ್ರಾಣಿಗಳ ನೆಲೆ ಕಂಡುಹಿಡಿಯಲು ವೈಜ್ಞಾನಿಕ ಅಧ್ಯಯನ ನಡೆದಿರಲಿಲ್ಲ.
‘ಡೆಹ್ರಾಡೂನ್‌ನ ಭಾರತೀಯ ವನ್ಯಜೀವಿ ಸಂಸ್ಥೆ, ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ವನ್ಯಜೀವಿ ಘಟಕದ ಸಿಬ್ಬಂದಿ ನೆರವಿನಿಂದ ಮೇ 7ರಿಂದ ಜುಲೈ 15ರವರೆಗೆ ಕಪ್ಪತ್ತಗುಡ್ಡ ವನ್ಯಜೀವಿಧಾಮದಲ್ಲಿ ಪ್ರಾಥಮಿಕ ಅಧ್ಯಯನ ನಡೆಸಲಾಗಿದೆ. ಇಲ್ಲಿ ವೈವಿಧ್ಯಮಯ ಪ್ರಾಣಿಗಳು, ಪಕ್ಷಿಗಳು ಮತ್ತು ಸರೀಸೃಪಗಳಿರುವುದು ಆಶ್ಚರ್ಯ ತರಿಸಿದೆ’ ಎಂದು ಡಿಸಿಎಫ್ ದೀಪಿಕಾ ಬಾಜಪೇಯಿ ತಿಳಿಸಿದ್ದಾರೆ.
‘ಸೈನ್ ಸರ್ವೆ ವಿಧಾನದಲ್ಲಿ 128 ಕಿ.ಮೀ. ಸಂಚರಿಸಿ ಪ್ರಾಣಿಗಳ ಮಲದ ನಮೂನೆ, ಮರ ಮತ್ತು ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳು ಪರಚಿದ ಗುರುತುಗಳನ್ನು ವೀಕ್ಷಿಸಲಾಗಿದೆ. ಲೈನ್ಸ್ ಟ್ರಾನ್ಸಕ್ಟ್ ವಿಧಾನದಲ್ಲಿ ಪ್ರಾಣಿಗಳ ಸಂಚಾರ ಮಾರ್ಗ ಗಮನಿಸಲಾಗಿದೆ. ಜತೆಗೆ ಕ್ಯಾಮೆರಾ ಟ್ರ್ಯಾಪ್ ವಿಧಾನದಲ್ಲಿ ಕಪ್ಪತ್ತಗುಡ್ಡದಲ್ಲಿ 98 ಕ್ಯಾಮೆರಾ ಅಳವಡಿಸಿ 30 ದಿನ ನಿರಂತರ ವೀಕ್ಷಿಸಲಾಗಿದೆ. ಈ ಮೂರು ವಿಧಾನಗಳಿಂದ ಪ್ರಾಣಿಗಳ ಸಂತತಿ ಸಂಖ್ಯೆ, ಅವುಗಳ ನೆಲೆ ಹಾಗೂ ಆಹಾರ ಪದ್ಧತಿ ಅಧ್ಯಯನ ಮಾಡಲಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.