ಭಾನುವಾರ, ಸೆಪ್ಟೆಂಬರ್ 26, 2021
29 °C
ನಂದಿವೇರಿ ಮಠದ ಜಾತ್ರೆ ರದ್ದಾದ ಮಾಹಿತಿ ನೀಡದಿದ್ದಕ್ಕೆ ಬೇಸರ

ದೇವರ ದರ್ಶನ ಸಿಗದೇ ಭಕ್ತರು ವಾಪಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಡಂಬಳ (ಗದಗ ಜಿಲ್ಲೆ): ಕಪ್ಪತ್ತಗುಡ್ಡದ ನಂದಿವೇರಿ ಮಠದ ಜಾತ್ರೆಗೆ ಗುರುವಾರ ವಿವಿಧ ಜಿಲ್ಲೆಗಳಿಂದ ಬಂದಿದ್ದ ಭಕ್ತರನ್ನು ಪೊಲೀಸರು ಡೋಣಿತಾಂಡದಲ್ಲೇ ತಡೆದಿದ್ದರಿಂದ ನೂರಾರು ಜನರು ಗುರುವಾರ ಬೇಸರಗೊಂಡು ಹಿಂದಿರುಗಿದರು.

ಜಿಲ್ಲಾಧಿಕಾರಿ ಆದೇಶದಂತೆ ಕೋವಿಡ್–19 ಮಾರ್ಗಸೂಚಿ ಅನ್ವಯ ಜಾತ್ರೆಯನ್ನು ಸರಳವಾಗಿ ಆಚರಣೆ ಮಾಡಲು ನಂದಿವೇರಿ ಮಠ ನಿರ್ಧರಿಸಿತ್ತು. ಆದರೆ, ಈ ಬಗ್ಗೆ ಅರಿವಿಲ್ಲದೇ ನೂರಾರು ಭಕ್ತರು ಗದಗ ಜಿಲ್ಲೆಯ ಆಸುಪಾಸಿನ ಜಿಲ್ಲೆಗಳಿಂದ ವಾಹನಗಳಲ್ಲಿ ಬಂದಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಜನರನ್ನು ಪೊಲೀಸರು ಡೋಣಿತಾಂಡ ಬಳಿಯೇ ಬ್ಯಾರಿಕೇಡ್‌ ಹಾಕಿ ತಡೆಹಿಡಿದರು. ಇದರಿಂದಾಗಿ ಅವರು ದೇವರ ದರ್ಶನ ಪಡೆಯಲು ಸಾಧ್ಯವಾಗದೇ ವಾಪಸ್‌ ತೆರಳಿದರು.   

‘ಕಪ್ಪತ್ತಗುಡ್ಡದ ನಂದಿವೇರಿ ಮಠದ ಜಾತ್ರೆ ಗದಗ ಜಿಲ್ಲೆಗೆ ಮಾತ್ರ ಸೀಮಿತವಲ್ಲ. ರಾಜ್ಯದ ಪ್ರತಿಯೊಂದು ಜಿಲ್ಲೆಗೂ ಸಂಬಂಧವಿದೆ. ಸಾವಿರಾರು ಭಕ್ತರು ಇದ್ದಾರೆ. ಜಾತ್ರೆ ರದ್ದಾದ ಕುರಿತು ಪತ್ರಿಕೆ ಅಥವಾ ಟಿವಿಗಳ ಮೂಲಕ ಮಾಹಿತಿ ನೀಡಬೇಕಿತ್ತು. ದೂರದ ಊರಿನಿಂದ ವಾಹನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದಿದ್ದಾರೆ. ಕನಿಷ್ಠ ದೇವರ ದರ್ಶನಕ್ಕಾದರೂ ಅವಕಾಶ ನೀಡಬೇಕಿತ್ತು. ಆದರೆ ಕಪ್ಪತ್ತಗುಡ್ಡ ಪ್ರವೇಶ ಮಾಡಲಿಕ್ಕೆ ಅವಕಾಶ ದೊರೆಯದ ಹಿನ್ನೆಲೆಯಲ್ಲಿ ಮರಳಿ ಹೋಗುತ್ತಿದ್ದೇವೆ’ ಎಂದು ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲ್ಲೂಕಿನ ಕೊಂಡಿಕೊಪ್ಪ ಗ್ರಾಮದ ವಾಸು ಕಿರೆಸೂರ ಹಾಗೂ ಕೊಪ್ಪಳ ಜಿಲ್ಲೆಯ ಹಟ್ಟಿ ಗ್ರಾಮದ ಕೊಟೇಪ್ಪ ಕರಿಗಾರ ಮತ್ತು ಮರಿಯಪ್ಪ ಬೇಸರ ವ್ಯಕ್ತಪಡಿಸಿದರು.

‘ಭಕ್ತರು ಗಿಡ–ಗಂಟಿಗಳ ಸಹಾಯದಿಂದ ಹಂದರ ನಿರ್ಮಾಣ, ತೊಟ್ಟಿಲು ಕಟ್ಟುವುದು, ಗಾಳಿಗುಂಡಿ ಬಸವೇಶ್ವರ ದೇವಸ್ಥಾನದಲ್ಲಿ ಪೇರಲೆ ಹಣ್ಣು ಉಜ್ಜಿ ತಮ್ಮ ಇಷ್ಟಾರ್ಥವನ್ನು ಈಡೇರಿಸುವಂತೆ ಬೇಡಿಕೊಳ್ಳುತ್ತಿದ್ದರು. ಈ ಸಲ ಅದಕ್ಕೂ ಅವಕಾಶವಿಲ್ಲ’ ಎಂದು ನೆರೇಗಲ್‌ನ ಭಕ್ತೆ ಮಂಜುಳಾ ಅಲವತ್ತುಕೊಂಡರು.

‘ಭಕ್ತರು ವಾಪಸ್‌ ಹೋಗಿದ್ದಕ್ಕೆ ಬೇಸರವಿದೆ’

‘ಸಂಭಾವ್ಯ ಕೋವಿಡ್ ಮೂರನೇ ಅಲೆ ಪರಿಣಾಮ ಜಿಲ್ಲಾಧಿಕಾರಿ ಆದೇಶದಂತೆ ಜಾತ್ರೆಯನ್ನು ಡೋಣಿ, ಡೋಣಿತಾಂಡ, ಡಂಬಳ, ಹಿರೇವಡ್ಡಟ್ಟಿ ಮುಂತಾದ ಗ್ರಾಮದ ಭಕ್ತರ ಸಮ್ಮುಖದಲ್ಲಿ ಸರಳವಾಗಿ ಆಚರಣೆ ಮಾಡಲಾಗಿದೆ’ ಎಂದು ಕಪ್ಪತಗುಡ್ಡದ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ಹೇಳಿದ್ದಾರೆ.

‘ಶ್ರಾವಣ ಮಾಸದ ಕೊನೆಯ ದಿನ ಜಾತ್ರೆ ನಡೆಯುತ್ತದೆ. ದೇವರ ದರ್ಶನ ದೊರೆಯದೆ ಭಕ್ತರು ವಾಪಸ್‌ ಹೋಗಿದ್ದಕ್ಕೆ ಬೇಸರವಿದೆ. ಆದರೆ, ಸರ್ಕಾರದ ನಿಯಮ ಪಾಲನೆ ಮಾಡುವುದು ಎಲ್ಲರ ಕರ್ತವ್ಯ. ಭಕ್ತರು ಸಹಕರಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.