ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪತಮಲ್ಲೇಶ್ವರ ಜಾತ್ರೆಗೆ ವನಸಿರಿಯ ಸ್ವಾಗತ..!

ಹಸಿರು ಉಟ್ಟು ಮಿನುಗುತ್ತಿರುವ ಜಿಲ್ಲೆಯ ಅಪರೂಪದ ಜೀವವೈವಿಧ್ಯ ತಾಣ
Last Updated 30 ಆಗಸ್ಟ್ 2018, 13:55 IST
ಅಕ್ಷರ ಗಾತ್ರ

ಡಂಬಳ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಹೆಸರಾದ ಜಿಲ್ಲೆಯ ಕಪ್ಪತಗುಡ್ಡದಲ್ಲಿ ಈಗ ಹಸಿರು ಸಂಭ್ರಮ. 80 ಸಾವಿರ ಎಕರೆ ವ್ಯಾಪ್ತಿಯಲ್ಲಿ ವಿಶಾಲವಾಗಿ ಹಬ್ಬಿಕೊಂಡಿರುವ ಈ ಗುಡ್ಡ ಹಸಿರು ಹೊನ್ನು ಉಟ್ಟು ಮಿನುಗುತ್ತಿದ್ದು, ಶ್ರಾವಣ ಮಾಸದ ವಿಶೇಷ ಜಾತ್ರೆಗೆ ಸಿದ್ದವಾಗಿದೆ.

ಗುಡ್ಡದಲ್ಲಿರುವ ಕಪ್ಪತಮಲ್ಲೇಶ್ವರ ದೇವರ ಜಾತ್ರೆಯು ಸೆ.2 ರಂದು ನಡೆಯಲಿದೆ. ಸೆ.1ರಂದು ಡಂಬಳ ಗ್ರಾಮದಿಂದ ಕಪ್ಪತಮಲ್ಲೇಶ್ವರ ಹಾಗೂ ಭ್ರಮರಾಂಭದೇವಿಯ ಪಲ್ಲಕ್ಕಿ ಗುಡ್ಡಕ್ಕೆ ಹೋಗುತ್ತದೆ. ಸೆ. 2ರಂದು ಕಪ್ಪತಮಲ್ಲೇಶ್ವರ ಹಾಗೂ ದೇವಿಯ ವಿವಾಹ ನಡೆಯುತ್ತದೆ. ಸೆ. 3ರಂದು ಡಂಬಳ ಗ್ರಾಮದಲ್ಲಿ ವಿವಿಧ ಕಲಾತಂಡಗಳಿಂದ ಇಲ್ಲಿನ ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣೆಗೆ ನಡೆಯುತ್ತದೆ.

ಪ್ರಸಕ್ತ ಮುಂಗಾರಿನಲ್ಲಿ ಧಾರಾಕಾರ ಮಳೆಯಾದ ಬೆನ್ನಲ್ಲೇ ಬೆಟ್ಟಶ್ರೇಣಿಯಲ್ಲಿ ಹಸಿರು ಚಿಗುರೊಡೆದಿದೆ. ಎಪ್ಪತ್ತು ಗುಡ್ಡ ನೋಡುವದಕ್ಕಿಂತ ಕಪ್ಪತ್ತಗುಡ್ಡ ನೋಡು ಎನ್ನುವ ಹಿರಿಯರ ಮಾತಿನಂತೆ, ಜಾತ್ರೆಯ ನೆಪದಲ್ಲಿ ಪರಿಸರ ಪ್ರೇಮಿಗಳ ಕಾಲುಗಳು ಗುಡ್ಡದ ದಾರಿ ಹಿಡಿದಿವೆ.ಕಣ್ಣು ಹಾಯಿಸಿದಷ್ಟು ದೂರದಲ್ಲಿ ಇಡೀ ಬೆಟ್ಟ ಹಸಿರು ಹೊದ್ದು ನಿಂತಿದೆ. ನವ ಜೋಡಿಗಳು ಜಾತ್ರೆಯಲ್ಲಿ ಭಾಗವಹಿಸಿ ಸಂತಾನ ಭಾಗ್ಯಕ್ಕಾಗಿ ಪ್ರಾರ್ಥಿಸಿ, ಆಲದ ಮರಕ್ಕೆ ತೊಟ್ಟಿಲು ಕಟ್ಟುವುದು ಇಲ್ಲಿನ ವಿಶೇಷ. ಹೊಸದಾಗಿ ಮನೆ ನಿರ್ಮಿಸಲು ಬಯಸುವವರು, ಜಾತ್ರೆಯಲ್ಲಿ ಭಾಗವಹಿಸಿ, ಬೆಟ್ಟದ ತುದಿಯಲ್ಲಿ ಕಲ್ಲಿನಿಂದ ಚಿಕ್ಕ ಮನೆ ನಿರ್ಮಿಸಿ, ಹರಕೆ ಹೊತ್ತುಕೊಂಡರೆ, ಮುಂದಿನ ವರ್ಷ ಜಾತ್ರೆ ಹೊತ್ತಿಗೆ ಮನೆನಿರ್ಮಾಣ ಪೂರ್ತಿಯಾಗಿರುತ್ತದೆ ಎನ್ನುವುದು ನಂಬಿಕೆ.

‘ಜಾತ್ರೆಯಲ್ಲಿ ಭಾಗವಹಿಸಿ ಆಲದ ಮರಕ್ಕೆ ಬಟ್ಟೆಯಿಂದ ತೊಟ್ಟಿಲು ಕಟ್ಟಿ, ಅದರಲ್ಲಿ ಹಣ್ಣು, ಕಾಯಿ ಇಟ್ಟು 5 ಬಾರಿ ತೂಗಿದರೆ ಬಂಜೆ ಎಂಬ ಹಣೆಪಟ್ಟ ಕಳಚವುದು ಖಾತ್ರಿ’ ಎನ್ನುತ್ತಾರೆ ಡಂಬಳ ಗ್ರಾಮದ ವಿ.ಟಿ ಮೇಟಿ ಹಾಗೂ ಡೋಣಿ ಗ್ರಾಮದ ಭರಮಪ್ಪ ಕಿಲಾರಿ.

ಶ್ರಾವಣ ಮಾಸದಲ್ಲಿ ಕಪ್ಪತಮಲ್ಲೇಶ್ವರ ಜಾತ್ರೆಗೆ ಬರುವ ಸಾವಿರಾರು ಭಕ್ತರು,ಇರುವೆಯ ಸಾಲಿನಂತೆ ಗುಡ್ಡ ಹತ್ತುವುದನ್ನು ನೋಡುವುದೇ ಕಣ್ಣಿಗೆ ಸೊಗಸು. ಗುಡ್ಡದ ತುತ್ತತುದಿಯಲ್ಲಿರುವ ಗಾಳಿ ಗುಂಡಿ ಬಸಪ್ಪನ ಸನ್ನಿಧಿಗೆ ಹೋಗಿ ಬಂದರೆ, ಬದುಕಿನ ಎಲ್ಲ ಕಷ್ಟಗಳು ಕಳೆಯುತ್ತವೆ ಎನ್ನುವ ಬಲವಾದ ನಂಬಿಕೆ ಈ ಭಾಗದ ಭಕ್ತರಲ್ಲಿದೆ. ಧಾರವಾಡ, ದಾವಣಗೆರೆ, ಕೊಪ್ಪಳ,ಬಳ್ಳಾರಿ, ರಾಯಚೂರ, ಹಾವೇರಿ ಜಿಲ್ಲೆಗಳಿಂದಲೂ ಜಾತ್ರೆಗೆ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT