ಮಂಗಳವಾರ, ಫೆಬ್ರವರಿ 7, 2023
27 °C
ಕರ್ನಾಟಕ ರಕ್ಷಣಾ ವೇದಿಕೆ ಗದಗ ಜಿಲ್ಲಾ ಘಟಕದಿಂದ ಪ್ರತಿಭಟನೆ

ದೌರ್ಜನ್ಯ ನಡೆಸುವವರ ವಿರುದ್ಧ ಕಠಿಣ ಕ್ರಮ ವಹಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಬೆಳಗಾವಿ ವಿವಾದ ಕೆಣಕಿ ಮಹಾರಾಷ್ಟ್ರದಲ್ಲಿನ ಕನ್ನಡಿಗರ ಮೇಲೆ, ಕನ್ನಡಿಗರ ಸಂಸ್ಥೆ ಹಾಗೂ ಕನ್ನಡಿಗರ ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸುತ್ತಿರುವವರ ಮೇಲೆ ಕ್ರಮಕ್ಕೆ ಒತ್ತಾಯಿಸಿ ಟಿ.ಎ.ನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಪದಾಧಿಕಾರಿಗಳು ಗುರುವಾರ ಗಾಂಧಿ ಸರ್ಕಲ್‌ನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.

ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎಚ್.ಎಸ್.ಸೋಂಪುರ ಮಾತನಾಡಿ, ‘ಬೆಳಗಾವಿ ವಿವಾದ ಈಗ ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆ ಬಾಕಿ ಇದೆ. ಇಂತಹ ಸಂದರ್ಭದಲ್ಲಿ ಈ ನೆಲದ ಕಾನೂನಿಗೆ ಗೌರವ ನೀಡಿ, ತೀರ್ಪಿಗಾಗಿ ಕಾಯುವ ಬದಲು ಬೆಳಗಾವಿಯಲ್ಲಿ ಸಂಘರ್ಷ ಮೂಡಿಸಲು ಯತ್ನಿಸಲಾಗುತ್ತಿದೆ. ಇದರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣಗೌಡ  ನೇತೃತ್ವದಲ್ಲಿ ಮೊದಲಿನಿಂದಲೂ ಹೋರಾಡುತ್ತ ಬಂದಿದ್ದು, ಬೆಳಗಾವಿಯಲ್ಲಿ ಶಾಂತಿಸ್ಥಾಪನೆ ದೃಷ್ಟಿಯಿಂದ ಎಂಇಎಸ್ ಸಂಘಟನೆಯನ್ನು ನಿರ್ಬಂಧಿಸಬೇಕು’ ಎಂದು ಆಗ್ರಹಿಸಿದರು.

ರಾಜ್ಯ ಕಾರ್ಯದರ್ಶಿ ಹನುಮಂತ ಅಬ್ಬಿಗೇರಿ ಹಾಗೂ ಕರವೇ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಎಸ್. ಗೋಡಿ ಇವರು ಗದಗ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

‘ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ವಿನಾಕಾರಣ ದೌರ್ಜನ್ಯ ಎಸಗಲಾಗುತ್ತಿದೆ. ಕನ್ನಡಿಗರ ಆಸ್ತಿಪಾಸ್ತಿಗಳ ಮೇಲೆ ದಾಳಿಗಳಾಗುತ್ತಿವೆ. ಕನ್ನಡಿಗರು ಕಟ್ಟಿದ ಸಂಸ್ಥೆಗಳನ್ನು ಗುರಿಯಾಗಿಟ್ಟುಕೊಂಡು ವಿಧ್ವಂಸಕ ಕೃತ್ಯಗಳನ್ನು ಎಸಗಲಾಗುತ್ತಿದೆ. ಕನ್ನಡಿಗರ ಮೇಲಿನ ದಾಳಿ-ದೌರ್ಜನ್ಯಗಳು ಭಯೋತ್ಪಾದನೆಗೆ ಸಮ. ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಮಹಾರಾಷ್ಟ್ರದ ಬಹುತೇಕ ಎಲ್ಲ ರಾಜಕೀಯ ಪಕ್ಷಗಳೂ ಕನ್ನಡಿಗರ ವಿರುದ್ಧ ನಡೆಯುತ್ತಿರುವ ದಾಳಿಗಳಿಗೆ ಪ್ರಚೋದನೆ ನೀಡುತ್ತಿವೆ. ಶಿವಸೇನೆಯ ಎರಡೂ ಬಣಗಳು ಮತ್ತು ಎನ್‍ಸಿಪಿ, ಎಂ.ಎನ್.ಎಸ್ ಪಕ್ಷಗಳು ವಿಶೇಷವಾಗಿ ಈ ಕುಕೃತ್ಯಗಳಲ್ಲಿ ನೇರವಾಗಿ ಶಾಮೀಲಾಗಿವೆ’ ಎಂದು ಅವರು ಮನವಿಯಲ್ಲಿ ಆರೋಪಿಸಿದ್ದಾರೆ. 

‘ಮಹಾರಾಷ್ಟ್ರದ ಕನ್ನಡಿಗರ ರಕ್ಷಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಿದರು.

ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕ ಚೇತನ ಕಣವಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ್ ಹೊಗೆಸೊಪ್ಪಿನ, ಯುವ ಘಟಕದ ಜಿಲ್ಲಾ ಉಪಾಧ್ಯಕ್ಷ ಮಾರುತಿ ಈಳಗೇರ, ಜಿಲ್ಲಾ ವಕ್ತಾರ ವಿರೂಪಾಕ್ಷ ಹಿತ್ತಲಮನಿ, ಗದಗ ತಾಲ್ಲೂಕು ಅಧ್ಯಕ್ಷ ನಾಗಪ್ಪ ಅಣ್ಣಿಗೇರಿ, ಬಸವರಾಜ್ ವಡವಿ, ನಬಿಸಾಬ್ ಕಿಲ್ಲೆದಾರ, ಅಜೀಮ್ ಕಾಜಿ, ದಾವಲ್ ತಹಶೀಲ್ದಾರ್ ಸೇರಿದಂತೆ ಕರವೇ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು