ಭಾನುವಾರ, ನವೆಂಬರ್ 17, 2019
24 °C
ಕೆಡಿಪಿ ಸಭೆಯಲ್ಲಿ ನಿರ್ಧಾರ; ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಸಿದ್ಧತೆ

ನೆರೆ ಪೀಡಿತ ಗ್ರಾಮಗಳಿಗೆ ಕರ ಮನ್ನಾ ಯೋಜನೆ?

Published:
Updated:
Prajavani

ಗದಗ: ‘ಜಿಲ್ಲೆಯ ರೋಣ, ನರಗುಂದ ತಾಲ್ಲೂಕುಗಳ ನೆರೆ ಪೀಡಿತ ಗ್ರಾಮಗಳ ಗ್ರಾಮಸ್ಥರು 2019ರ ಆಗಸ್ಟ್‌ನಿಂದ ಮಾರ್ಚ್‌ವರೆಗಿನ (8 ತಿಂಗಳ) ಗ್ರಾಮ ಪಂಚಾಯ್ತಿಗೆ ಸಂದಾಯ ಮಾಡಬೇಕಾದ ಕರವನ್ನು ಮನ್ನಾ ಮಾಡಲು ಗುರುವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

‘ಪ್ರವಾಹ ಪೀಡಿತ ಪ್ರದೇಶಗಳ ಜನರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಶೀಘ್ರದಲ್ಲೇ ಈ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸಿದ್ದು ಪಾಟೀಲ ಹೇಳಿದರು.

‘ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಪೂರೈಸಲಾಗುವ 20 ಲೀಟರ್‌ ನೀರಿನ ದರವನ್ನು ₹2 ರಿಂದ ₹5ಕ್ಕೆ ಹೆಚ್ಚಿಸಲಾಗಿದೆ. ಆದರೆ, ಈ ಮೊದಲಿನ ದರದಲ್ಲೇ ನೀರು ಪೂರೈಸಬೇಕು. ನ.14 ರ ಒಳಗಾಗಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯೊಳಗೆ ಬರುವ ಎಲ್ಲ ಶುದ್ದ ನೀರಿನ ಘಟಕಗಳು ಕಾರ್ಯನಿರ್ವಹಿಸುವಂತೆ ಮಾಡಬೇಕು’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು ಸೂಚಿಸಿದರು.

‘ಜಿಲ್ಲಾ ಪಂಚಾಯ್ತಿ ಸಭೆ ಕುರಿತು ಕನಿಷ್ಠ 3 ದಿನಗಳ ಮುಂಚಿತವಾಗಿ ಸ್ಥಾಯಿ ಸಮಿತಿಗೆ ಮಾಹಿತಿ ನೀಡಬೇಕು. ವಿವಿಧ ಇಲಾಖೆಗಳು  ಕೈಗೊಂಡ ಕಾಮಗಾರಿಗಳ ಅಂಕಿ ಅಂಶವನ್ನು ಪಡೆದುಕೊಳ್ಳಬೇಕು. ಸೂಕ್ತ ಮಾಹಿತಿ ನೀಡಲು ನಿರಾಕರಿಸಿದರೆ ನೋಟಿಸ್‌ ನೀಡಿ, ವಿವರಣೆ ಪಡೆಯಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಕೃಷಿ ಇಲಾಖೆಯು ತ್ವರಿತವಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ರೈತರಿಗೆ ತಾಡಪತ್ರಿ ವಿತರಿಸಬೇಕು. ತೋಟಗಾರಿಕೆ ಇಲಾಖೆಯು ಉದ್ಯೋಗ ಖಾತ್ರಿ ಯೋಜನೆಯನ್ನು ಬಳಸಿಕೊಂಡು ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಕನಿಷ್ಠ 50 ಹೆಕ್ಟೇರ್‌ ತೋಟವನ್ನು ಅಭಿವೃದ್ಧಿಪಡಿಸಬೇಕು. ಪ್ರವಾಹ ಪೀಡಿತ ಸ್ಥಳದಲ್ಲಿ ಹಾನಿಗೊಳಗಾದ ಶಾಲಾ ಕಟ್ಟಡಗಳ ದುರಸ್ತಿಯನ್ನು ಶೀಘ್ರವಾಗಿ ಕೈಗೊಳ್ಳಬೇಕು’ ಎಂದರು.

‘ಇಲಾಖೆಗಳ ಮುಖ್ಯಸ್ಥರು ಕೆಡಿಪಿ ಸಭೆಗೆ  ಗೈರು ಹಾಜರಾಗುತ್ತಿದ್ದರೆ ಪೂರ್ವಾನುಮತಿ ಪಡೆಯಬೇಕು’ ಎಂದು ಜಿಲ್ಲಾ ಪಂಚಾಯ್ತಿ ಕಾರ್ಯದರ್ಶಿ ಡಿ. ಪ್ರಾಣೇಶರಾವ್‌ ಸೂಚಿಸಿದರು.

‘ಜಿಲ್ಲೆಯಲ್ಲಿ ನೆರೆ ಪೀಡಿತ ಪ್ರದೇಶಗಳಲ್ಲಿ ಅಕ್ಕಿ, ಬೇಳೆ, ಸಕ್ಕರೆ ಅಡುಗೆ ಎಣ್ಣೆ, ಸೀಮೆಎಣ್ಣೆ ಒಳಗೊಂಡ 10 ಸಾವಿರ ಆಹಾರ ಧಾನ್ಯಗಳ ಕಿಟ್‌ ವಿತರಿಸಲಾಗಿದೆ’ ಎಂದು ನಗರಾಭಿವೃದ್ಧಿ ಕೋಶದ ನಿರ್ದೇಶಕ ಎಸ್‌.ಎನ್‌ ರುದ್ರೇಶ ಸಭೆಗೆ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಪೂಜಾರ, ಶಿಕ್ಷಣ ಸ್ಥಾಯಿ ಸಮಿತಿ ಅದ್ಯಕ್ಷ ಶಿವಕುಮಾರ ನೀಲಗುಂದ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಈರಪ್ಪ ನಾಡಗೌಡ್ರ ಇದ್ದರು.

ಪ್ರತಿಕ್ರಿಯಿಸಿ (+)