ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದಿಂದ ಮಕ್ಕಳು ವಂಚಿತರಾಗದಿರಲಿ: ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು

ಪ್ರಗತಿ ಪರಿಶೀಲನಾ ಸಭೆ: ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಸೂಚನೆ
Last Updated 29 ಸೆಪ್ಟೆಂಬರ್ 2020, 16:39 IST
ಅಕ್ಷರ ಗಾತ್ರ

ಗದಗ: ‘ಕೋವಿಡ್-19 ಸಂದರ್ಭದಲ್ಲಿ ಪಾಲನಾ ಸಂಸ್ಥೆಯ ಮಕ್ಕಳು ಪೋಷಕರ ವಶದಲ್ಲಿದ್ದು, ಅವರು ಶಿಕ್ಷಣದಿಂದ ವಂಚಿತರಾಗದಂತೆ ಕ್ರಮವಹಿಸಬೇಕು. ಶಿಕ್ಷಣ ಇಲಾಖೆಯ ವಿದ್ಯಾಗಮ ಯೋಜನೆಯ ಸೌಲಭ್ಯ ಆ ಮಕ್ಕಳಿಗೆ ಸಿಗುವಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಸೂಚಿಸಿದರು.

ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ, ಜಿಲ್ಲಾ ಮಕ್ಕಳ ಪಾಲನಾ ಸಂಸ್ಥೆಗಳ ತನಿಖಾ ಸಮಿತಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಮಕ್ಕಳು ವಿದ್ಯಾಗಮ ಯೋಜನೆಯ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆಯೇ; ಇಲ್ಲವೇ ಎಂಬುದರ ಬಗ್ಗೆಮಕ್ಕಳ ರಕ್ಷಣಾಧಿಕಾರಿ ಹಾಗೂ ಮಕ್ಕಳ ಪಾಲನಾ ಸಂಸ್ಥೆಯ ಮುಖ್ಯಸ್ಥರು ಮೇಲ್ವಿಚಾರಣೆ ನಡೆಸಿ, ಖಾತ್ರಿಪಡಿಸಿಕೊಳ್ಳಬೇಕು. ಮಕ್ಕಳ ರಕ್ಷಣೆ, ಮೇಲ್ವಿಚಾರಣೆ ಮಾಡಲು ತಾಲ್ಲೂಕು ಮತ್ತು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣಾ ಸಮಿತಿ ಸಭೆಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ನಡೆಸಿ, ವರದಿ ಸಲ್ಲಿಸಬೇಕು’ ಎಂದು ಸೂಚಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎ.ಎಸ್.ಗೋಟಖಿಂಡಿ ತ್ರೈಮಾಸಿಕ ಪ್ರಗತಿ ವರದಿ ಸಲ್ಲಿಸಿ ಮಾತನಾಡಿ, ‘ಜಿಲ್ಲೆಯಲ್ಲಿ ವಿಶೇಷ ಪಾಲನಾ ಯೋಜನೆ ಅಡಿಯಲ್ಲಿ ನಾಲ್ಕನೇ ತ್ರೈಮಾಸಿಕದಲ್ಲಿ 409 ಫಲಾನುಭವಿಗಳಿಗೆ ₹10.76 ಲಕ್ಷ ಹಾಗೂ ಪ್ರಾಯೋಜಕತ್ವ ಯೋಜನೆ ಅಡಿಯಲ್ಲಿ 100 ಫಲಾನುಭವಿಗಳಿಗೆ ₹9.72 ಲಕ್ಷ ಅನುದಾನವನ್ನು ಆರ್‌ಟಿಜಿಎಸ್‌ ಮಾಡಲಾಗಿದೆ. ಅಭಯಾ ನಿಧಿ ಯೋಜನೆ ಅಡಿ 17 ಮಂದಿ ಫಲಾನುಭವಿಗಳಿಗೆ ₹85 ಸಾವಿರ ಅನುದಾನ ನೀಡಲಾಗಿದೆ’ ಎಂದು ತಿಳಿಸಿದರು.

‘ವಿಶೇಷ ದತ್ತು ಕಾರ್ಯಕ್ರಮ ಯೋಜನೆಯಡಿ ಅನಾಥ, ಪರಿತ್ಯಕ್ತ, ಒಪ್ಪಿಸಿದ 7 ಮಂದಿ ಮಕ್ಕಳನ್ನು ಸ್ವೀಕರಿಸಲಾಗಿದೆ. ಆ ಮಕ್ಕಳನ್ನು ಸೇವಾ ಭಾರತಿ ಟ್ರಸ್ಟ್, ವಿಶೇಷ ದತ್ತು ಸಂಸ್ಥೆಯಲ್ಲಿ ಪೋಷಣೆ ಮಾಡಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ದತ್ತು ಮುಕ್ತ ಆದೇಶ ಪಡೆಯಲಾಗಿದೆ. ಒಂದು ಮಗುವನ್ನು ಕಾನೂನು ಬದ್ಧವಾಗಿ ದತ್ತು ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಉಸ್ಮಾನ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಂಯೋಜಕರು, ಬಾಲನ್ಯಾಯ ಮಂಡಳಿಯ ಸದಸ್ಯರು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು, ಮಕ್ಕಳ ಸಹಾಯವಾಣಿ ಸಂಸ್ಥೆಯ ಪ್ರತಿನಿಧಿಗಳು, ಮಕ್ಕಳ ಪಾಲನಾ ಸಂಸ್ಥೆಯ ಪ್ರತಿನಿಧಿಗಳು ಹಾಗೂವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

‘58 ಪ್ರಕರಣಗಳು ಬಾಕಿ‌’

‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಡಿ ತ್ರೈಮಾಸಿಕದಲ್ಲಿ 10 ಪ್ರಕರಣ ವರದಿಯಾಗಿವೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎ.ಎಸ್.ಗೋಟಖಿಂಡಿ ತಿಳಿಸಿದರು.

‘ಒಟ್ಟು 137 ಪ್ರಕರಣಗಳು ಇದ್ದು ಅದರಲ್ಲಿ 79 ಪ್ರಕರಣಗಳು ವಿಲೇವಾರಿಯಾಗಿವೆ. 58 ಪ್ರಕರಣಗಳು ಬಾಕಿ ಉಳಿದಿವೆ.ದೌರ್ಜನ್ಯಕ್ಕೆ ಒಳಗಾದ 17 ಮಂದಿ ಬಾಲಕಿಯರಿಗೆ ₹85 ಸಾವಿರವನ್ನು ಅಭಯಾ ನಿಧಿ ಅಡಿಯಲ್ಲಿ ಸಂದಾಯ ಮಾಡಲಾಗಿದೆ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ 63 ಹೊಸ ಪ್ರಕರಣಗಳು ದಾಖಲಾಗಿರುತ್ತವೆ. ಬೇರೆ ಜಿಲ್ಲೆಗೆ 8 ಮಕ್ಕಳನ್ನು ವರ್ಗಾಯಿಸಲಾಗಿದೆ. 74 ಮಕ್ಕಳನ್ನು ಪೋಷಕರಿಗೆ ಒಪ್ಪಿಸಿದ್ದು, ಒಂದು ಮಗುವನ್ನು ಮಕ್ಕಳ ಪಾಲನಾ ಸಂಸ್ಥೆಯಲ್ಲಿ ದಾಖಲಿಸಲಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT