ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದುಗಿನವರು ಸಂಸದರಾಗಿದ್ದು ನಾಲ್ವರು ಮಾತ್ರ!

ಲೋಕಸಭೆ ಪ್ರವೇಶಿಸಿದ ಜಗನ್ನಾಥರಾವ್ ಜೋಶಿ, ವಿಜಯ ಸಂಕೇಶ್ವರ, ಐ.ಜಿ. ಸನದಿ, ಆರ್.ಎಸ್.ಪಾಟೀಲ
Last Updated 26 ಏಪ್ರಿಲ್ 2019, 10:03 IST
ಅಕ್ಷರ ಗಾತ್ರ

ಗದಗ: ಪ್ರತಿ ಲೋಕಸಭಾ ಚುನಾವಣೆ ಬಂದಾಗಲೊಮ್ಮೆ ಜಿಲ್ಲೆಯ ಮತದಾರರಿಗೆ ಅನಾಥ ಪ್ರಜ್ಞೆ ಕಾಡುತ್ತಿತ್ತು. ಇದಕ್ಕೆ ಕಾರಣ ಪ್ರತ್ಯೇಕ ಜಿಲ್ಲೆಯಾಗಿದ್ದರೂ, ಗದುಗಿಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರವೇ ಇಲ್ಲದಿರುವುದು ಮತ್ತು ಅಭ್ಯರ್ಥಿಗಳ ಆಯ್ಕೆಯಲ್ಲೂ ಜಿಲ್ಲೆಗೆ ಅವಕಾಶ ಲಭಿಸದಿರುವುದು.ಆದರೆ, ಈ ಬಾರಿ ಹಾವೇರಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಲು ಗದುಗಿನ ಡಿ.ಆರ್‌ ಪಾಟೀಲ ಅವರಿಗೆ ಅವಕಾಶ ಲಭಿಸಿದೆ.

ಆದರೆ, ಗದಗ ಪ್ರತ್ಯೇಕ ಜಿಲ್ಲೆಯಾಗುವುದಕ್ಕಿಂತ ಮೊದಲು ಅಂದರೆ, ಅವಿಭಜಿತ ಧಾರವಡ ಜಿಲ್ಲೆಗೆ ಸೇರಿದ್ದಾಗ, ಗದುಗಿನಲ್ಲಿ ಜನಿಸಿ, ಇಲ್ಲಿಂದ ಬೇರೆ ಕಡೆ ಹೋಗಿ, ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ, ನಾಲ್ವರು ಸಂಸದರಾಗಿ ಆಯ್ಕೆಯಾಗಿದ್ದಾರೆ.

ಜಗನ್ನಾಥರಾವ್ ಜೋಶಿ: ಜನಸಂಘದ ಸಂಸ್ಥಾಪಕರಲ್ಲಿ ಒಬ್ಬರಾಗಿರುವ, ಕರ್ನಾಟಕದ ಕೇಸರಿ ಎಂದೇ ಹೆಸರಾಗಿದ್ದ ಜಗನ್ನಾಥರಾವ್ ಜೋಶಿ ಅವರು ಜಿಲ್ಲೆಯ ನರಗುಂದದಲ್ಲಿ 1920ರಲ್ಲಿ ಜನಿಸಿದವರು. ಜನಸಂಘದ ಟಿಕೆಟ್‌ನಿಂದ 1952,1957 ಮತ್ತು 1962ರಲ್ಲಿ ಕ್ರಮವಾಗಿ ಧಾರವಾಡ ಉತ್ತರ, ಪುಣೆ ಮತ್ತು ಮರಳಿ ಧಾರವಾಡ ಉತ್ತರದಿಂದ ಸ್ಪರ್ಧಿಸಿ ಸೋತಿದ್ದರು. ನಂತರ ಇಲ್ಲಿಂದ ಮಧ್ಯಪ್ರದೇಶಕ್ಕೆ ತೆರಳಿ, 1967ರಲ್ಲಿ ಭೋಪಾಲ್, 1971ರಲ್ಲಿ ಶಾಜಾಪೂರ ಕ್ಷೇತ್ರದಿಂದ ಜನಸಂಘದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. 1978ರಿಂದ 1984ರ ಅವಧಿಗೆ ರಾಜ್ಯಸಭೆ ಸದಸ್ಯರಾಗಿದ್ದರು.

ವಿಜಯ ಸಂಕೇಶ್ವರ: ಉದ್ಯಮಿ ವಿಜಯ ಸಂಕೇಶ್ವರ ಅವರು ಗದಗ ಜಿಲ್ಲೆಯವರು. 1996, 1998 ಹಾಗೂ 1999ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಸತತ ಮೂರು ಬಾರಿ ಅಂದಿನ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದಿಂದ (ಇಂದಿನ ಧಾರವಾಡ ಕ್ಷೇತ್ರ) ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಆಯ್ಕೆಯಾಗಿದ್ದರು.

ಪ್ರೊ.ಐ.ಜಿ. ಸನದಿ: ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನವರಾದ ಪ್ರೊ.ಐ.ಜಿ.ಸನದಿ ಅವರು ಧಾರವಾಡ ದಕ್ಷಿಣ (ಇಂದಿನ ಹಾವೇರಿ) ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 1996 ಮತ್ತು 1999ರಲ್ಲಿ ನಡೆದ ಲೋಕಸಭಾ ಚುನಾವಣೆಗಳಲ್ಲಿ ಗೆಲುವಿನ ನಗೆ ಬೀರಿ, ಸಂಸತ್ ಪ್ರವೇಶಿಸಿದ್ದರು.

ಆರ್.ಎಸ್.ಪಾಟೀಲ: ಜಿಲ್ಲೆಯ ರೋಣದ ಆರ್.ಎಸ್. ಪಾಟೀಲ ಅವರು 1999ರಲ್ಲಿ ಬಾಗಲಕೋಟ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭೆ ಪ್ರವೇಶ ಮಾಡಿದ್ದರು.

ಜಿಲ್ಲೆಯಿಂದ ಲೋಕಸಭೆ ಪ್ರವೇಶಿಸಿದ ಈ ನಾಲ್ವರ ಪೈಕಿ, ಜಗನ್ನಾಥರಾವ್ ಜೋಶಿ ಅವರು ದೂರದ ರಾಜ್ಯವನ್ನೇ ಪ್ರತಿನಿಧಿಸಿದ್ದರು. ಆದರೆ, ಉಳಿದ ಮೂವರ ಪೈಕಿ ಪ್ರೊ.ಐ.ಜಿ. ಸನದಿ ಅವರು ಪ್ರತಿನಿಧಿಸಿದ್ದ ಧಾರವಾಡ ದಕ್ಷಿಣ ಕ್ಷೇತ್ರಕ್ಕೆ ಜಿಲ್ಲೆಯ ಶಿರಹಟ್ಟಿ ವಿಧಾನಸಭಾ ಕ್ಷೇತ್ರ ಮಾತ್ರ ಒಳಪಡುತ್ತಿತ್ತು. ಆರ್.ಎಸ್. ಪಾಟೀಲ ಅವರು ಪ್ರತಿನಿಧಿಸಿದ್ದ ಬಾಗಲಕೋಟೆ ಕ್ಷೇತ್ರಕ್ಕೆ ರೋಣ ವಿಧಾನಸಭಾ ಮತಕ್ಷೇತ್ರ ಹಾಗೂ ವಿಜಯ ಸಂಕೇಶ್ವರ ಅವರು ಸ್ಪರ್ಧಿಸಿ ಗೆಲುವು ಕಂಡ ಧಾರವಾಡ ಉತ್ತರ ಕ್ಷೇತ್ರಕ್ಕೆ ಗದಗ ಮತ್ತು ನರಗುಂದ ವಿಧಾನಸಭಾ ಕ್ಷೇತ್ರಗಳು ಸೇರಿದ್ದವು.

2008ರಲ್ಲಿ ನಡೆದ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಧಾರವಾಡ ದಕ್ಷಿಣ ಕ್ಷೇತ್ರವು ಹಾವೇರಿ ಲೋಕಸಭಾ ಕ್ಷೇತ್ರವಾಗಿ ಬಡ್ತಿ ಪಡೆಯಿತು. ಜಿಲ್ಲೆಯ ಗದಗ, ಶಿರಹಟ್ಟಿ ಹಾಗೂ ರೋಣ ಮತಕ್ಷೇತ್ರಗಳು ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಸೇರಿದವು. ನರಗುಂದ ವಿಧಾನಸಭಾ ಮತಕ್ಷೇತ್ರವು ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಹಂಚಿ ಹೋಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT