ಸೋಮವಾರ, ಏಪ್ರಿಲ್ 6, 2020
19 °C
ಕೆಐಡಿಬಿ ವಿರುದ್ಧ ರೈತರ ಆರೋಪ

ಭೂ ಪರಿಹಾರ ನೀಡದೆ ಜಮೀನು ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಡಿ: ವಾಡಿ-ಗದಗ  ರೈಲು ಮಾರ್ಗ ನಿರ್ಮಿಸಲು ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಡಿಬಿ) ರೈತರಿಗೆ ಪರಿಹಾರ ನೀಡದೆ ರೈತರ ಪಹಣಿಯಲ್ಲಿ ತನ್ನ ಹೆಸರು ಸೇರಿಸಿಕೊಂಡಿದೆ. ಬಲವಂತವಾಗಿ ನಮ್ಮ ಜಮೀನು ಕಬ್ಜೆ ಮಾಡಲಾಗಿದೆ ಎಂದು ಬಸವೇಶ್ವರ ನಗರದ ರೈತರು ದೂರಿದ್ದಾರೆ.

ರೈತರಿಗೆ ಸೂಕ್ತ ಪರಿಹಾರ ನೀಡದೆ ಸಂಬಂಧಿಸಿದ ಜಮೀನುಗಳನ್ನು ಸರ್ಕಾರ ಕೆಐಡಿಬಿಗೆ ವರ್ಗಾವಣೆ ಮಾಡಿರುವುದು ಖಂಡನೀಯ ಎಂದು ಹಲವು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ ನಮ್ಮ ಒಡೆತನದಲ್ಲಿನ ಜಮೀನನ್ನು ನಮಗೆ ಗೊತ್ತಿಲ್ಲದೆ ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ನೀಡಿರುವುದು ಎಷ್ಟರ ಮಟ್ಟಿಗೆ ಸರಿ. ನ್ಯಾಯಯುತ ಪರಿಹಾರ ನೀಡಿದ ಬಳಿಕ ಜಮೀನು ನೋಂದಣಿ ಮಾಡಿಸಿಕೊಳ್ಳಬೇಕು. ಆದರೆ ಪರಿಹಾರ ನೀಡದೆ ಜಮೀನು ಕಬ್ಜೆ ಮಾಡಿಕೊಂಡಿರುವುದು ಅನ್ಯಾಯದ ಪರಮಾವಧಿಯಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮೊದಲು ಭೂಮಿ ದರ ಇತ್ಯರ್ಥಕ್ಕೆ ಸಂಬಂಧಿಸಿ ಕಲಬುರ್ಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಾಲ್ಕೈದು ಬಾರಿ ರೈತರು ಹಾಗೂ ಕೆಐಡಿಬಿ ಅಧಿಕಾರಿಗಳ ಸಭೆ ನಡೆದಿದೆ. ಆದರೆ ಒಮ್ಮತ ಮೂಡದ ಕಾರಣ ಸಭೆ ವಿಫಲವಾಗಿದೆ. ಭೂ ಬೆಲೆ ನಿರ್ಧರಣಾ ಸಲಹಾ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಇದರ ನಡುವೆ ರೈತರ ಗಮನಕ್ಕೆ ತಾರದೆ ಕೆಐಡಿಬಿ ಸಂಸ್ಥೆ ಕಂದಾಯ ಇಲಾಖೆ ಮೂಲಕ ಪಹಣಿ ಪತ್ರದಲ್ಲಿ ತನ್ನ ಹೆಸರು ನಮೂದಿಸಿಕೊಂಡಿದೆ.

ಇದರಿಂದ ಹೌಹಾರಿದ ಹಲವು ರೈತರು ಜಮೀನು ಕಳೆದುಕೊಂಡು ಆತಂಕಕ್ಕೆ ಸಿಲುಕಿದ್ದಾರೆ. ಪಹಣಿಯಲ್ಲಿ ಹೆಸರು ತೆಗೆಯಿರಿ ಇಲ್ಲವೇ ಸೂಕ್ತ ಪರಿಹಾರ ಕೊಡಿ ಎಂದು ರೈತರು ಆಗ್ರಹಿಸಿದ್ದಾರೆ.

ಬಸವೇಶ್ವರ ನಗರದ  ಮಹ್ಮದ್ ಗೌಸ್ ಅವರ ಪಹಣಿ ಪತ್ರ ಸ.ನಂ–74 ರಲ್ಲಿ 2.29 ಎಕರೆ ಜಮೀನು, ನಾರಾಯಣ ಸೋಮ್ಲಾ ಅವರ ಪಹಣಿ ಪತ್ರ ಸ.ನಂ–72(3) ರಲ್ಲಿ 27 ಗುಂಟೆ, ಹರಿ ಸೋಮ್ಲಾ ಅವರ ಪಹಣಿ ಪತ್ರ ಸ.ನಂ 72(2)ರಲ್ಲಿ 13 ಗುಂಟೆ ಜಮೀನಿಗೆ ಕೆಐಡಿಬಿ ಸಂಸ್ಥೆ ಆಕ್ರಮವಾಗಿ ತನ್ನ ಹೆಸರು ನಮೂದಿಸಿಕೊಂಡಿದೆ ಎಂದು ರೈತರು ದೂರಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು