ಚಾಮರಾಜನಗರ: ಕೋಲ್ಕತ್ತದಲ್ಲಿ ವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಶನಿವಾರ ದೇಶದಾದ್ಯಂತ ಕರೆ ನೀಡಲಾಗಿದ್ದ ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ವೈದ್ಯರು ಹೊರರೋಗಿಗಳ ಸೇವೆ ಸ್ಥಗಿತಗೊಳಿಸಿ ಮುಷ್ಕರಕ್ಕೆ ಕೈಜೋಡಿಸಿದ್ದರು.
ಚಾಮರಾಜನಗರದಲ್ಲಿ ಜೆಎಸ್‌ಎಸ್ ಆಸ್ಪತ್ರೆ ಸೇರಿದಂತೆ ನಗರದ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಲಭ್ಯ ಇರಲಿಲ್ಲ. ಮುಷ್ಕರದ ವಿಚಾರ ತಿಳಿಯದೆ ದೂರದ ಗ್ರಾಮಗಳಿಂದ ಚಿಕಿತ್ಸೆ ಪಡೆಯಲು ಬಂದಿದ್ದ ರೋಗಿಗಳಿಗೆ ಸಮಸ್ಯೆ ಎದುರಾಯಿತು. ಆಸ್ಪತ್ರೆಗಳ ಬಳಿ ರೋಗಿಗಳು ನಿಂತಿದ್ದ ಹಾಗೂ ಮುಷ್ಕರದ ಸುದ್ದಿ ತಿಳಿದು ವಾಪಾಸ್ ತೆರಳುತ್ತಿದ್ದ ದೃಶ್ಯಗಳು ಕಂಡುಬಂತು.
ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳ ನಿವಾಸಿ ವೈದ್ಯರ ಅಸೋಸಿಯೇಷನ್ ವತಿಯಿಂದ ನಗರದಲ್ಲಿ ವೈದ್ಯರು ತೋಳಿಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಜಿಲ್ಲಾ ಆಸ್ಪತ್ರೆಯ ಮುಂಭಾಗ ಜಮಾಯಿಸಿದ ವೈದ್ಯರು ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಡಾ.ನಂದಕಿರ್ ಮಾತನಾಡಿ, ಕೊಲ್ಕತ್ತಾದ ಆರ್.ಜಿ.ಕರ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕರ್ತವ್ಯನಿರತ ಯುವ ವೈದ್ಯೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಖಂಡನೀಯ. ಪ್ರಕರಣವನ್ನು ಸಿಬಿಐಗೆ ವಹಿಸಿದ ಬಳಿಕವೂ ಸಾವಿರಾರು ಮಂದಿ ಆಸ್ಪತ್ರೆ ಮೇಲೆ ದಾಳಿ ಮಾಡಿ ಪುರಾವೆಗಳನ್ನು ನಾಶಪಡಿಸಿದ್ದಾರೆ.
ಭೀಕರ ಹತ್ಯೆಗೊಳಗಾಗಿರುವ ವೈದ್ಯೆಗೆ ನ್ಯಾಯಾಲಯ ಸೂಕ್ತ ನ್ಯಾಯ ನೀಡಬೇಕು. ಅತ್ಯಾಚಾರ ಹಾಗೂ ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಎಚ್ಚೆತ್ತುಕೊಂಡು ಕರ್ತವ್ಯ ನಿರತ ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಘೋರ ಘಟನೆ ಖಂಡಿಸಿ ಸಿಮ್ಸ್ ರೆಸಿಡೆಂಟ್ ಅಸೋಸಿಯೇಷನ್ ವತಿಯಿಂದ ಒಪಿಡಿ ವೈದ್ಯಕೀಯ ಸೇವೆ ರದ್ದುಪಡಿಸಿ ಧರಣಿ ನಡೆಸಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ತುರ್ತು ವೈದ್ಯಕೀಯ ಸೇವೆಗಳನ್ನು ಮುಂದುವರಿಸಲಾಗಿದೆ ಎಂದು ಹೇಳಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಿಮ್ಸ್ ಬೋಧನಾ ಆಸ್ಪತ್ರೆಯ ಡೀನ್ ಡಾ.ಮಂಜುನಾಥ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಡಾ.ಮಾರುತಿ, ಡಾ.ಶಿವಸ್ವಾಮಿ ಇದ್ದರು.
ಪ್ರತಿಭಟನೆಯಲ್ಲಿ ಅಸೋಸಿಯೇಷನ್ ಅಧ್ಯಕ್ಷ ಡಾ.ಪವನ್, ಉಪಾಧ್ಯಕ್ಷೆ ಡಾ.ಸ್ನೇಹಾ, ಪ್ರಧಾನ ಕಾರ್ಯದರ್ಶಿ ಡಾ.ತರುಣ್, ಖಜಾಂಚಿ ಡಾ.ದಿವ್ಯಾ, ಡಾ.ಸಂಜು, ಡಾ.ಅಭಿಷೇಕ್ ಕುಮಾರ್, ಡಾ.ಅರ್ಚನಾ, ಡಾ.ಸೈಯದ್ ಜಾಸ್ಮೀನ್, ಡಾ.ಸಮೃದ್ಧಿ, ಡಾ.ಅತುಲ್, ಡಾ.ತೇಜಸ್, ಡಾ.ಕೀರ್ತಿ, ಡಾ.ವಿನುತಾ, ಡಾ.ತನ್ಮಯ್ ಭಾಗವಹಿಸಿದ್ದರು.
ಕೊಳ್ಳೇಗಾಲದಲ್ಲೂ ಮುಷ್ಕರ
ಕೊಳ್ಳೇಗಾಲ ತಾಲ್ಲೂಕಿನಲ್ಲಿ ಶನಿವಾರ ಖಾಸಗಿ ಆಸ್ಪತ್ರೆಗಳು ಮುಷ್ಕರದಲ್ಲಿ ಭಾಗವಹಿಸಿದ್ದರಿಂದ ರೋಗಿಗಳಿಗೆ ಹೊರರೋಗಿ ವಿಭಾಗಗಳ ಸೇವೆ ಲಭ್ಯವಾಗಲಿಲ್ಲ. ಬೆಳಿಗ್ಗೆ 6 ರಿಂದಲೇ ಆಸ್ಪತ್ರೆಗಳ ಹೊರರೋಗಿಗಳ ವಿಭಾಗ ಸಂಪೂರ್ಣ ಬಂದ್ ಆಗಿತ್ತು. ನಗರದ ಜನನಿ ಆಸ್ಪತ್ರೆ ಆರ್‌ಕೆ ಆಸ್ಪತ್ರೆ ವಿಜಯಲಕ್ಷ್ಮಿ ಆಸ್ಪತ್ರೆ ಸೇರಿದಂತೆ ಹಲವು ಖಾಸಗಿ ಆಸ್ಪತ್ರೆಗಳು ಬಂದ್ ಆಗಿದ್ದವು.
ರೋಗಿಗಳು ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯತ್ತ ಮುಖ ಮಾಡುತ್ತಿದ್ದ ದೃಶ್ಯ ಕಂಡುಬಂತು. ವೈದ್ಯರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಬೇಕು. ಘಟನೆ ಖಂಡಿಸಿ ಪ್ರತಿರೋಧ ವ್ಯಕ್ತಪಡಿಸುವ ಸಲುವಾಗಿ ಹೊರರೋಗಿಗಳ ವಿಭಾಗ ಬಂದ್ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಇಂತಹ ಅನಾಹುತ ಆಗದಂತೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಜನನಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಪ್ರವೀಣ್ ಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.