ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಡು ಭೂಮಿಯಲ್ಲಿ ಕುರಿಗಾಯಿಗಳ ಅಲೆದಾಟ..!

ನೀರಿಗಾಗಿ ಪರದಾಟ; ಜಾನುವಾರುಗಳ ಮೂಕ ರೋಧನೆ
ಅಕ್ಷರ ಗಾತ್ರ

ನರೇಗಲ್: ನೀರು ಪೂರೈಕೆಯಲ್ಲಿ ಒಂದೆರಡು ದಿನ ವ್ಯತ್ಯಾಸವಾದರೆ ಜನರು ಖಾಲಿ ಕೊಡಗಳನ್ನು ಹಿಡಿದು ಸರ್ಕಾರಿ ಕಚೇರಿ ಎದುರು ಪ್ರತಿಭಟನೆ, ಗಲಾಟೆ ಮಾಡುತ್ತಾರೆ. ಆದರೆ, ಬಿರು ಬಿಸಿಲು ಮತ್ತು ಕುಡಿಯುವ ನೀರಿನ ಬವಣೆಯಿಂದ ಜಾನುವಾರುಗಳು ಅಕ್ಷರಶಃ ಪರದಾಡುತ್ತಿವೆ.

ಹೋಬಳಿಯಾದ್ಯಂತ ಕುರಿಗಾರರು, ನೀರು ಅರಸುತ್ತಾ, ಕಿ.ಮೀಗಟ್ಟಲೆ ಅಲೆದಾಡುವಂತಾಗಿದೆ. ಬಿಸಿಲಿನ ತಾಪಕ್ಕೆ ಭೂಮಿ ಕಾದ ಕಾವಲಿಯಂತಾಗಿದೆ. ಎತ್ತ ನೋಡಿದರೂ ಬರಡು ಭೂಮಿಯೇ ಎದ್ದು ಕಾಣುತ್ತಿದೆ. ಕುರಿಗಳಿಗೆ ತೊಟ್ಟು ನೀರು ಕುಡಿಸಲು ಕುರಿಗಾರರು ಪ್ರತಿನಿತ್ಯ ಹರಸಾಹಸ ಪಡುತ್ತಿದ್ದಾರೆ.

ಕುರಿಗಾರರು, ಕುರಿ ಹಿಂಡುಗಳೊಂದಿಗೆ ನೀರಾವರಿ ತೋಟ, ಗ್ರಾಮಗಳ ಸಮೀಪ ಇರುವ ದೊಡ್ಡ ಕೆರೆಗಳ ಸುತ್ತಮುತ್ತ ಹಟ್ಟಿಗಳನ್ನು ಹಾಕುತ್ತಿದ್ದಾರೆ. ದೊಡ್ಡ ಸಂಖ್ಯೆಯ ಕುರಿಗಾಯಿಗಳು ತಮ್ಮ ಕುರಿ ಹಿಂಡು­ಗಳೊಂದಿಗೆ ಅರೆಮಲೆನಾಡು ಪ್ರದೇಶಗಳಾದ ಕಲಘಟಗಿ, ಕಪ್ಪತ್ತಗುಡ್ಡ, ಮುಂಡರಗಿ, ಶಿಗ್ಗಾವಿ, ಮುಂಡ­ಗೋಡು, ಯಲ್ಲಾಪುರದತ್ತ ವಲಸೆ ಹೋಗಿ­ದ್ದಾರೆ. ಮರಗಿಡಗಳ ತಪ್ಪಲು ಮತ್ತು ಅಲ್ಲಿ ಸಿಗುವ ನೀರನ್ನು ಕುಡಿಸುವ ಮೂ­ಲ­ಕ ಕುರಿಗಳ ಜೀವ ಉಳಿಸುತ್ತಿದ್ದಾರೆ.

ಬಿಸಿಲಿನ ಧಗೆಗೆ ಮರಗಳು ಒಣಗುತ್ತಿರುವುದರಿಂದ ಹಸಿರು ತಪ್ಪಲು ಸಹ ಲಭಿಸದಂತಹ ಪರಿಸ್ಥಿತಿ ಇದೆ. ‘ಮೊದಲು ಐದಾರು ಕಿ.ಮೀ ಅಂತರದಲ್ಲಿ ಸುತ್ತಾಡಿ, ಮೇಯಿಸಿಕೊಂಡು ಸಂಜೆ ಮನೆಗೆ ವಾಪಾಸ್ಸಾಗುತ್ತಿದ್ದೆವು, ಆದರೆ, ಈಗ ಜಮೀನು ಬರಡಾಗಿರುವುದರಿಂದ ಹಳ್ಳದ ಗಿಡ ಗಂಟಿಗಳನ್ನೇ ಹುಡುಕುತ್ತ, ಸುಮಾರು 15 ಕಿ.ಮೀ. ದೂರ ನಡೆದರೂ ನೀರು–ಆಹಾರ ಸಿಗುತ್ತಿಲ್ಲ. ಕುರಿಗಳಣ್ನು ಮೇಯಿಸಲು ತುಂಬಾ ತೊಂದರೆ ಆಗುತ್ತಿದೆ’ ಎಂದು ಕುರಿಗಾಹಿಗಳಾದ ಶರಣಪ್ಪ, ಕಳಕಪ್ಪ, ಯಮನಪ್ಪ ಅಳಲು ತೋಡಿಕೊಂಡರು.

‘ಹೊಲಗಳಲ್ಲಿ ಒಣ ಮೇವು ತಿಂದು, ಕಲುಷಿತ ನೀರು ಕುಡಿದು ಕುರಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿವೆ. ತಾಪಮಾನದ ಏರಿಕೆಯಿಂದ ನಾಲಿಗೆ ಬೇನೆ, ಕಾಲು ಬೇನೆ, ಅತಿಯಾದ ಜ್ವರ, ಬೇಧಿ ಕಾಣಿಸಿಕೊಂಡು ಸಾವಿಗೀಡಾಗುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ’ ಎಂದರು.

ನರೇಗಲ್ ಹೋಬಳಿಯ ಅಬ್ಬಿಗೇರಿ, ಜಕ್ಕಲಿ, ಮಾರನಬಸರಿ, ನಿಡಗುಂದಿ, ಹಾಲಕೇರಿ, ಗುಜಮಾಗಡಿ, ಡ.ಸ. ಹಡಗಲಿ, ಯರೇಬೇಲೇರಿ ಮುಂತಾದ ಗ್ರಾಮಗಳಲ್ಲಿನ ಕುರಿಗಾಯಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಕುರಿಗಾರರು ಚಿಕ್ಕ ಕಾಲ್ನಡಿಗೆಯಲ್ಲಿ ಪ್ರತಿ ನಿತ್ಯ ಸಂಚರಿಸುತ್ತಾ, ಕತ್ತಲಲ್ಲಿ ಬದುಕು ಕಳೆಯುತ್ತಿದ್ದಾರೆ. ‘ಹೆಸರಿಗೆ ಮಾತ್ರ ಅಸ್ತಿತ್ವದಲ್ಲಿ ಇರುವ ಕುರಿ ಮತ್ತು ಉಣ್ಣೆ ಅಭಿವೃದ್ಧಿ ಮಂಡಳಿಯು ಇಲ್ಲಿಯವರೆಗೂ ಕುರಿಗಾರರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತಂದಿಲ್ಲ’ ಎಂದು ಕುರುಬ ಸಮಾಜದ ಮುಖಂಡ ಪ್ರಸಾದ ಸತ್ಯಣ್ಣವರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT