ನರಗುಂದ: ಕಳೆದ ಎರಡು ವಾರಗಳಿಂದ ಮಳೆಯಿಂದ ತತ್ತರಿಸಿ ಹೋಗಿದ್ದ ತಾಲ್ಲೂಕಿನ ರೈತರಿಗೆ ಎರಡು ದಿನಗಳಿಂದ ಮಳೆ ಇಲ್ಲವಾಗಿದ್ಜು, ರೈತರು ನಿರಾಳರಾಗಿದ್ದಾರೆ. ಇದರಿಂದ ರೈತರ ಚಿತ್ತ ಹೆಸರು ಸುಗ್ಗಿಯತ್ತ ಎಂಬಂತಾಗಿದೆ.
ಆದರೆ ಹೆಸರು ಕಾಯಿ ಬಿಡಿಸಲು ಕಾರ್ಮಿಕರ, ಕೂಲಿಕಾರರ ಕೊರತೆ ಹೆಚ್ಚಾಗಿದೆ. ಇದರಿಂದ ರೈತರು ಕಟಾವು ಯಂತ್ರಗಳ ಮೊರೆ ಹೋಗಬೇಕಾಗಿದೆ. ಕಳೆದ ಮೂರು ವರ್ಷಗಳಿಂದ ಹೆಸರು ಬೆಳೆ ಅಷ್ಟಕ್ಕಷ್ಟೇ ಇತ್ತು. ಕಳೆದ ವರ್ಷವಂತೂ ಬರ ಬಿದ್ದು ಹೆಸರು ಬೆಳೆಯಲೇ ಇಲ್ಲ.
ಆದರೆ ಈ ವರ್ಷ ಸಕಾಲಕ್ಕೆ ಮಳೆ ಬಿದ್ದ ಕಾರಣ ಶೇ 50 ರಷ್ಠು ರೈತರು 25 ಸಾವಿರ ಹೆಕ್ಟೇರ್ ಗಳಲ್ಲಿ ಹೆಸರು ಬಿತ್ತನೆ ಮಾಡಿದ್ದಾರೆ. ಶೇ10 ರಷ್ಟು ಮಳೆಗೆ ಹಾಗೂ ರೋಗಕ್ಕೆ ತುತ್ತಾಗಿ ಹೆಸರು ಹಾನಿಯಾದರೂ ಶೇ 40ರಷ್ಟು ಬೆಳೆ ಈಗ ಕಟಾವು ಹಂತಕ್ಕೆ ಬಂದಿದೆ.
ಮಳೆಯ ಕಣ್ಣುಮುಚ್ಚಾಲೆ ನಡುವೆ ಹೆಸರಿನ ರಾಶಿ ಬೇಗ ಮಾಡಿಕೊಳ್ಳಬೇಕಿದೆ. ರಾಶಿ ಬೇಗನೆ ಮುಗಿಸುವ ಧಾವಂತ ಹಾಗೂ ಕೂಲಿಕಾರರ ಕೊರತೆಯಿಂದಾಗಿ ಕಟಾವು ಯಂತ್ರಗಳು ಈ ವರ್ಷವಂತೂ ರೈತರ ಪಾಲಿಗೆ ವರದಾನವಾಗಿವೆ. ಆದ್ದರಿಂದ ರೈತರು ಕಟಾವು ಯಂತ್ರಗಳ ಮೂಲಕ ರಾಶಿ ಮಾಡುತ್ತಿರುವುದು ಹೆಚ್ಚಿನ ಪ್ರಮಾಣದಲ್ಲಿ ಕಾಣುತ್ತಿದೆ.
ಲಗ್ಗೆಯಿಟ್ಟ ಯಂತ್ರಗಳು:
ತಾಲ್ಲೂಕಿನಲ್ಲಿ ಹೆಸರಿನ ಬಿತ್ತನೆ ಮೊದಲೇ ಅರಿತ ವಿವಿಧ ಜಿಲ್ಲೆಗಳ ಕಟಾವು ಯಂತ್ರಗಳ ಮಾಲೀಕರು ತಮ್ಮ ಯಂತ್ರ ಹಾಗೂ. ಸಿಬ್ಬಂದಿಯೊಂದಿಗೆ ತಾಲ್ಲೂಕಿನ ಎಲ್ಲ ಹಳ್ಳಿಗಳಲ್ಲಿ ಬೀಡು ಬಿಟ್ಟು ಹೆಸರು ಕಟಾವು ಮಾಡುತ್ತಿದ್ದಾರೆ.
200ಕ್ಕೂ ಹೆಚ್ಚು ಕಟಾವು ಯಂತ್ರಗಳು ಲಗ್ಗೆ ಇಟ್ಟಿವೆ. ವಿಜಯಪುರ ಜಿಲ್ಲೆಯ ತಾಂಬಾ ಗ್ರಾಮದಿಂದಲೇ 120 ಯಂತ್ರಗಳು ಬಂದಿವೆ. ಜೊತೆಗೆ ಗಂಗಾವತಿ, ಹೊಸಪೇಟೆ, ಮಹಾರಾಷ್ಟ್ರಗಳಿಂದಲೂ ಯಂತ್ರಗಳು ಲಗ್ಗೆಯಿಟ್ಟಿವೆ. ಹೆಸರಿನ ಹೊಲಗಳಲ್ಲಿ ಯಂತ್ರಗಳ ಸದ್ದು ಅನುರಣಿಸುವುದು ಸಾಮಾನ್ಯವಾಗಿದೆ.
ಲಾಭ ನಷ್ಟದತ್ತ ರೈತರ ಚರ್ಚೆ:
1 ಎಕರೆ ಹೆಸರು ಕಾಯಿ ಬಿಡಿಸಲು ಕನಿಷ್ಟ 15- 20 ಆಳುಗಳು ಬೇಕು. ಒಂದು ಆಳಿಗೆ ₹ 300 ಕೂಲಿ ಕೊಟ್ಟರೂ ₹ 4500-6000 ಆಗುತ್ತದೆ. ಆದರೆ ಅದೇ ಕಟಾವು ಯಂತ್ರದವರು ಎಕರೆಗೆ ₹ 2000-2500 ತೆಗೆದುಕೊಳ್ಳುತ್ತಾರೆ. ಕೊನೆಗೆ ಸಮಯವೂ ಉಳಿಯುತ್ತದೆ. ಆದರೆ ರಾಶಿಯಲ್ಲಿ ಸ್ವಚ್ಛತೆ ಕಡಿಮೆ ಎಂದು ಹೇಳುವ ರೈತರು ಲಾಭ-ನಷ್ಟದತ್ತ ವಿಚಾರ ಮಾಡಿ ಕಟಾವು ಯಂತ್ರಗಳಿಗೆ ಮೊರೆ ಹೋಗಿದ್ದಾರೆ.
ದಿನಕ್ಕೆ 20 ಎಕರೆ ಕಟಾವು:
ಕಟಾವು ಯಂತ್ರದ ಮೂಲಕ ಗರಿಷ್ಠ ದಿನಕ್ಕೆ 20 ಎಕರೆ ಹೆಸರು ಕಟಾವು ಮಾಡಲು ಸಾಧ್ಯವಿದೆ.
ದಿನವೂ ಈ ಪ್ರಮಾಣದಲ್ಲಿ ಯಂತ್ರಕ್ಕೆ ಭೂಮಿ ದೊರೆಯಬೇಕು. ಆಗ ದೂರದಿಂದ ಯಂತ್ರಗಳನ್ನು ತಂದು ದುಡಿಸಿದ್ದಕ್ಕೆ ಸಾರ್ಥಕವಾಗುತ್ತದೆ ಎಂದು ಕಟಾವು ಯಂತ್ರ ಚಾಲನೆ ಮಾಡುವ ವಿಜಯಪುರ ಜಿಲ್ಲೆಯ ತಾಂಬಾದ ಬೀರಪ್ಪ ಪೂಜಾರ ಹೇಳುತ್ತಾರೆ.
ಫಸಲು ರಕ್ಷಣೆಗೆ ಹರಸಾಹಸ
ಮಳೆ ಯಾವಾಗ ಬರುತ್ತದೆಯೋ ಗೊತ್ತಿಲ್ಲ ಹೆಸರಿನ ಸುಗ್ಗಿ ನಡೆಯುವುದೇ ಮಳೆಗಾಲದಲ್ಲಿ. ಸ್ವಲ್ಪ ಮಳೆ ಬಿಡುವು ಕೊಟ್ಟರೆ ಸಾಕು ನಮ್ಮ ಹೆಸರಿನ ರಾಶಿ ಮುಗಿಸಲು ಸಾಧ್ಯ. ಅದರಲ್ಲೂ ಕಟಾವು ಯಂತ್ರಗಳು ನಮ್ಮ ಪಾಲಿಗೆ ವರದಾನವಾಗಿದ್ದು, ಕಟಾವು ನಂತರ ಹೆಸರನ್ನು ರಕ್ಷಣೆ ಮಾಡಲು ಹರಸಾಹಸ ಪಡಬೇಕಿದೆ ಎಂದು ಹೆಸರು ಬೆಳೆದ ರೈತರು ಹೇಳುತ್ತಾರೆ.
ಬೆಲೆಯತ್ತ ರೈತರ ಚಿತ್ತ: ಹೆಸರು ಸುಗ್ಗಿಗಿಂತ ಮೊದಲು ₹9 ಸಾವಿರ ಇದ್ದ ಹೆಸರಿನ ಬೆಲೆ,ಈಗ ದಿಡಿರನೇ ಕುಸಿತಗೊಂಡು ₹7ಸಾವಿರಕ್ಕೆ ಬಂದಿದ್ದು ರೈತರು ಬೆಲೆಗಾಗಿ ಕಾಯಬೇಕಿದೆ.ಸರ್ಕಾರದ ಬೆಂಬಲ ಬೆಲೆ ₹8500ಕ್ಕೂ ಹೆಚ್ಚು ಇದೆ. ಆದ್ದರಿಂದ ಸರ್ಕಾರ ಬೇಗನೆ ಹೆಸರು ಖರೀದಿ ಗೆ ಬೆಂಬಲ ಬೆಲೆ ಕೇಂದ್ರ ಆರಂಭಿಸಬೇಕು ಎಂದು ರೈತ ಯಲ್ಲಪ್ಪ ಚಲುವಣ್ಣವರ ಹೇಳುತ್ತಾರೆ.
ಮುಂಗಾರಿನ ವಾಣಿಜ್ಯ ಬೆಳೆ ಹೆಸರು ಕಟಾವು ಹಂತಕ್ಕೆ ಬಂದಿದ್ದು ಉತ್ತಮ ಬೆಲೆ ದೊರೆತು ರೈತರ ಬಾಳಿಗೆ ವರದಾನವಾಗಬೇಕಿದೆ.ಯಲ್ಲಪ್ಪ ಚಲುವಣ್ಣನವರ, ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.