ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ತನಿಖೆ ನಡೆಸಿ ಭ್ರಷ್ಟರನ್ನು ಶಿಕ್ಷಿಸಲು ಆಗ್ರಹ

ಸೆ. 20ರಂದು ಕಾರ್ಮಿಕರ ಸಂಘಟನೆಗಳಿಂದ ಬೆಂಗಳೂರು ಚಲೋ
Last Updated 15 ಸೆಪ್ಟೆಂಬರ್ 2021, 5:32 IST
ಅಕ್ಷರ ಗಾತ್ರ

ಗದಗ: ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ವಿರೋಧಿಸಿ ಸೆ.20ರಂದು ಮುಖ್ಯಮಂತ್ರಿ ಮನೆ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಜಿ.ಉಮೇಶ್‌ ಆವರಗೆರೆ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿರುವ ಹಣದ ಮೇಲೆ ಸಚಿವರು, ಅಧಿಕಾರಿಗಳು ಕಣ್ಣಿಟ್ಟಿದ್ದು, ಅದನ್ನು ಕಬಳಿಸುವ ಹುನ್ನಾರ ನಡೆಸಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರಗಳು ಅತ್ಯಂತ ಭ್ರಷ್ಟ ಆಡಳಿತ ನೀಡುತ್ತಿದ್ದು, ಹಳ್ಳಿಯಿಂದ ದಿಲ್ಲೀವರೆಗೂ ಭ್ರಷ್ಟಾಚಾರದ ಬೇರು ಹರಡಿಕೊಂಡಿದೆ’ ಎಂದು ಆರೋಪಿಸಿದರು.

‘ಕಲ್ಯಾಣ ಮಂಡಳಿಯಲ್ಲಿರುವ ಹಣ ಕಾರ್ಮಿಕರ ಕಲ್ಯಾಣಕ್ಕೆ ಬಳಕೆಯಾಗದೇ ಮಂತ್ರಿಗಳು, ಅಧಿಕಾರಿಗಳ ತಿಜೋರಿ ಸೇರುತ್ತಿದೆ. ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಸರ್ಕಾರ ಕಾರ್ಮಿಕರಿಗೆ ಘೋಷಿಸಿದ ಪರಿಹಾರದ ಹಣ ಹೆಚ್ಚಿನ ಜನರಿಗೆ ಸಿಗಲೇ ಇಲ್ಲ. ಕಾರ್ಮಿಕರಿಗೆ ವಿತರಿಸಿದ ಫುಡ್‌ ಕಿಟ್‌, ಟೂಲ್‌ ಕಿಟ್‌ ಹಾಗೂ ಸುರಕ್ಷಾ ಕಿಟ್‌ನಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತನಿಖೆಗೆ ಆದೇಶಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಕಾರ್ಮಿಕರು ಮತ್ತು ಕಾರ್ಮಿಕರ ಕುಟುಂಬದ ಸದಸ್ಯರ ವೈದ್ಯಕೀಯ ವೆಚ್ಚವನ್ನು ಸಂಪೂರ್ಣ ಭರಿಸಲು ಕ್ರಮವಹಿಸಬೇಕು. ಮದುವೆ ಸಹಾಯಧನ ಮೊತ್ತವನ್ನು ₹1 ಲಕ್ಷ, ಸಹಜ ಮರಣದ ಪರಿಹಾರ ಮೊತ್ತವನ್ನು ₹5 ಲಕ್ಷ ಹಾಗೂ ಯಾವುದೇ ರೀತಿಯ ಅಪಘಾತದಲ್ಲಿ ಕಾರ್ಮಿಕರು ಮೃತಪಟ್ಟರೆ ₹10 ಲಕ್ಷ ಸಹಾಯಧನ ನೀಡಬೇಕು. ಮನೆ ನಿರ್ಮಾಣಕ್ಕೆ ₹5 ಲಕ್ಷ ಸಹಾಯಧನ ಹಾಗೂ ಕಾರ್ಮಿಕರ ನಿವೃತ್ತಿ ವೇತನವನ್ನು ₹5 ಸಾವಿರಕ್ಕೆ ಹೆಚ್ಚಿಸಬೇಕು’ ಎಂದು ಅವರು ಆಗ್ರಹಿಸಿದರು.

ಎಂ.ನವನೂರು, ಯೇಸು ಜಾನ್‌, ಜಾನಿಸಾಬ್‌ ಹಣಗಿ, ಮಹಬೂಬ್‌ ಸಾಬ್‌ ಪಠಾಣ್‌, ಚನ್ನವೀರಗೌಡ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಬೋಗಸ್‌ ಕಾರ್ಡ್‌ ರದ್ಧತಿಗೆ ಆಗ್ರಹ
ಕಾರ್ಮಿಕ ಕಾರ್ಡ್‌ನ ಉಪಯೋಗವನ್ನು ನಿಜವಾದ ಕಾರ್ಮಿಕರಿಗಿಂತ ಅನ್ಯರೇ ಹೆಚ್ಚಾಗಿ ಪಡೆದುಕೊಳ್ಳುತ್ತಿದ್ದು, ಬೋಗಸ್‌ ಕಾರ್ಡ್‌ಗಳ ರದ್ಧತಿಗೆ ಸರ್ಕಾರ ಕ್ರಮವಹಿಸಬೇಕು ಎಂದು ಎಚ್‌.ಜಿ.ಉಮೇಶ್‌ ಆವರಗೆರೆ ಆಗ್ರಹಿಸಿದರು.

‘ರಾಜ್ಯದಲ್ಲಿ ಅಂದಾಜು 15 ಲಕ್ಷದಷ್ಟು ಮಂದಿ ಮಾತ್ರ ಕಟ್ಟಡ ಕಾರ್ಮಿಕರಿದ್ದಾರೆ. ಆದರೆ, ಕಾರ್ಮಿಕ ಕಾರ್ಡ್‌ಗಳನ್ನು ಹೊಂದಿರುವವರ ಸಂಖ್ಯೆ 21 ಲಕ್ಷಕ್ಕೂ ಹೆಚ್ಚಿದೆ. ಕಾರ್ಮಿಕ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ, ಸೇವಾ ಕೇಂದ್ರಗಳಿಗೆ ಕಾರ್ಮಿಕ ಕಾರ್ಡ್‌ ಮಾಡಿಕೊಡುವ ಅವಕಾಶ ಕಲ್ಪಿಸಿರುವುದರಿಂದಾಗಿ ಬೋಗಸ್ ಕಾರ್ಡ್‌ಗಳ ಸಂಖ್ಯೆ ಹೆಚ್ಚಾಗಿದೆ. ಕಾರ್ಮಿಕರಲ್ಲದವರು ಸೌಲಭ್ಯ ಪಡೆಯುವುದನ್ನು ತಪ್ಪಿಸಲು ಇಲಾಖೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT