ಮರುಕಳಿಸುವುದೇ ಲಕ್ಕುಂಡಿ ವೈಭವ?

7
ಐತಿಹಾಸಿಕ, ಪ್ರಾಚ್ಯ ಮತ್ತು ಶಿಲ್ಪಕಲಾ ವೈಭವ ಸಾರುವ ಪ್ರವಾಸಿ ತಾಣ

ಮರುಕಳಿಸುವುದೇ ಲಕ್ಕುಂಡಿ ವೈಭವ?

Published:
Updated:
Deccan Herald

ಗದಗ: ದಕ್ಷಿಣ ಭಾರತದ ಶಿಲ್ಪಕಲಾ ಮುಕುಟಮಣಿ ಎಂದೇ ಲಕ್ಕುಂಡಿ ಗ್ರಾಮ ಹೆಸರುವಾಸಿ.ಈ ಗ್ರಾಮದ ಐತಿಹಾಸಿಕ, ಪ್ರಾಚ್ಯ ಮತ್ತು ಶಿಲ್ಪಕಲಾ ವೈಭವವನ್ನು ಹೊಸ ತಲೆಮಾರಿಗೆ ಪರಿಚಯಿಸುವ ಮತ್ತು ಹಂಪಿ ಮಾದರಿಯಲ್ಲಿ ಲಕ್ಕುಂಡಿಯನ್ನೂ ವಿಶ್ವ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕಿದೆ. ಆದರೆ, ಪ್ರತಿ ವರ್ಷ ಲಕ್ಕುಂಡಿ ಉತ್ಸವದ ಸಂದರ್ಭದಲ್ಲಿ ಮಾತ್ರ ಈ ವಿಷಯಗಳು ಚರ್ಚೆಗೆ ಮುನ್ನೆಲೆಗೆ ಬಂದು ನಂತರ, ಹಿನ್ನಲೆಗೆ ಸರಿದು ಹೋಗುತ್ತದೆ.

ಜಿಲ್ಲಾ ಕೇಂದ್ರವಾದ ಗದುಗಿನಿಂದ 12 ಕಿಲೋಮೀಟರ್ ದೂರದಲ್ಲಿರುವ ಲಕ್ಕುಂಡಿ ಮಧ್ಯದಲ್ಲಿಯೇ ರಾಷ್ಟ್ರೀಯ ಹೆದ್ದಾರಿ 63 ಹಾದು ಹೋಗುತ್ತದೆ. ಈ ಮಾರ್ಗದ ಮೂಲಕವೇ ಪ್ರವಾಸಿಗರು ಹಂಪಿಗೆ ಹೋಗುತ್ತಾರೆ. ಆದರೆ, ಲಕ್ಕುಂಡಿ ದರ್ಶನಕ್ಕೆ ಹೆಚ್ಚಿನ ಜನರು ಬರುವುದಿಲ್ಲ. ಮಾಹಿತಿ, ಪ್ರಚಾರ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕೊರತೆಯಿಂದ ಈ ಐತಿಹಾಸಿಕ ತಾಣ, ಪ್ರಮುಖ ಪ್ರವಾಸಿ ತಾಣವಾಗಿ ಅವಕಾಶವನ್ನು ಕಳೆದುಕೊಂಡಿದೆ.

ಸರ್ವಧರ್ಮಗಳ ಬೀಡಾಗಿದ್ದ ಲಕ್ಕುಂಡಿಯಲ್ಲಿ ನೂರೊಂದು ಗುಡಿ, ನೂರೊಂದು ಬಾವಿಗಳು ಇದ್ದವು ಎನ್ನುತ್ತದೆ ಇತಿಹಾಸ. ಕಲ್ಯಾಣದ ಚಾಲುಕ್ಯರು ಲಕ್ಕುಂಡಿಯಲ್ಲಿ ಆಡಳಿತ ನಡೆಸಿದ್ದರು. ಲೊಕ್ಕಿಗದ್ಯಾಣ, ಲೊಕ್ಕಿನಿಷ್ಕ, ಪೊನ್ನ ಗದ್ಯಾಣ ಎಂಬ ಸುವರ್ಣ ನಾಣ್ಯಗಳನ್ನು ಅಚ್ಚು ಹಾಕುವ ಟಂಕಸಾಲೆಯೂ ಇಲ್ಲಿತ್ತು ಎನ್ನುತ್ತದೆ ಇತಿಹಾಸ. ಇದರಿಂದಾಗಿಯೇ ಲೋಹ ಗುಂಡಪುರ ಅಥವಾ ಲೊಕ್ಕಿಗುಂಡಿ ಎಂಬ ಹೆಸರನ್ನು ಹೊಂದಿದ್ದ ಈ ಊರು ಬರುಬರುತ್ತಾ ಲಕ್ಕುಂಡಿಯಾಗಿದೆ.

ಲಕ್ಕುಂಡಿ ಗ್ರಾಮದಲ್ಲಿ ಈಗಿರುವ ಐತಿಹಾಸಿಕ ಕುರುಹುಗಳು ಬೆರಳಣಿಕೆಯಷ್ಟು ಮಾತ್ರ. ಕೆಲವು ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಹೊಲಗಳ ಒಳಗಟ್ಟೆಯ ಆಳದಲ್ಲಿ ಹೂತು ಹೋಗಿವೆ. ನೋಡಿದ ತಕ್ಷಣ ಗೋಚರವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಬಾರಿ ಲಕ್ಕುಂಡಿ ಉತ್ಸವದಲ್ಲಿ ‘ಲಕ್ಕುಂಡಿ ಪ್ರಾಚ್ಯ ವಸ್ತು ಸಂಗ್ರಹಣಾ ಸಮಿತಿ’ ರಚಿಸಿ, ಇಂತಹ ಪ್ರಾಚ್ಯ ವಸ್ತುಗಳನ್ನು ಸಂರಕ್ಷಿಸುವ ಕುರಿತು ಚರ್ಚೆ ನಡೆದಿತ್ತು. ಪ್ರಾಚ್ಯ ವಸ್ತುಗಳ ಸಂಗ್ರಹಣೆ, ಸಂರಕ್ಷಣೆ ಮತ್ತು ಪ್ರದರ್ಶನ ಈ ಸಮಿತಿಯ ಮುಖ್ಯ ಉದ್ದೇಶ. ಉತ್ಸವದ ನಂತರ ದಿನಗಳಲ್ಲಿ ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳು ನಡೆದಿಲ್ಲ.

‘ಲಕ್ಕುಂಡಿಯನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಿ, ಸ್ಥಳೀಯವಾಗಿ ಬೆಳೆಯುವ ಸೇವಂತಿಗೆ ಹೂವು, ಹಣ್ಣು, ಹಾಗೂ ಇಲ್ಲಿ ನೇಯುವ ಕಂಬಳಿ, ಸೀರೆ ಮಾರಾಟಕ್ಕೆ, ಮಳಿಗೆಗಳನ್ನು ನಿರ್ಮಿಸಿಕೊಡಬೇಕು. ಹಾಳಾಗುತ್ತಿರುವ ವಾಸ್ತುಶಿಲ್ಪ ಸಂರಕ್ಷಣೆಗೆ ಜಿಲ್ಲಾಡಳಿತ ಕ್ರಮ ವಹಿಸಬೇಕು’ ಎನ್ನುತ್ತಾರೆ ಸಾರ್ವಜನಿಕರು.

ಉತ್ಖನನ ನಡೆದರೆ ಇನ್ನಷ್ಟು ಗುಡಿಗಳು ಬೆಳಕಿಗೆ
ಅತ್ತಿಮಬ್ಬೆಯ ಈ  ನಾಡಿನಲ್ಲಿ ಜೈನ ದೇವಾಲಯವೇ ಪ್ರಮುಖ ಆಕರ್ಷಣೆ. ಪಂಚಲೋಹ ಮೂರ್ತಿ ಇದೆ. ಜೈನ ಮನೆತನದಿಂದ ಪೂಜೆ ನಡೆಯುತ್ತದೆ. ಲಕ್ಕುಂಡಿಯ ಪ್ರತಿ ದೇವಾಲಯವೂ ಶಿಲ್ಪಕಲಾ ವೈಭವದ ಮೂಲಕ ಗಮನ ಸೆಳೆಯುತ್ತದೆ.

ಕಾಶಿ ವಿಶ್ವೇಶ್ವರ ದೇವಾಲಯದ ಹೊರಭಿತ್ತಿಯ ಮೇಲೆ ರಾಮಾಯಾಣ,ಮಹಾಭಾರತ ಕಥಾನಿರೂಪಕ ಶಿಲ್ಪಗಳು ವಿಶಿಷ್ಟವಾಗಿವೆ. ನನ್ನೆಶ್ವರ ದೇವಾಲಯ, ಶಂಕರಲಿಂಗ ದೇವಾಲಯ, ನಾಗನಾಥ ದೇವಾಲಯ, ಅಲ್ಲಮಪ್ರಭು ದೇವಾಲಯ,ವೀರಭದ್ರಶ್ವರ ದೇವಾಲಯ ಸೇರಿದಂತೆ 11 ದೇವಸ್ಥಾನಗಳಿವೆ. ಲಕ್ಕುಂಡಿಯಲ್ಲಿ ಉತ್ಖನನ ನಡೆದರೆ ಇನ್ನಷ್ಟು ಗುಡಿಗಳು, ಶಾಸನಗಳು ಬೆಳಕಿಗೆ ಬರುತ್ತವೆ.

ಲಕ್ಕುಂಡಿ ಗ್ರಾಮದಲ್ಲಿ ದೇವಾಲಯಗಳ ದರ್ಶನಕ್ಕೆ ಪ್ರವಾಸಿಗರಿಗೆ ವಾಹನ ಸೌಲಭ್ಯ ಒದಗಿಸಬೇಕು, ಯಾತ್ರಿ ನಿವಾಸ ನಿರ್ಮಾಣ ಮಾಡಬೇಕು. ಐತಿಹಾಸಿಕ, ಪ್ರಾಚ್ಯ ವಸ್ತುಗಳ ಸಂರಕ್ಷಣೆಗೆ ಜಿಲ್ಲಾಡಳಿತ ಕ್ರಮ ವಹಿಸಬೇಕು
- ಅ.ದ.ಕಟ್ಟಿಮನಿ, ಪ್ರಾಚ್ಯವಸ್ತು ತಜ್ಞ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !