ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಕ್ಷ್ಮೇಶ್ವರ: ಮೂಲಸೌಲಭ್ಯ ವಂಚಿತ ಬಸ್ ನಿಲ್ದಾಣ

ಲಕ್ಷ್ಮೇಶ್ವರ: ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿಲ್ಲ, ಆಸನಗಳಿಲ್ಲ, ಸ್ವಚ್ಛತೆ ಮರೀಚಿಕೆ
Published : 16 ಸೆಪ್ಟೆಂಬರ್ 2024, 3:32 IST
Last Updated : 16 ಸೆಪ್ಟೆಂಬರ್ 2024, 3:32 IST
ಫಾಲೋ ಮಾಡಿ
Comments

ಲಕ್ಷ್ಮೇಶ್ವರ: ಲಕ್ಷ್ಮೇಶ್ವರದ ಬಸ್ ನಿಲ್ದಾಣವು ಹಲವು ಸಮಸ್ಯೆಗಳಿಂದ ನರಳುತ್ತಿದೆ. ನಿಲ್ದಾಣದಲ್ಲಿ ಸ್ವಚ್ಛತೆ ಇಲ್ಲ. ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನಗಳಿಲ್ಲ. ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಇಲ್ಲ. ಶುದ್ಧ ಕುಡಿಯುವ ನೀರಿಲ್ಲ. ಪ್ರಯಾಣಿಕರಿಗೆ ಸಾಕಷ್ಟು ಬಸ್‌ಗಳಿಲ್ಲ. ಅಗತ್ಯ ಇರುವಷ್ಟು ಸಿಬ್ಬಂದಿ ಇಲ್ಲ. ಹೀಗೆ ಹಲವು ‘ಇಲ್ಲ’ಗಳ ನಡುವೆ ಬಸ್ ನಿಲ್ದಾಣ ಕಾರ್ಯನಿರ್ವಹಿಸುತ್ತಿದೆ. ನಿಲ್ದಾಣದೊಳಗೆ ಸುತ್ತಮುತ್ತ ಬರೀ ಗಲೀಜು ತುಂಬಿಕೊಂಡಿದೆ.

ಗುತ್ತಲ ಕಡೆ ತೆರಳುವ ಬಸ್‍ಗಳು ನಿಲ್ಲುವ ಮುಂಭಾಗದಲ್ಲಿ ದೊಡ್ಡ ಬಯಲು ಇದ್ದು ಅಲ್ಲಿ ಇಲಾಖೆ ಬೆಳೆಸಿದ ಗಿಡ–ಮರಗಳಿಗಿಂತ ಮುಳ್ಳಿನ ಗಿಡಗಂಟಿಗಳೇ ಹೆಚ್ಚಾಗಿ ಬೆಳೆದಿದ್ದು ಕಾಡಿನ ಕಾಣುತ್ತಿದೆ. ಇನ್ನು ಅಲ್ಲಿ ಕಸಕಡ್ಡಿ ಶೇಖರಣಗೊಂಡಿದೆ. ಆಗಾಗ ಸಾರ್ವಜನಿಕರು ಬಯಲು ಮೂತ್ರ ವಿಸರ್ಜನೆ ಮಾಡುವುದರಿಂದ ಕಸಕಡ್ಡಿಗಳೊಂದಿಗೆ ಮೂತ್ರ ಸೇರಿಕೊಂಡು ವಾತಾವರಣ ಗಬ್ಬೆದ್ದು ನಾರುತ್ತಿದೆ.

ನಿಲ್ದಾಣದೊಳಗಿರುವ ಶೌಚಾಲಯ ಸಂಪೂರ್ಣ ಭರ್ತಿಯಾಗಿದ್ದು ಹೊಲಸು ಶೌಚಾಲಯದ ಸುತ್ತ ಹರವಿಕೊಂಡಿದೆ. ಹೆಚ್ಚಾದ ಮಲಿನ ನೀರು ಪಕ್ಕದ ಬಸವೇಶ್ವರ ನಗರದತ್ತ ಹರಿಯುತ್ತಿದ್ದು ಇಡೀ ಬಸವೇಶ್ವರ ನಗರ ಶೌಚದ ವಾಸನೆಯಿಂದ ನಾರುತ್ತಿದೆ. ಈ ಕುರಿತು ಅಲ್ಲಿನ ನಿವಾಸಿಗಳು ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಪ್ರಯಾಣಿಕರಿಗೆ ಕಡಿಮೆ ವೆಚ್ಚದಲ್ಲಿ ಕುಡಿಯುವ ನೀರು ಸಿಗಲಿ ಎಂಬ ಉದ್ದೇಶದಿಂದ ಐದಾರು ವರ್ಷಗಳ ಹಿಂದೆ ನಿರ್ಮಿಸಿದ ಶುದ್ಧ ನೀರಿನ ಘಟಕ ಬಂದ್ ಆಗಿ ಹಲವು ವರ್ಷಗಳೇ ಉರುಳಿವೆ.

ಕ್ಯಾಂಟೀನ್ ಗೋಡೆಗೆ ಹೊಂದಿಕೊಂಡಂತೆ ನಲ್ಲಿ ನೀರಿನ ವ್ಯವಸ್ಥೆ ಇದೆ. ಆದರೆ ನಲ್ಲಿ ಇರುವ ತೊಟ್ಟಿ ಸಾರ್ವಜನಿಕರು ಎಲೆ ಅಡಿಕೆ ತಿಂದು ಉಗುಳಿದ್ದರಿಂದ ಕೆಂಬಣ್ಣದಿಂದ ಕಂಗೊಳಿಸುತ್ತಿದೆ. ನಿಲ್ದಾಣದ ಅಧಿಕಾರಿಗಳು ಸಮಸ್ಯೆ ಬಗೆಹರಿಸುತ್ತಿಲ್ಲ. ಹೀಗಾಗಿ ಪ್ರಯಾಣಿಕರು ನೀರಿಗಾಗಿ ಪರದಾಡುವ ಸ್ಥಿತಿ ಇದೆ. ಎಲ್ಲರಿಗೂ ಬಾಟಲಿ ನೀರು ಕೊಳ್ಳಲು ಸಾಧ್ಯವಿಲ್ಲ. ಇದನ್ನು ಅರ್ಥ ಮಾಡಿಕೊಂಡು ಶುದ್ಧ ನೀರಿನ ಘಟಕವನ್ನು ದುರಸ್ತಿ ಮಾಡಿಸಬೇಕಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅದು ಸಹ ಶುರುವಾಗಿಲ್ಲ.

ನಿಲ್ದಾಣದಲ್ಲಿ ಬೈಕ್ ನಿಲ್ಲಿಸುವ ಸ್ಟ್ಯಾಂಡ್ ಇದ್ದರೂ ಸಹ ಪ್ರತಿದಿನ ನೂರಾರು ವಾಹನಗಳು ನಿಲ್ದಾಣದೊಳಗೆ ಎಲ್ಲೆಂದರಲ್ಲಿ ನಿಲ್ಲಿಸಲಾಗುತ್ತಿದೆ.  ಅದರೊಂದಿಗೆ ಕೆಲ ಆಟೋಗಳು ಪ್ರಯಾಣಿಕರಿಗೆ ಮತ್ತು ಬಸ್ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ನಿಲ್ದಾಣದೊಳಕ್ಕೆ ನಿಲ್ಲುತ್ತಿದ್ದರೂ ಸಹ ಅಧಿಕಾರಿಗಳು ಮಾತ್ರ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರಿಗೆ ಉತ್ತಮ ಸೇವೆ ಸಿಗುತ್ತಿಲ್ಲ.

ಕೆಲ ದಿನಗಳ ಹಿಂದೆ ಬಸ್ ಹತ್ತುವಾಗ ಪಿಕ್‍ಪಾಕೆಟ್ ಜೋರಾಗಿತ್ತು. ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದ ನಂತರ ಅದು ಕಡಿಮೆ ಆಗಿದೆ. ಆದರೆ ಈ ಕ್ಯಾಮೆರಾಗಳು ಯಾವಾಗಲೂ ಚಾಲನೆಯಲ್ಲಿ ಇರುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ. ನಿಲ್ದಾಣದಲ್ಲಿ ಜನ ಕುಳಿತುಕೊಳ್ಳಲು ಆಸನಗಳ ಕೊರತೆ ಇದೆ. 

ಶಕ್ತಿ ಯೋಜನೆ ಅನುಷ್ಠಾನದಿಂದಾಗಿ ಪ್ರಯಾಣಕರ ಸಂಖ್ಯೆ ಅದರಲ್ಲೂ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಆದರೆ ಅದಕ್ಕೆ ತಕ್ಕಂತೆ ಆಸನಗಳ ವ್ಯವಸ್ಥೆಯೂ ಹೆಚ್ಚಾಗಬೇಕಿತ್ತು. ಕುಳಿತುಕೊಳ್ಳಲು ಆಸನಗಳು ಇಲ್ಲದ್ದರಿಂದ ಮಹಿಳಾ ಪ್ರಯಾಣಿಕರು ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ನಿಲ್ಲುವುದು ಕುಳಿತುಕೊಳ್ಳುತ್ತಿದ್ದಾರೆ. ಇದರಿಂದಾಗಿ ಕೆಲ ವೇಳೆ ಬಸ್ ಸಂಚಾರಕ್ಕೂ ತೊಂದರೆ ಆಗುತ್ತಿದೆ. ಈ ಸಮಸ್ಯೆಯನ್ನು ಅಧಿಕಾರಿಗಳು ಬಗೆಹರಿಸಬೇಕು. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್‌ಗಳ ಸೌಲಭ್ಯ ಕಲ್ಪಿಸಬೇಕು. 

ಗದಗ ಕಡೆ ತೆರಳಲು ಬಸ್‌ಗಳ ಕೊರತೆ ಇದೆ. ಕೊರತೆ ಇರುವ ಸಿಬ್ಬಂದಿಯ ನೇಮಕಕ್ಕೆ ಕ್ರಮಕೈಗೊಳ್ಳಬೇಕಿದೆ. ಬಸ್‌ನಿಲ್ದಾಣದಲ್ಲಿ ಜೇಬುಕಳವು, ಪ್ರಯಾಣಿಕರ ಗಲಾಟೆ ಸೇರಿದಂತೆ ಅಪರಾಧ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ ನಿಲ್ದಾಣದಲ್ಲಿ ಪೊಲೀಸ್‌ ಚೌಕಿಯನ್ನು ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. 

ಬಸ್ ನಿಲ್ದಾಣದ ಶೌಚಾಲಯದಿಂದ ನಿತ್ಯ ಗಲೀಜು ನೀರು ಬಸವೇಶ್ವರ ನಗರದತ್ತ ಹರಿಯುತ್ತದೆ. ಈ ಬಗ್ಗೆ ಅನೇಕ ಸಲ ಸಾರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಪ್ರಯೋಜನವಾಗಿಲ್ಲ. 

-ಸಿ.ಜಿ. ಹಿರೇಮಠ ಬಸವೇಶ್ವರ ನಗರದ ನಿವಾಸಿ.

ಲಕ್ಷ್ಮೇಶ್ವರದ ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಕಸಕಡ್ಡಿ ತುಂಬಿಕೊಳ್ಳುತ್ತಿದೆ. ಆಗಾಗ ಅದನ್ನು ಸ್ವಚ್ಛ ಮಾಡಿದರೆ ಪ್ರಯಾಣಿಕರಿಗೆ ಅನುಕೂಲ ಆಗುತ್ತದೆ.

-ಪೂರ್ಣಾಜಿ ಖರಾಟೆ ನಿವೃತ್ತ ಶಿಕ್ಷಕರು ಲಕ್ಷ್ಮೇಶ್ವರ.

ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಅಗತ್ಯ ಆಸನಗಳನ್ನು ಕಲ್ಪಿಸಿಕೊಡಬೇಕು.

- ಕಿರಣ ನವಲೆ ಪ್ರಯಾಣಿಕ ಲಕ್ಷ್ಮೇಶ್ವರದ ನಿವಾಸಿ

ಬಸ್ ನಿಲ್ದಾಣದಲ್ಲಿ ಆಸನಗಳ ವ್ಯವಸ್ಥೆ ಹಾಗೂ ಶುದ್ಧ ನೀರಿನ ಘಟಕ ಆರಂಭಿಸುವಂತೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.

-ಸವಿತಾ ಆದಿ ಲಕ್ಷ್ಮೇಶ್ವರ ಸಾರಿಗೆ ಘಟಕದ ವ್ಯವಸ್ಥಾಪಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT