ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧ ಪಕ್ಷಗಳಿಂದ ದಾರಿ ತಪ್ಪಿಸುವ ಕೆಲಸ

ಪ್ರತಿಭಟನೆ ಮಾಡುವವರಿಗೆ ಬುದ್ಧಿ ಹೇಳಬೇಕು– ಸಾರಿಗೆ ಸಚಿವ ಲಕ್ಷ್ಮಣ ಸವದಿ
Last Updated 25 ಡಿಸೆಂಬರ್ 2020, 5:40 IST
ಅಕ್ಷರ ಗಾತ್ರ

ಗದಗ: ‘ನವೀಕರಣಗೊಂಡ ಪಂಡಿತ್‌ ಪುಟ್ಟರಾಜ ಗವಾಯಿ ಬಸ್ ನಿಲ್ದಾಣವನ್ನು ಜನವರಿ ಮೊದಲನೇ ವಾರದಲ್ಲಿ ಉದ್ಘಾಟಿಸಲಾಗುವುದು’ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಹಳೆ ಬಸ್‌ ನಿಲ್ದಾಣಕ್ಕೆ ಪುಟ್ಟರಾಜ ಗವಾಯಿಗಳ ಹೆಸರು ನಾಮಕರಣ ಮಾಡುವುದು ಸಂತಸದ ಸಂಗತಿ’ ಎಂದು ಹೇಳಿದರು.

‘ರೈತರಿಗೆ ಅನುಕೂಲಕರವಾದ ಕಾನೂನನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಆದರೆ, ವಿರೋಧ ಪಕ್ಷಗಳ ಒಕ್ಕೂಟದವರು ರೈತರಿಗೆ ಸರಿಯಾದ ಮಾಹಿತಿ ನೀಡದೇ ಅವರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಕೃಷಿಗೆ ಉಪಯೋಗಿಸುವ ಜಮೀನನ್ನು ಕೈಗಾರಿಕೆಗೆ ಒಳಸುವಂತಿಲ್ಲ ಎಂಬ ಅಂಶ ಇದೆ. ಈ ಬಗ್ಗೆ ರಾಜ್ಯದ ರೈತರಿಗೆ ಮನವಿ ಮಾಡಲಾಗುವುದು. ಇದು ರೈತರ ಪರವಾಗಿ ಇರುವ ಕಾನೂನು. ಪ್ರತಿಭಟನೆ ಮಾಡುವವರಿಗೆ ಬುದ್ಧಿವಾದ ಹೇಳಬೇಕಿದೆ’ ಎಂದು ಹೇಳಿದರು.

‘ನನ್ನ ಬೆಳೆ ನನ್ನ ಹಕ್ಕು’ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ನಾನು ಕೂಡ ರೈತನ ಮಗ. ಈ ಹಿಂದೆ ನಾನು ಸಹ ಹತ್ತಿ, ಬೆಲ್ಲವನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದೇನೆ. ಅಲ್ಲಿ ದಲ್ಲಾಳಿಗಳಿಂದ ಸುಲಿಗೆ ಆಗುವುದನ್ನು ಕಂಡಿದ್ದೇನೆ’ ಎಂದು ಹೇಳಿದರು.

‘ಕೆಲವು ಮುಖಂಡರು ರೈತರ ಹೆಸರಿನಲ್ಲಿ ಮುಂದಾಳತ್ವ ವಹಿಸಿದ್ದಾರೆ. ಎರಡು ಎಕರೆ ಜಮೀನು ಇದ್ದವರೂ ರೈತ ನಾಯಕರೆಂದು ಸಾರಿಗೆ ನೌಕರರನ್ನು ತಪ್ಪು ದಾರಿಗೆ ಎಳೆದರು. ಸಾರಿಗೆ ಸಂಸ್ಥೆ ನೌಕರರ 10 ಬೇಡಿಕೆಗಳ ಪೈಕಿ 9 ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರೂ ಒಪ್ಪಿಕೊಂಡು ಹೋಗಿ ಮತ್ತೆ ಹೋರಾಟ ಮಾಡಿದರು’ ಎಂದು ಪರೋಕ್ಷವಾಗಿ ರೈತ ಮುಖಂಡರ ವಿರುದ್ಧ ಹರಿಹಾಯ್ದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ ಮಾಳಶೆಟ್ಟಿ, ರವಿ ದಂಡಿನ, ಶ್ರೀಪತಿ ಉಡುಪಿ, ಎಂ.ಎಸ್.ಕರಿಗೌಡ್ರ, ರಾಜು ಕುರಡಗಿ ಹಾಗೂ ಬಿಜೆಪಿ ಕಾರ್ಯಕರ್ತರು, ಪದಾಧಿಕಾರಿಗಳು ಇದ್ದರು.

‘ಕೊರೊನಾ ವೈರಸ್‌ ನಿಯಂತ್ರಣಕ್ಕೆ ಕ್ರಮ’

‘ಹೊಸ ಸ್ವರೂಪದ ಕೊರೊನಾ ವೈರಸ್‌ ದೇಶದಲ್ಲಿ ಹರಡುವುದನ್ನು ತಡೆಗಟ್ಟುವ ಸಲುವಾಗಿ ವಿದೇಶದಿಂದ ಬಂದ ವ್ಯಕ್ತಿಗಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಅವರನ್ನು ಕ್ವಾರಂಟೈನ್ ಮಾಡಲಾವುದು’ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

‘ಜನರಿಗೆ ತೊಂದರೆ ಆಗಬಾರದು ಎಂಬ ಕಾಳಜಿಯಿಂದ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೂ, ಸಾರ್ವಜನಿಕರು ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಂಡು ಪ್ರಯಾಣಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT