‘ಬಿಜೆಪಿಯ ಹಿಂದೂತ್ವವಾದದಿಂದಲೇ ಲಿಂಗಾಯತ ಧರ್ಮಕ್ಕೆ ಹಿನ್ನಡೆ’

7

‘ಬಿಜೆಪಿಯ ಹಿಂದೂತ್ವವಾದದಿಂದಲೇ ಲಿಂಗಾಯತ ಧರ್ಮಕ್ಕೆ ಹಿನ್ನಡೆ’

Published:
Updated:
Prajavani

ಗದಗ: ‘ಬಿಜೆಪಿಯ ಹಿಂದೂತ್ವವಾದದಿಂದಲೇ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸಾಂವಿಧಾನಿಕ ಮಾನ್ಯತೆ ಲಭಿಸಲು ಹಿನ್ನಡೆ ಆಗಿದೆ’ ಎಂದು ಗದುಗಿನ ತೋಂಟದಾರ್ಯ ಮಠದ ಡಾ.ಸಿದ್ಧರಾಮ ಸ್ವಾಮೀಜಿ ಹೇಳಿದರು.

ಸೋಮವಾರ ಇಲ್ಲಿ ನಡೆದ ಲಿಂಗಾಯತ ಧರ್ಮ ಚಿಂತನಾ ಗೋಷ್ಠಿಗೆ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಪ್ರತ್ಯೇಕ ಧರ್ಮದ ಮಾನ್ಯತೆ ನೀಡಿದರೆ ಲಿಂಗಾಯತರು ಹಿಂದೂ ಧರ್ಮದಿಂದ ಹೊರ ಹೋಗುತ್ತಾರೆ ಎಂದು, ಅದನ್ನು ತಡೆಯುವ ನಿಟ್ಟಿನಲ್ಲಿ ಬಿಜೆಪಿ ಪ್ರಯತ್ನ ಮಾಡುತ್ತಿದೆ.ಆದರೆ, ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡುವುದರಿಂದ ಹಿಂದೂ ಧರ್ಮಕ್ಕೆ ಯಾವುದೇ ಹಾನಿ ಇಲ್ಲ’ ಎಂದರು.

‘ಮೊದಲು ಹಿಂದೂಗಳಾಗಿದ್ದ ಸಿಖ್‌, ಜೈನ, ಬೌದ್ಧರು ಸ್ವತಂತ್ರ ಧರ್ಮ ಮಾನ್ಯತೆ ಪಡೆದು ಅದರಿಂದ ಹೊರಬಂದಿದ್ದಾರೆ.ಇದರಿಂದ ಹಿಂದೂ ಧರ್ಮಕ್ಕಾಗಲಿ, ದೇಶದ ಅಖಂಡತೆ, ಸಮಗ್ರತೆಗಾಗಲಿ ಯಾವುದೇ ಹಾನಿಯಾಗಿಲ್ಲ.ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ಲಭಿಸಿದರೆ ಅವರು ದೇಶದ್ರೋಹಿಗಳೇನೂ ಆಗುವುದಿಲ್ಲ. ದೇಶದ ಪ್ರಶ್ನೆಯೇ ಬೇರೆ, ಧರ್ಮದ ಪ್ರಶ್ನೆಯೇ ಬೇರೆ.ಕೇಂದ್ರ ಸರ್ಕಾರ ಇದನ್ನು ಮನಗಂಡು ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕು’ ಎಂದು ಆಗ್ರಹಿಸಿದರು.

‘ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ನಿಂತಿಲ್ಲ, ಇದು ನಿರಂತರ’ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪಂಚಾಚಾರ್ಯರಿಗೆ ಜಾಮದಾರ ಸವಾಲು
‘ಎರಡು ಶತಮಾನಗಳ ಕಾಲ ಬಸವಣ್ಣ ಸೇರಿ ಶರಣರ ಚಾರಿತ್ರ್ಯವಧೆಗೆ ಯತ್ನಿಸಿ, ಇದೀಗ ವೀರಶೈವ, ಲಿಂಗಾಯತ ಎರಡೂ ಒಂದೇ ಎಂದು ಬಿಂಬಿಸುವ ಮೂಲಕ ಪಂಚಾಚಾರ್ಯರು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಡಾ.ಶಿವಾನಂದ ಜಾಮದಾರ ಹೇಳಿದರು.

‘ನೀವು ಬಸವಣ್ಣ ಅವರ ಚಾರಿತ್ರ್ಯವಧೆಗೆ ಪುಸ್ತಕ ಪ್ರಕಟಿಸಿದ್ದು ನಿಜವೋ, ಸುಳ್ಳೋ? ನೀವು ಬ್ರಾಹ್ಮಣರೋ?, ವೀರಶೈವ ಬ್ರಾಹ್ಮಣರೋ? ಅಥವಾ ಲಿಂಗಾಯತರೋ? ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ಅವರು ಪಂಚಾಚಾರ್ಯರಿಗೆ ಸವಾಲು ಹಾಕಿದರು.‘ಬಸವತತ್ವ ಒಪ್ಪಿ ಬರುವುದಾದರೆ ನಿಮ್ಮನ್ನು ನಾವು ಸಂತೋಷದಿಂದ ಸೇರಿಸಿಕೊಳ್ಳುತ್ತೇವೆ’ ಎಂದರು.

‘ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟವು ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ಚುರುಕು ಪಡೆದಿದ್ದರಿಂದ ಕೆಲವರು ಇದನ್ನು ರಾಜಕೀಯ ಪ್ರೇರಿತ ಎಂದು ಅಪಪ್ರಚಾರ ಮಾಡಿದರು.ಈ ಗೊಂದಲ ನಿವಾರಿಸಲು ಜಿಲ್ಲೆಗಳಲ್ಲಿ ಲಿಂಗಾಯತ ಧರ್ಮ ಚಿಂತನಾ ಗೋಷ್ಠಿಗಳು ನಡೆಯುತ್ತಿದೆ. ಕಿರು ಪುಸ್ತಕಗಳನ್ನು ಮುದ್ರಿಸಿ ವಿತರಿಸಲಾಗುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !