ಧರ್ಮ ವಿಭಜನೆಗೆ ಕೈಹಾಕಿದವರಿಗೆ ಹಿನ್ನಡೆ: ಅನ್ನದಾನೀಶ್ವರ ಶ್ರೀ

ಮುಂಡರಗಿ: 'ರಾಜ್ಯ ಸರ್ಕಾರ ಸಲ್ಲಿಸಿದ್ದ ಲಿಂಗಾಯತ ಪ್ರತ್ಯೇಕ ಧರ್ಮದ ಶಿಫಾರಸ್ಸು ತಿರಸ್ಕರಿಸುವ ಮೂಲಕ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡಿದೆ.ಇದರಿಂದ ತಮ್ಮ ಸ್ವಾರ್ಥಕ್ಕಾಗಿ ಧರ್ಮ ವಿಭಜನೆಗೆ ಕೈಹಾಕಿದವರಿಗೆ ಹಿನ್ನಡೆಯಾಗಿದೆ’ ಎಂದು ಮುಂಡರಗಿಯ ಡಾ. ಅನ್ನದಾನೀಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
‘ಲಿಂಗಾಯತವನ್ನು ಮಾತ್ರ ಪ್ರತ್ಯೇಕ ಧರ್ಮವಾಗಿ ಘೋಷಿಸಿ ಎಂದು ಕೇಂದ್ರದ ಮೇಲೆ ಒತ್ತಡ ಹೇರಿದ ಮುಖಂಡರಿಗಾಗಲಿ, ರಾಜ್ಯ ಸರ್ಕಾರಕ್ಕಾಗಲಿ ಯಾವುದೇ ಸ್ಪಷ್ಟ ಗುರಿ ಹಾಗೂ ಉದ್ದೇಶ ಇರಲಿಲ್ಲ. ಧರ್ಮ ವಿಭಜನೆಯಲ್ಲಿ ಕೆಲವೇ ಕೆಲವು ಜನರ ಸ್ವಾರ್ಥ ಇದ್ದಿದ್ದರಿಂದ ಅದಕ್ಕೆ ಜನರ ಬೆಂಬಲವೂ ದೊರೆಯಲಿಲ್ಲ' ಎಂದು ಸ್ವಾಮೀಜಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಇತ್ತೀಚೆಗೆ ಸಚಿವ ಡಿ.ಕೆ.ಶಿವಕುಮಾರ ಅವರು‘ಸರ್ಕಾರ ಧರ್ಮ ವಿಭಜನೆಯ ಕೆಲಸಕ್ಕೆ ಕೈಹಾಕಿದ್ದು ತಪ್ಪು ನಿರ್ಧಾರ’ ಎಂದು ಒಪ್ಪಿಕೊಂಡಿದ್ದರು.ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಇದರಿಂದ ತೊಂದರೆ ಆಗಿದ್ದು ನಿಜ’ ಎಂದು ಒಪ್ಪಿಕೊಂಡಿದ್ದಾರೆ. ಈ ಮೂಲಕ ಇವರಿಬ್ಬರೂ ವೀರಶೈವ–ಲಿಂಗಾಯತ ಒಂದೇ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ' ಎಂದರು.
ರಾಮ ಮಂದಿರ ನಿರ್ಮಾಣ ಆಗಲಿ
‘ರಾಮ ಹಿಂದೂಗಳ ಆದರ್ಶ ಪುರುಷನಾಗಿದ್ದಾನೆ. ಅಯೋಧ್ಯಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ದೇಶದ ಸಂತರು, ಶರಣರು, ಜನರು ಒತ್ತಾಯಿಸುತ್ತಿದ್ದಾರೆ. ಬಹುಜನರ ಒತ್ತಾಸೆಗೆ ಮನ್ನಣೆ ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯ ಆಗಿದೆ’ ಎಂದು ಸ್ವಾಮೀಜಿ ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.