ನರೇಗಲ್: ಈಚಿನ ದಿನಗಳಲ್ಲಿ ಐಪಿ ಸೆಟ್ (ರೈತರ ಪಂಪ್ಸೆಟ್) ವಿದ್ಯುತ್ ಲೋಡ್ ಶೆಡ್ಡಿಂಗ್ ವಿಪರೀತವಾಗಿದ್ದು, ಕೇವಲ ಮೂರು ತಾಸು ಮಾತ್ರ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳ ರೈತರು ಗುರುವಾರ ಜಕ್ಕಲಿ ರಸ್ತೆಯ ಕೆಇಬಿ ಗ್ರಿಡ್ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ರೈತರಾದ ವಿರೂಪಾಕ್ಷಪ್ಪ ರಡ್ಡೇರ, ಎಂ.ಎಸ್. ಧಡೇಸೂರಮಠ ಮಾತನಾಡಿ, ‘ಮಳೆ ಇಲ್ಲದ ಕಾರಣ ಪ್ರಸಕ್ತ ಸಾಲಿನ ಮುಂಗಾರು ಸಂಪೂರ್ಣ ಕೈಕೊಟ್ಟಿದೆ. ನೀರಾವರಿ ಜಮೀನಿನಲ್ಲಾದರೂ ಬೆಳೆ ಉಳಿಸಿಕೊಳ್ಳೋಣ ಎಂದು ಬಿತ್ತನೆ ಮಾಡಿದ್ದೇವೆ. ಆದರೆ, ಈಗ ಅನಿಯಮಿತವಾಗಿ ಮಿತಿಮೀರಿ ಲೋಡ್ ಶೆಡ್ಡಿಂಗ್ ಆರಂಭಿಸಿದ್ದು, ಕೇವಲ ಮೂರು ತಾಸು ತ್ರೀ ಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ. ಇದರಿಂದ ಬಿತ್ತಿದ ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ’ ಎಂದು ದೂರಿದರು.
ರೈತರಾದ ಎಸ್.ಬಿ. ಜುಟ್ಲದ, ಸೋಮಶೇಖರಯ್ಯ ಓದಿಸೂಮಠ ಮಾತನಾಡಿ, ‘ಈ ಹಿಂದಿನಂತೆ 7 ಗಂಟೆಗಳ ಕಾಲ ತ್ರೀ ಫೇಸ್ ವಿದ್ಯುತ್ ಪೂರೈಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ’ ಎಂದು ಪಟ್ಟು ಹಿಡಿದರು.
ಹೆಸ್ಕಾಂ ರೋಣ ಇಇ ರವಿಕಿರಣ, ಎಇಇ ಚೇತನ ಹಾದಿಮನಿ ಸ್ಥಳಕ್ಕೆ ಬಂದು, ‘ಮೇಲಧಿಕಾರಿಗಳ ಆದೇಶದ ಕಾರಣ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ರೈತರು ಇಲಾಖೆಯೊಂದಿಗೆ ಸಹಕರಿಸಬೇಕು’ ಎಂದರು.
ಇದಕ್ಕೆ ಜಗ್ಗದ ರೈತರು ನಮಗೆ ವಿದ್ಯುತ್ ಪೂರೈಕೆಯಾಗುವವರೆಗೂ ಪ್ರತಿಭಟನೆ ಕೈಬಿಡಲಾಗುವುದಿಲ್ಲ ಎಂದು ಪ್ರತಿಭಟನೆ ಮುಂದುವರಿಸಿದರು. ಮೇಲಧಿಕಾರಿಗಳಿಗೆ ಫೋನ್ ಮೂಲಕ ಸಂರ್ಪಸಿದ ಇಇ ಪ್ರತಿಭಟನಕಾರರೊಂದಿಗೆ ಮಾತನಾಡಿಸಿದರೂ ಪ್ರಯೋಜನವಾಗಲಿಲ್ಲ. ಸಂಜೆ 4ಕ್ಕೆ ಕೆಇಬಿಯಿಂದ ವೀರಪ್ಪಜ್ಜನ ರಸ್ತೆಯ ಕೆಇಬಿ ಗ್ರೀಡ್ಗೆ ಪ್ರತಿಭಟನೆ ಸ್ಥಳಾಂತರಿಸಲಾಯಿತು.
ಗ್ರಿಡ್ಗೆ ಮುತ್ತಿಗೆ ಹಾಕಿದ ರೈತರು ವಿದ್ಯುತ್ ಪೂರೈಕೆ ಮಾಡದಿದ್ದರೆ ಗ್ರಿಡ್ಗೆ ಬೆಂಕಿ ಹಚ್ಚುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದ ದಿಕ್ಕು ತೋಚದಂತಾದ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಪೂರೈಕೆ ಆರಂಭಿಸಿದರು. ಯಾವುದೇ ಕಾರಣಕ್ಕೂ 7 ಗಂಟೆಗಳ ಕಾಲ ತ್ರೀ ಫೇಸ್ ವಿದ್ಯುತ್ ಸಂಪರ್ಕ ಕಡಿತಗೊಳಿಸಬಾರದು ಎಂದು ಎಚ್ಚರಿಸಿ ಪ್ರತಿಭಟನೆ ಹಿಂಪಡೆದರು.
ಎಸ್.ಎ. ಗಡ್ಡಿ, ಎಚ್.ಎಸ್. ದೇಸಾಯಿಗೌಡ್ರ, ಎಸ್.ಕೆ. ಸಂಕನೂರ, ಎಸ್.ಬಿ. ಹಿರೇಹಾಳ, ಸುರೇಶ ಜಕ್ಕಲಿ, ವೀರಪ್ಪ ಕುಷ್ಟಗಿ, ಎ.ಕೆ. ಸಂಕನಗೌಡ್ರ, ಹನಮಪ್ಪ ಹಾಲವರ, ಎಂ.ವಿ. ತೇಜಪ್ಪನವರ, ಪ್ರದೀಪ ಹುಯಿಲಗೋಳಮಠ, ಕಳಕಪ್ಪ ಜೋಗಿ, ಎಸ್.ಕೆ. ಮಾವಿನಕಾಯಿ, ಹುಸೇನಸಾಬ ದರ್ಗಾದ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.