ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗಾಗಿ ಸ್ಥಳೀಯ ಸಂಪನ್ಮೂಲ ಸದ್ಭಳಕೆ ಆಗಲಿ: ಉಮಾ ಮಹಾದೇವನ್

Last Updated 24 ಆಗಸ್ಟ್ 2020, 12:31 IST
ಅಕ್ಷರ ಗಾತ್ರ

ಗದಗ: ‘ಸಮುದಾಯದ ಸಹಭಾಗಿತ್ವದೊಂದಿಗೆ ಜನರ ಅಗತ್ಯಕ್ಕೆ ಅನುಸಾರವಾದ ಯೋಜನೆಗಳನ್ನು ಸಿದ್ಧಪಡಿಸಬೇಕು. ವಿಕೇಂದ್ರಿಕರಣದಲ್ಲಿ ರಾಜ್ಯವು ದೇಶದಲ್ಲೇ ಮುಂಚೂಣಿಯಲ್ಲಿದ್ದು, ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಹೇಳಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಗದಗ ಜಿಲ್ಲಾ ಸಮಗ್ರ ಅಭಿವೃದ್ಧಿ ಯೋಜನೆಯ ಎರಡು ದಿನಗಳ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಸ್ಥಳೀಯವಾಗಿ ಸಿಗುವ ಪ್ರಾಕೃತಿಕ ಹಾಗೂ ಮಾನವ ಸಂಪನ್ಮೂಲವನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಅಲ್ಲದೇ, ದೇಶಕ್ಕೆ ಮಾದರಿಯಾಗುವಂತಹ ಸಮಗ್ರ ಜಿಲ್ಲಾ ಅಭಿವೃದ್ಧಿ ಯೋಜನಾ ವರದಿ ಸಿದ್ಧಪಡಿಸಬೇಕು. ಪ್ರತಿಯೊಂದು ಯೋಜನೆಯನ್ನೂ ಜನರ ಬಳಿಗೆ ಕೊಂಡೊಯ್ಯಲು ಶ್ರಮಿಸಬೇಕು. ಸಾಂಸ್ಥಿಕ ಅಭಿವೃದ್ಧಿಯೊಂದಿಗೆ ದೂರದೃಷ್ಟಿ ಗಮನದಲ್ಲಿಟ್ಟುಕೊಂಡು ವರದಿ ಸಿದ್ಧಪಡಿಸಬೇಕು’ ಎಂದು ಹೇಳಿದರು.

ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ (ಎಎನ್‌ಎಸ್‌ಎಸ್‌ಐಆರ್‌ಡಿ) ನಿರ್ದೇಶಕಿ ಶಿಲ್ಪಾನಾಗ್ ಮಾತನಾಡಿ, ‘ಗ್ರಾಮೀಣ ಮಟ್ಟದಿಂದಲೇ ಯೋಜನಾಭಿವೃದ್ಧಿ ವರದಿ ಸಿದ್ಧಪಡಿಸಬೇಕು. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಜನರ ಆದ್ಯತೆ ಮೇರೆಗೆ ಯೋಜನೆಗಳು ಸಿದ್ಧವಾಗುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

‘ಸಮಗ್ರ ಜಿಲ್ಲಾ ಅಭಿವೃದ್ಧಿ ಯೋಜನೆಯ ವರದಿಯನ್ನು ಪರಿಣಾಮಕಾರಿಯಗಿ ತಯಾರಿಸಲು ಎಸ್‌ಐಆರ್‌ಡಿ ಮತ್ತು ಆರ್‌ಡಿಪಿಆರ್ ಸಿಬ್ಬಂದಿಗಳನ್ನೊಳಗೊಂಡ 11 ಕಾರ್ಯಾಚರಣೆ ತಂಡಗಳನ್ನು ರಚಿಸಲಾಗಿದೆ. ಈ ಕುರಿತು ಈಗಾಗಲೇ 22 ಜನರಿಗೆ ತರಬೇತಿ ನೀಡಲಾಗಿದೆ. ಗ್ರಾಮೀಣಾಭಿವೃದ್ಧಿ ಜೊತೆಗೆ ನಗರಾಭಿವೃದ್ಧಿಯ ಕಡೆ ಗಮನಹರಿಸಿ, ವಹಿಸಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು’ ಎಂದರು.

ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಆನಂದ್ ಕೆ. ಮಾತನಾಡಿ, ‘ಭವಿಷ್ಯತ್‌ ಕಾಲದಲ್ಲಿ ಜನರಿಗೆ ಅನುಕೂಲ ಆಗುವಂತಹ ಅಭಿವೃದ್ಧಿದಾಯಕ ಯೋಜನೆ ರೂಪಿಸಬೇಕು. ಜಿಲ್ಲೆಯ ಅಭಿವೃದ್ಧಿಗಾಗಿ ಮುಕ್ತವಾಗಿ ಚರ್ಚಿಸಬೇಕು. ಯೋಜನಾ ವರದಿ ಸಿದ್ಧಪಡಿಸುವ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆ ಹಾಗೂ ಸವಾಲುಗಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕು’ ಎಂದರು.

ಕರ್ನಾಟಕ ಪಂಚಾಯತ್ ರಾಜ್ ಪರಿಷತ್ತಿನ ಉಪಾಧ್ಯಕ್ಷ ಡಿ.ಆರ್.ಪಾಟೀಲ ಮಾತನಾಡಿ, ‘ಕೋವಿಡ್-19ನಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಯೋಜನಾ ವರದಿ ಸಿದ್ಧಪಡಿಸುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.

ಅರಣ್ಯ ಉಪ ಸಂರಕ್ಷಣಾಧಿಕಾರಿ ಸೂರ್ಯಸೇನ, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಸಚಿವ ಲಕ್ಕಣ್ಣವರ ಮಾತನಾಡಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ರಾಜೂಗೌಡ ಕೆಂಚನಗೌಡ್ರ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕಲ್ಲೇಶ್, ಮುಖ್ಯ ಯೋಜನಾಧಿಕಾರಿ ಅನ್ನದಾನಿಸ್ವಾಮಿ, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಎಎನ್‌ಎಸ್‌ಎಸ್‌ಐಆರ್‌ಡಿ ಹಾಗೂ ಆರ್‌ಡಿಪಿಆರ್ ಬೋಧಕ ಸಿಬ್ಬಂದಿ ವರ್ಗ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದರು.

‘ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿ’

ಮೈಸೂರಿನ ಎಎನ್‌ಎಸ್‌ಎಸ್‌ಐಆರ್‌ಡಿಯ ಡಾ.ಜಿ.ಎಸ್.ಗಣೇಶ್ ಪ್ರಸಾದ್ ಮಾತನಾಡಿ, ‘ಯೋಜನಾ ವರದಿ ಸಿದ್ಧಪಡಿಸುವಿಕೆಯಲ್ಲಿ ಸಮಗ್ರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು. ವಿಕೇಂದ್ರಿಕೃತ ಯೋಜನೆ ತಯಾರಿಕೆಗೆ ಸಾಂಸ್ಥಿಕ ಸ್ವರೂಪ ನೀಡಿರುವುದು ಅಭಿವೃದ್ಧಿಗೆ ಸಹಕಾರಿಯಾಗಿದೆ’ ಎಂದು ಹೇಳಿದರು.

‘ಯೋಜನೆಗಳು ಅಭಿವೃದ್ಧಿಗಷ್ಟೇ ಸೀಮಿತವಾಗದೇ ಸ್ಥಳೀಯ ಆರ್ಥಿಕ, ಸಾಮಾಜಿಕ, ಪರಿಸರ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪೂರಕವಾಗಿರಬೇಕು. ಕಳೆದ 5 ವರ್ಷಗಳಲ್ಲಿ ಸಾಧಿಸಿರುವ ಪ್ರಗತಿ ವಿಶ್ಲೇಷಣೆಯೂ ಕಾರ್ಯತಂಡಗಳ ಮುಖ್ಯ ಜವಾಬ್ದಾರಿಯಾಗಿದ್ದು, ಇದರ ಆಧಾರದ ಮೇಲೆ ಸೂಚ್ಯಂಕ ಗುರುತಿಸಬೇಕು’ ಎಂದ ಹೇಳಿದರು.

‘ಗದಗ ಜಿಲ್ಲೆಯಿಂದಲೇ ಪ್ರಾರಂಭ’

‘ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಗದಗ ಜಿಲ್ಲೆಯಿಂದ ಪ್ರಾರಂಭಿಸಲಾಗಿದ್ದು, ಇಲ್ಲಿ ಸಿದ್ಧವಾಗುವ ಯೋಜನಾ ವರದಿಯೇ ಇನ್ನುಳಿದ ಜಿಲ್ಲೆಗಳಿಗೂ ಅನ್ವಯಿಸಲಿದೆ. ಪ್ರಾಯೋಗಿಕ ಹಾಗೂ ಪಾರದರ್ಶಕ ಯೋಜನಾ ವರದಿ ಸಿದ್ಧಪಡಿಸುವ ಮೂಲಕ ಪ್ರತಿ ಯೋಜನೆಗಳ ಅನುಷ್ಠಾನದಲ್ಲಿ ಸ್ಥಳೀಯ ಜನರನ್ನು ತೊಡಗಿಸಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು’ ಎಂದು ಎಎನ್‌ಎಸ್‌ಎಸ್‌ಐಆರ್‌ಡಿ ನಿರ್ದೇಶಕಿ ಶಿಲ್ಪಾನಾಗ್ ಹೇಳಿದರು.

ಮೊದಲ ಹಂತದಲ್ಲಿ ಗದಗ ಜಿಲ್ಲೆಯಿಂದ ಆರಂಭಿಸಲಾಗಿದ್ದು, ನಂತರ ಮೈಸೂರು ಸೇರಿದಂತೆ ಇನ್ನುಳಿದ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಪ್ರಾರಂಭಿಸಲಾಗುವುದು ಎಂದು ಶಿಲ್ಪಾನಾಗ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT