ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಲ್ | ಈರುಳ್ಳಿ ಬೆಲೆ ಕುಸಿತ, ಕಂಗಾಲಾದ ರೈತ

ಲಾಕ್‌ಡೌನ್‌ ಪರಿಣಾಮ ಮಾರುಕಟ್ಟೆ ಬಂದ್, ಒಂದು ಕ್ವಿಂಟಲ್‌ ಈರುಳ್ಳಿಗೆ ₹500
Last Updated 17 ಮೇ 2020, 20:00 IST
ಅಕ್ಷರ ಗಾತ್ರ

ನರೇಗಲ್: ಲಾಕ್‌ಡೌನ್‌ ಪರಿಣಾಮ ಮಾರುಕಟ್ಟೆಯಿಲ್ಲದೆ ಈರುಳ್ಳಿ ಬೆಳೆದ ರೈತರು, ಈರುಳ್ಳಿಯನ್ನು ಹೊಲದಲ್ಲಿಯೇ ಬಿಟ್ಟಿದ್ದಾರೆ. ಇದರಿಂದ ನೂರಾರು ಎಕರೆಯಲ್ಲಿ ಬೆಳೆದ ಈರುಳ್ಳಿ ವ್ಯಾಪಾರವಿಲ್ಲದೆ ಬೆಲೆ ಕಳೆದುಕೊಂಡಿದೆ.

ಹನಮಂತಗೌಡ ಹುಲ್ಲೂರು ಎಂಬ ಸ್ಥಳೀಯ ರೈತ ಸಾವಿರಾರು ರೂಪಾಯಿ ಮುಂಗಡ ನೀಡಿ, ಲಾವಣಿಯಲ್ಲಿ ನಾಲ್ಕು ಎಕರೆ ನೀರಾವರಿ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದರು. ಇಳುವರಿಯು ಸಹ ಉತ್ತಮವಾಗಿಯೇ ಬಂದಿದೆ. ಆದರೆ, ಲಾಕ್‍ಡೌನ್‌ ಪರಿಣಾಮ ಒಂದೂವರೆ ತಿಂಗಳಿನಿಂದ ಮಾರುಕಟ್ಟೆಯಲ್ಲಿ ಎಲ್ಲ ಬಗೆಯ ವ್ಯಾಪಾರ ಸ್ಥಗಿತಗೊಂಡಿದೆ. ಹೀಗಾಗಿ ಬೆಳೆದ ಈರುಳ್ಳಿ ಹೊಲದಲ್ಲಿಯೇ ಕೊಳೆಯುವಂತಾಗಿದೆ.

ಬುಧವಾರ 15 ಚೀಲ ಈರುಳ್ಳಿಯನ್ನು ಗದಗ ಎಪಿಎಂಸಿಗೆ ಕಳುಹಿಸಿದ್ದೇವೆ. ದೊಡ್ಡ ಗಡ್ಡೆ ಇದ್ದರೂ ಕ್ವಿಟಾಲ್‌ಗೆ ₹100 ಕೇಳುತ್ತಿದ್ದರು. ಎಲ್ಲ ಈರುಳ್ಳಿಯನ್ನು ಅಲ್ಲಯೇ ಬಿಟ್ಟು ಊರಿಗೆ ವಾಪಸ್ಸು ಬಂದಿದ್ದೇವೆ. ಇನ್ನೂ ಯಾರು ಸಹ ಹೆಚ್ಚಿನ ಬೆಲೆಗೆ ಖರೀದಿ ಮಾಡಲು ಮುಂದೆ ಬಂದಿಲ್ಲ ಎಂದು ರೈತ ಹನಮಂತಗೌಡ ಅಳಲು ತೋಡಿಕೊಂಡರು.

ಇನ್ನೂ 60 ಚೀಲಕ್ಕೂ ಹೆಚ್ಚು ಚೀಲ ಈರುಳ್ಳಿ ದಾಸ್ತಾನು ಇದೆ. ಅವುಗಳನ್ನು ಪಟ್ಟಣದ ಗಾಂಧಿ ಭವನದಲ್ಲಿ ಇಟ್ಟಿದ್ದೇನೆ. ಮಳೆ ಬಂದರೆ ಅವೆಲ್ಲವೂ ತೋಯ್ದು ಹೋಗುತ್ತವೆ. ಇತ್ತೀಚೆಗೆ ಸುರಿದ ಮಳೆಯಿಂದ ಹಾಗೂ ಖರೀದಿಸುವವರು ಇಲ್ಲದೇ ಇರುವುದರಿಂದ ಈರುಳ್ಳಿ ಚೀಲದಲ್ಲಿಯೂ ಹಾಗೂ ಹೊಲದಲ್ಲಿಯೂ ಕೊಳೆಯತೊಡಗಿದೆ ಎಂದರು.

ಬೀಜ, ಗೊಬ್ಬರ, ಔಷಧಿ, ಆಳು ಸೇರಿ ಒಟ್ಟು ₹1.50 ಲಕ್ಷ ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದೆ. ಉತ್ತಮ ಇಳುವರಿ ಬಂದಿದ್ದು, ಅದಕ್ಕಾಗಿ ಮಾಡಿರುವ ಸಾಲ ತೀರಿಸಿ, ಒಂದಷ್ಟು ಲಾಭದ ನಿರೀಕ್ಷೆಯಲ್ಲಿದ್ದೆ. ಲಾಕ್‌ಡೌನ್‌ನಿಂದಾಗಿ ಮನೆಯಿಂದಲೂ ಹೊರಗೆ ಬರದ ಸ್ಥಿತಿ ನಿರ್ಮಾಣವಾಯಿತು. ಕೃಷಿ ಹಾಗೂ ರೈತರ ಬೆಳೆಗಳ ಕುರಿತು ಸರ್ಕಾರ ವಿಚಾರ ಮಾಡಿ, ಆರಂಭದಲ್ಲಿಯೇ ಒಂದಷ್ಟು ಸಡಿಲಿಕೆ ಮಾಡಬೇಕಿತ್ತು. ಈಗ ಸಡಿಲಿಕೆ ಮಾಡಿದ್ದರೂ, ಮಾರುಕಟ್ಟೆಯಲ್ಲಿ ಈರುಳ್ಳಿಯನ್ನು ಕೇಳುವವರೇ ಇಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ರೈತರಿಂದ ನೇರವಾಗಿ ಈರುಳ್ಳಿ ಖರೀದಿಸಬೇಕು ಎಂದು ಅವರು ಆಗ್ರಹಿಸಿದರು.

ಹುಸಿಯಾದ ರೈತರ ನಿರೀಕ್ಷೆ
ಕಳೆದ ವರ್ಷದ ನವೆಂಬರ್‌, ಡಿಸೆಂಬರ್‌ ಅವಧಿಯಲ್ಲಿ ಈರುಳ್ಳಿಗೆ ದೊರೆತ ಭಾರಿ ಧಾರಣೆಯಿಂದ ರೈತರ ಮೊಗದಲ್ಲಿ ಸಂಭ್ರಮ ಮನೆಮಾಡಿತ್ತು. ಅದರಲ್ಲೂ ಹೊಲದಲ್ಲಿನ ಈರುಳ್ಳಿಯು ರಾತ್ರೋರಾತ್ರಿ ಕಳ್ಳತನವಾಗಿ ನರೇಗಲ್ ಪಟ್ಟಣ ರಾಜ್ಯದಾದ್ಯಂತ ಹೆಸರುಪಡೆದಿತ್ತು. ಅದೇ ದರದಲ್ಲಿ ಪ್ರಸ್ತುತ ವರ್ಷವೂ ಈರುಳ್ಳಿ ಮಾರಾಟವಾಗಬಹುದು ಎಂದು ನಿರೀಕ್ಷೆಯಿಟ್ಟುಕೊಂಡು ಪಟ್ಟಣದ ರೈತರು ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆದಿದ್ದರು. ಉತ್ತಮ ಆರೈಕೆ ಮಾಡಿ ಉತ್ತಮ ಇಳುವರಿಯನ್ನು ಸಹ ಪಡೆದಿದ್ದರು. ಆದರೆ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಘೋಷಿಸಿದ್ದರಿಂದ, ಮಾರುಕಟ್ಟೆ ಇಲ್ಲದ ಪರಿಣಾಮ ಈರುಳ್ಳಿ ಬೆಲೆ ಕಳೆದುಕೊಂಡಿದ್ದು, ರೈತರು ಪರದಾಡುವಂತಾಗಿದೆ.

*
ಈರುಳ್ಳಿ ಬೆಳೆಗಾರರ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಸರ್ಕಾರ ಸೂಕ್ತ ಪರಿಹಾರ ನೀಡುವ ಮೂಲಕ ಬೆಳೆಗಾರರಿಗೆ ಆತ್ಮಸ್ಥೈರ್ಯ ತುಂಬಬೇಕು.
-ನಿಂಗನಗೌಡ ಲಕ್ಕನಗೌಡ್ರ, ಉಪಾಧ್ಯಕ್ಷ, ಎಪಿಎಂಸಿ, ಹೊಳೆಆಲೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT