ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಅರ್ಧದಲ್ಲೇ ಪಯಣ ಮುಗಿಸಿದ ಹುಡುಗರು

ಹಿರಿಯೂರು ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹುಯಿಲಗೋಳ ಗ್ರಾಮದವರು
Last Updated 14 ಡಿಸೆಂಬರ್ 2021, 4:24 IST
ಅಕ್ಷರ ಗಾತ್ರ

ಗದಗ: ಈರುಳ್ಳಿ ಮಾರಿ ಬಂದ ಹಣದಲ್ಲಿ ತರಹೇವಾರಿ ಆಟದ ಸಾಮಾನುಗಳನ್ನು ತರುವುದಾಗಿ ಹೇಳಿ ಮಗನ ಮನಸ್ಸಿನಲ್ಲಿ ಕನಸು ಭಿತ್ತಿ ಹೋಗಿದ್ದ ತಂದೆ; ಈರುಳ್ಳಿ ಸುಗ್ಗಿ ಮುಗಿದ ನಂತರ ದಾಂಪತ್ಯಕ್ಕೆ ಕಾಲಿಡುವ ಕನಸು ಕಾಣುತ್ತಾ, ಈಗಾಗಲೇ ಹೆಣ್ಣು ನೋಡುವ ಶಾಸ್ತ್ರ ಮುಗಿಸಿದ್ದ ಮೂವರು ಯುವಕರು ಸೋಮವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟು ಮರಳಿ ಬಾರದ ಊರಿಗೆ ಹೋಗಿದ್ದಾರೆ.

ಇತ್ತ, ಬಾಳಿ ಬದುಕಬೇಕಿದ್ದ ಮಕ್ಕಳು ಮನೆಗೆ ಹೆಣವಾಗಿ ಬಂದಿದ್ದಕ್ಕೆ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು. ಅಪ್ಪ ಆಟದ ಸಾಮಾನು ತರುತ್ತಾನೆ ಎಂದು ಆಸೆ ಕಂಗಳಿಂದ ಕಾಯುತ್ತಿದ್ದ ಪುಟ್ಟ ಹುಡುಗನ ಕಂಗಳಲ್ಲಿ ಈಗ ಕಣ್ಣೀರು ಮಡುಗಟ್ಟಿದ್ದು, ಅದರೊಳಗೆ ತಂದೆಯ ಪ್ರತಿಬಿಂಬವೇ ಇಣುಕುತ್ತಿದೆ; ಕಿವಿಯಲ್ಲಿ ಅವನಾಡಿದ ಮಾತುಗಳೇ ಗುಂಯ್‌ಗುಡತ್ತಲಿವೆ...

ಈರುಳ್ಳಿ ಭಿತ್ತಿ, ಬೆಳೆದು, ಉತ್ತಮ ದರ ಪಡೆಯುವ ಸಲುವಾಗಿ ಬೆಂಗಳೂರಿಗೆ ಹೊರಟಿದ್ದ ಗದಗ ತಾಲ್ಲೂಕಿನ ಹುಯಿಲಗೋಳ ಗ್ರಾಮದ ನಾಲ್ವರು ಯುವಕರ ಕನಸನ್ನು ರಸ್ತೆ ಅಪಘಾತ ನುಚ್ಚುನೂರು ಮಾಡಿದೆ. ಸೋಮವಾರ ಬೆಳಿಗ್ಗೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕನಸು ಕಂಗಳ ಯುವಕರು ತಮ್ಮ ಬದುಕಿನ ಪಯಣವನ್ನು ಅರ್ಧದಲ್ಲೇ ಮುಗಿಸಿದ್ದಾರೆ.

ಸೋಮವಾರ ನಡೆದ ಅಪಘಾತದಲ್ಲಿ ಮೃತಪಟ್ಟ ಸುರೇಶನಿಗೆ ಅವರ ತಂದೆ ತಾಯಿ ಹುಡುಗಿ ನೋಡಿದ್ದರು. ಈರುಳ್ಳಿ ಸುಗ್ಗಿ ಮುಗಿಸಿ ಮದುವೆ ದಿನ ನಿಶ್ಚಯ ಮಾಡುವ ಯೋಚನೆಯಲ್ಲಿದ್ದರು. ಆದರೆ, ವಿಧಿಯಾಟಕ್ಕೆ ಸುರೇಶ ಬಲಿಯಾದ. ಕನಸು ಕನಸಾಗಿಯೇ ಉಳಿಯಿತು ಎಂದು ಅವರ ಕುಟುಂಬದವರು ಬಿಕ್ಕಿ ಅಳುತ್ತಿದ್ದರು.

ಊರಿನ ಮತ್ತೊಬ್ಬ ಯುವಕ ರಾಮನಗೌಡನಿಗೆ ಸ್ಯಾಂಡಲ್‌ವುಡ್‌ ನಂಟು ಕೂಡ ಇತ್ತು. ಆತನ ಮನೆಯವರು ಕೂಡ ರಾಮನಗೌಡನಿಗೆ ಹುಡುಗಿ ನೋಡಿಟ್ಟಿದ್ದರು. ಬೆಂಗಳೂರಿನಲ್ಲೇ ಇದ್ದ ರಾಮನಗೌಡ ಈರುಳ್ಳಿ ಮಾರುವ ಸಲುವಾಗಿಯೇ ಊರಿಗೆ ಬಂದು ಗೆಳೆಯರ ಜೊತೆಗೆ ಕ್ಯಾಂಟರ್‌ ಗಾಡಿ ಹತ್ತಿದ್ದರು. ಆದರೆ, ರಸ್ತೆ ಅಪಘಾತದಲ್ಲಿ ರಾಮನಗೌಡರ ಉಸಿರು ನಿಂತಿತು. ಇಲ್ಲಿ ಅವರ ಮನೆಯವರ ಕನಸೂ ಸಹ ನೀರ ಮೇಲಿನ ಗುಳ್ಳೆಯಂತೆ ಟಫ್‌ ಅಂತ ಕ್ಷಣಕ್ಕೆ ಒಡೆದುಹೋಯಿತು. ಈಗ ದುಃಖ ಒಂದೇ ಕೋಡಿಯಾಗಿ ಹರಿಯುತ್ತಿದೆ.

‘ಪ್ರಶಾಂತ ಹಟ್ಟಿ ಈಚೆಗಷ್ಟೇ ಹುಡುಗಿಯೊಂದನ್ನು ನೋಡಿಬಂದಿದ್ದ. ಎರಡೂ ಮನೆಯವರು ಪರಸ್ಪರ ಮಾತುಕತೆ ಬಳಿಕ ಮದುವೆ ವಿಚಾರ ಮಾಡಿಕೊಳ್ಳುವಷ್ಟೂ ಸಮಯವನ್ನು ದೇವರು ನೀಡಲಿಲ್ಲ’ ಎಂದು ಪ್ರಶಾಂತ ಅವರ ಗೆಳೆಯ ಚಂದ್ರು ಹಂಚಿನಾಳ ಕಣ್ಣೀರಾದರು.

ಇನ್ನು ಗುರಪ್ಪ ಹೂಗಾರ ಅವರಿಗೆ ಏಳು ವರ್ಷದ ಮಗನಿದ್ದ. ಈರುಳ್ಳಿ ಮೂಟೆಗಳನ್ನು ತುಂಬಿಕೊಂಡು ಊರಿಂದ ಹೊರಡುವ ಮುನ್ನ ಮಗನನ್ನು ಎತ್ತಿಕೊಂಡು ಮುದ್ದಿಸಿದ ಬಳಿಕ, ಬೆಂಗಳೂರಿನಿಂದ ಆಟದ ಸಾಮಾನು ತರುವುದಾಗಿ ಕಿವಿಯಲ್ಲಿ ಉಸುರಿದ್ದರು. ಆದರೆ, ಅಪ್ಪ ಮಗನಿಗೆ ಕೊಟ್ಟಿದ್ದ ಮಾತು ಮಾರ್ಗಮಧ್ಯೆಯೇ ಮುರಿದು ಬಿದ್ದಿದೆ. ಗುರಪ್ಪನ ಎದೆಬಡಿತ ಕೂಡ ನಿಂತುಹೋಗಿದೆ. ಮಗ, ಪತ್ನಿ ದಿಕ್ಕು ತೋಚದಂತಾಗಿದ್ದಾರೆ.

‘ಅವರಿಲ್ಲದ ಬದುಕು ನಮ್ಮನ್ನು ಅನಾಥವಾಗಿಸಿದೆ’ ಎಂದು ಗುರಪ್ಪನ ಪತ್ನಿ ಬಸವ್ವ ಎದೆ ಬಡಿದುಕೊಂಡು ರೋಧಿಸುತ್ತಿದ್ದ ದೃಶ್ಯ ಕರುಳು ಕಿತ್ತು ಬರುವಂತಿತ್ತು.

ಇಂತಹ ದೊಡ್ಡ ದುರ್ಘಟನೆಯನ್ನು ಹಿಂದೆಂದೂ ಕಂಡು– ಕೇಳಿರದ ಹುಯಿಲಗೋಳ ಗ್ರಾಮದ ಜನರು ಆಘಾತಕ್ಕೆ ಒಳಗಾಗಿದ್ದು, ಎಲ್ಲರ ಕಣ್ಣುಗಳು ನಿಸ್ತೇಜಗೊಂಡಿವೆ. ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮಾತ್ರ ಮುಗಿಲು ಮುಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT