ಮಂಗಳವಾರ, ಸೆಪ್ಟೆಂಬರ್ 28, 2021
24 °C
ಗದಗ- ಹುಬ್ಬಳ್ಳಿ ಸರಕು ಸಾಗಣೆ ಸ್ಥಗಿತ– ಜೀವನ ನಿರ್ವಹಣೆ ಕಷ್ಟ

ಬಾಡಿಗೆ ಏರಿಕೆ ಬಿಕ್ಕಟ್ಟು: ಮಧ್ಯಸ್ಥಿಕೆಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಸರಕು ಸಾಗಣೆ ವಾಹನಗಳ ಮಾಲೀಕರು– ಕಾರ್ಮಿಕರು ಹಾಗೂ ಜಿಲ್ಲಾ ವ್ಯಾಪಾರಸ್ಥರು ಹಾಗೂ ಸಂಸ್ಥೆಗಳ ನಡುವೆ ಉಂಟಾಗಿರುವ ಬಿಕ್ಕಟ್ಟು ಪರಿಹರಿಸಲು ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌. ಮಧ್ಯ ಪ್ರವೇಶಿಸಬೇಕು ಎಂದು ಲಾರಿ ಮಾಲೀಕರ ಸಂಘ ಆಗ್ರಹಿಸಿದೆ. 

ಶುಕ್ರವಾರ ಜಿಲ್ಲಾಧಿಕಾರಿ ಹಾಗೂ ಎಸ್‌ಪಿಗೆ ಮನವಿ ಸಲ್ಲಿಸಿ ಮಾತನಾಡಿದ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು, ‘ಇಂಧನ, ಆಟೊಮೊಬೈಲ್‌ ವಸ್ತುಗಳು, ಹಮಾಲರ ಕೂಲಿ ಹೆಚ್ಚಳದಿಂದಾಗಿ ಲಾರಿ ಮಾಲೀಕರಿಗೆ ಸಾಕಷ್ಟು ಹೊರೆಯಾಗುತ್ತಿದೆ. ಇದರ ಜತೆಗೆ ಟೋಲ್‌ ಶುಲ್ಕವನ್ನೂ ಕಟ್ಟಬೇಕಿದೆ. ಲಾರಿ, ಗೂಡ್ಸ್‌ ವಾಹನಗಳು ರಿಪೇರಿಗೆ ಬಂದರೆ ದುಡ್ಡು ನೀರಿನಂತೆ ಖರ್ಚಾಗುತ್ತದೆ. ಈ ಎಲ್ಲ ಕಾರಣಗಳಿಂದ ಸರಕು ಸಾಗಣೆ ದರ ಹೆಚ್ಚಿಸುವುದು ಅನಿವಾರ್ಯ’ ಎಂದು ಹೇಳಿದರು.

‘ದುಬಾರಿಯಾದ ಬೆಲೆಗಳಿಂದ ನಿರ್ವಹಣೆ ಕಷ್ಟವಾಗಿದೆ. ಹಾಗಾಗಿ, ಬಾಡಿಗೆ ಹೆಚ್ಚಿಸಲಾಗಿದೆ. ಈ ವಿಷಯವಾಗಿ ವ್ಯಾಪಾರಸ್ಥರು ಮತ್ತು ಸಂಘದೊಡನೆ ವಾಗ್ವಾದ ನಡೆದು ಸಮಸ್ಯೆಗಳು ಉದ್ಭವಿಸಿವೆ. ಕೆಲವು ವ್ಯಾಪಾರಸ್ಥರು ವಾಹನ ಚಾಲಕರು ಮತ್ತು ಹಮಾಲರು, ಕೂಲಿ ಕಾರ್ಮಿಕರಿಗೆ ಗೌರವ ಕೊಡದೇ ಹಂಗಿಸುತ್ತಾರೆ. ಇದು ಶ್ರಮಿಕ ವರ್ಗದವರಿಗೆ ಮಾಡುವ ಅವಮಾನ’ ಎಂದು ಬೇಸರ ವ್ಯಕ್ತಪಡಿಸಿದರು.

‘ಗದಗ ನಗರದ ಕೆಲವು ವ್ಯಾಪಾರಸ್ಥರು ಸಂಘದವರೊಂದಿಗೆ ಸಹಕರಿಸದೇ ಬೇರೆ ವಾಹನಗಳಲ್ಲಿ ತಮ್ಮ ಸರಕುಗಳನ್ನು ತರಿಸುತ್ತಿದ್ದಾರೆ. ಅವರ ಈ ನಡೆ ಸಾವಿರಾರು ಕುಟುಂಬಗಳ ಹೊಟ್ಟೆ ಮೇಲೆ ಹೊಡೆದಿದೆ’ ಎಂದು ದೂರಿದರು.

ಗದಗ- ಹುಬ್ಬಳ್ಳಿ ಸರಕು ಸಾಗಣೆ ಮಾಲೀಕರ ಸಂಘ ಹಾಗೂ ಗದಗ ಗೂಡ್ಸ್‌ಶೆಡ್ ಮತ್ತು ಗದಗ ಜಿಲ್ಲಾ ಲಾರಿ ಮಾಲೀಕರ ಸಂಘದ ಗೌರವಾಧ್ಯಕ್ಷ ಅಯೂಬ್‌ ಮುರಾದಖಾನ್‌, ಅಧ್ಯಕ್ಷ ಅಬ್ದುಲ್ ರೆಹಮಾನ್‌, ಉಪಾಧ್ಯಕ್ಷ ಬನ್ನೂರ ಸಂಗಯ್ಯ ವಸ್ತ್ರದ, ವೀರೇಶ ತುಪ್ಪದ, ಬಸವರಾಜ ಬೆಳವನಕೊಪ್ಪ, ಅಬ್ದುಲ್ ಖಾದರ ಬನ್ನೂರ, ರವಿ ಬನ್ನಿಗೊಣ್ನವರ, ಮಂಜು ಮುಳಗುಂದ, ಆನಂದ ಖ್ಯಾಡದ, ಸಂತೋಷ ಸವದತ್ತಿ ಸೇರಿದಂತೆ ಸಂಘದ ಸದಸ್ಯರು, ಪದಾಧಿಕಾರಿಗಳು, ವಾಹನ ಚಾಲಕರು, ಹಮಾಲರು ಇದ್ದರು.

ಶಾಶ್ವತ ಪರಿಹಾರ ಒದಗಿಸಿ

‘ವ್ಯಾಪಾರಸ್ಥರು ಸಂಘದೊಂದಿಗೆ ಸಹಕರಿಸುವವರೆಗೂ ನಾವು ಸರಕು ಸಾಗಣೆ ಮಾಡದಿರಲು ನಿರ್ಧರಿಸಿದ್ದೇವೆ. ಇದು ಹೆಚ್ಚಿನ ಸಮಸ್ಯೆ ತಂದೊಡ್ಡಬಹುದು. ಆದ್ದರಿಂದ, ಸಮಸ್ಯೆಗಳು ಉಂಟಾಗುವ ಮೊದಲೇ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಧ್ಯಸ್ಥಿಕೆ ವಹಿಸಿ ಶಾಶ್ವತ ಪರಿಹಾರ ಒದಗಿಸಿ ಜೀವನ ನಿರ್ವಹಣೆಗೆ ಅವಕಾಶ ಮಾಡಿಕೊಡಬೇಕು’ ಎಂದು ಲಾರಿ ಮಾಲೀಕರ ಸಂಘ ಆಗ್ರಹಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.