ಶುಕ್ರವಾರ, ಮಾರ್ಚ್ 31, 2023
24 °C

ಗದಗ: ರಕ್ಷಣೆ ಕೋರಿ ಬಂದಿದ್ದ ಪ್ರೇಮ ಪ್ರಕರಣ ಸುಖಾಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ‘ಪೋಷಕರಿಂದ ಪ್ರಾಣಭಯ ಇದೆ. ನಮಗೆ ರಕ್ಷಣೆ ನೀಡಬೇಕು’ ಎಂದು ಗದಗ ಜಿಲ್ಲಾ ಎಸ್‌ಪಿ ಯತೀಶ್‌ ಎನ್‌. ಅವರ ಬಳಿ ರಕ್ಷಣೆ ಕೋರಿ ಬಂದಿದ್ದ ಪ್ರೇಮಿಗಳ ಪ್ರಕರಣ ಸುಖಾಂತ್ಯ ಕಂಡಿದೆ.

‘ಗದಗ ಜಿಲ್ಲಾ ಪೊಲೀಸ್‌ನಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಆಗಿರುವ ತಾಯಿ ಹಾಗೂ ಅಗ್ನಿಶಾಮಕ ಠಾಣೆ ಸಿಬ್ಬಂದಿ ಆಗಿರುವ ತಂದೆಯಿಂದ ಪ್ರಾಣಬೆದರಿಕೆ ಇದೆ. ಅವರಿಂದ ನಮಗೆ ರಕ್ಷಣೆ ನೀಡಬೇಕು’ ಎಂದು ಮೇಘಾ ಎಂಬ ಯುವತಿ ಎಸ್‌ಪಿ ಯತೀಶ್‌ ಎನ್‌. ಅವರ ಸಹಾಯ ಕೋರಿದ್ದರು.

ಏಳು ವರ್ಷಗಳಿಂದ ಪ್ರೀತಿಸುತ್ತಿದ್ದ ಮೇಘಾ ಮತ್ತು ಕೀರ್ತಿನಾಥ ಜೋಡಿ, ಮನೆಯಲ್ಲಿ ಪ್ರೀತಿಗೆ ಒಪ್ಪದ ಕಾರಣ ಆರು ತಿಂಗಳ ಹಿಂದೆಯೇ ಮನೆಬಿಟ್ಟು ಹೋಗಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದರು. ಈ ವಿಚಾರ ತಂದೆ ತಾಯಿಗೆ ಗೊತ್ತಾಗಿ ಬೆದರಿಕೆ ಹಾಕಿದ್ದರು ಎಂದು ಮೇಘಾ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.

‘ಹುಡುಗಿ ಮನೆಬಿಟ್ಟು ಹೋದ ಸಂದರ್ಭದಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಮೇಘಾ ಮತ್ತು ಕೀರ್ತಿನಾಥ ಇಬ್ಬರೂ ಸಬ್‌ ರಿಜಿಸ್ಟರ್‌ ಕಚೇರಿಯಲ್ಲಿ ಮದುವೆಯಾಗಿದ್ದಾರೆ. ಮನೆಯವರಿಂದ ಪ್ರಾಣಭಯ ಇದೆ ಎಂದು ಮೇಘಾ ಹೇಳಿದ್ದರು. ಅವರ ತಂದೆ ತಾಯಿಯನ್ನು ಕರೆಯಿಸಿ ಮಾತನಾಡಲಾಗಿ, ತಾವು ಬೆದರಿಕೆ ಹಾಕಿಲ್ಲ ಎಂದು ತಿಳಿಸಿದ್ದಾರೆ’ ಎಂದು ಎಸ್‌ಪಿ ಯತೀಶ್‌ ಎನ್‌. ಹೇಳಿದರು.

‘ತಂದೆ– ತಾಯಿಯ ಆಸ್ತಿಗೆ ಆಸೆ ಪಡುವುದಿಲ್ಲ. ಅದನ್ನು ಕೇಳಲು ಸಹ ಬರುವುದಿಲ್ಲ ಎಂದು ಮೇಘಾ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಪೋಷಕರು ಕೂಡ ಮಗಳಿಗೆ ಯಾವುದೇ ರೀತಿಯಲ್ಲೂ ತೊಂದರೆ ನೀಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಇಬ್ಬರ ಒಪ್ಪಂದದಂತೆ ಪ್ರಕರಣ ಸುಖಾಂತ್ಯ ಕಂಡಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.