ಗುರುವಾರ , ಮೇ 26, 2022
29 °C
ಓವರ್‌ಲೋಡ್‌ ಟಿಪ್ಪರ್‌ಗಳ ʻಭಾರʼಕ್ಕೆ ನಲುಗಿದ ರಸ್ತೆ

ಪರಸಾಪೂರ- ಚನ್ನಪಟ್ಟಣವರೆಗಿನ ರಸ್ತೆ: ಟಿಪ್ಪರ್‌ಗಳ ಹಾವಳಿ ನಿಯಂತ್ರಣಕ್ಕೆ ಆಗ್ರಹ

ಖಲೀಲಅಹ್ಮದ ಶೇಖ Updated:

ಅಕ್ಷರ ಗಾತ್ರ : | |

Prajavani

ಶಿರಹಟ್ಟಿ: ತಾಲ್ಲೂಕಿನ ಪರಸಾಪೂರ ಗ್ರಾಮದ ಸುತ್ತಮುತ್ತ ಅವ್ಯಾಹತವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಕ್ರಷರ್‌ಗಳಲ್ಲಿ ಉತ್ಪಾದಿಸುವ ಜಲ್ಲಿ ಕಲ್ಲು, ಎಂಸ್ಯಾಂಡ್ ಸಾಗಿಸುವ ನೂರಾರು ಟಿಪ್ಪರ್‌ಗಳು ಓವರ್‌ ಲೋಡ್‌ ಹಾಕಿಕೊಂಡು ಸಂಚರಿಸುವುದರಿಂದ ಎರಡು ತಿಂಗಳ ಹಿಂದೆ ಮರು ಡಾಂಬರೀಕರಣಗೊಂಡ ರಸ್ತೆ ಸಂಪೂರ್ಣ ಹಾಳಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿ ಕುಳಿತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆ ಅಡಿಯಲ್ಲಿ ತಾಲ್ಲೂಕಿನ ಪರಸಾಪೂರ ಮಾರ್ಗವಾಗಿ ಅಕ್ಕಿಗುಂದ ತಾಂಡದಿಂದ ಶೆಟ್ಟಿಕೇರಿವರೆಗಿನ 10.12 ಕಿ.ಮೀ. ರಸ್ತೆ ಕಾಮಗಾರಿಯನ್ನು ₹712.87 ಲಕ್ಷ ವೆಚ್ಚದಲ್ಲಿ 2017ರಲ್ಲಿ ಪೂರ್ಣಗೊಂಡಿತ್ತು. ಗುತ್ತಿಗೆದಾರರು ಐದು ವರ್ಷ ರಸ್ತೆ ನಿರ್ವಹಣೆ ಮಾಡಬೇಕು. ಈ ರಸ್ತೆಯಲ್ಲಿ 10 ಟನ್‌ ಪ್ರಮಾಣದ ಭಾರವನ್ನು ಮಾತ್ರ ಸಾಗಿಸಬೇಕು ಎಂಬ ನಿಯಮ ಕಾಗದದಲ್ಲೇ ಉಳಿದಿದೆ.

ಪ್ರತಿನಿತ್ಯ ಈ ಭಾಗದಲ್ಲಿರುವ ಕ್ರಷರ್‌ಗಳಲ್ಲಿ ಉತ್ಪಾದಿಸುವ ಎಂಸ್ಯಾಂಡ್‌, ಪಿಸ್ಯಾಂಡ್‌ ಹಾಗೂ ಜಲ್ಲಿ ಕಲ್ಲನ್ನು ಸಾಗಣೆ ಮಾಡುವ ಟಿಪ್ಪರ್‌ಗಳು 30ರಿಂದ 40 ಟನ್‌ನಷ್ಟು ಭಾರವನ್ನು ಹಾಕಿಕೊಂಡು ಸಂಚರಿಸುವುದರಿಂದ ರಸ್ತೆ ಹಾಳಾಗಿದೆ. ರಾಜಾರೋಷವಾಗಿ ಓಡಾಡುತ್ತಿರುವ ಟಿಪ್ಪರ್‌ಗಳ ಹಾವಳಿ ತಪ್ಪಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಪರಸಾಪೂರ, ಚನ್ನಪಟ್ಟಣ ಅಕ್ಕಿಗುಂದ ತಾಂಡದ ಜನ ರಸ್ತೆಯಲ್ಲಿ ಓಡಾಡುವುದು ದುಸ್ತರವಾಗಿದೆ. ಯಮಕಿಂಕರಂತೆ ಭಾಸವಾಗುವ ಟಿಪ್ಪರ್‌ಗಳು ಸಂಚಾರದಿಂದ ಏಳುವ ದೂಳಿನ ಪರಿಣಾಮ ನಿತ್ಯ ರೋಗದ ಭೀತಿಯಲ್ಲಿ ಜೀವನ ಸಾಗಿಸುತ್ತಿದ್ದೇವೆ ಎಂಬುದು ಚನ್ನಪಟ್ಟಣ ಗ್ರಾಮದ ಮೋದಿನಸಾಬ ಆತಂಕ ವ್ಯಕ್ತಪಡಿಸಿದರು.

ದ್ವಿಚಕ್ರ ವಾಹನ ಸವಾರರು ತಗ್ಗು ಗುಂಡಿಗಳಿಂದ ಕೊಡಿರುವ ಪರಸಾಪೂರ- ಚನ್ನಪಟ್ಟಣ ರಸ್ತೆಯಲ್ಲಿ ಸಂಚರಿಸುವಾಗ ಬಹಳಷ್ಟು ಜನ ಬಿದ್ದು ಮೂಳೆ ಮುರಿದುಕೊಂಡಿದ್ದಾರೆ. ಜೊತೆಗೆ ಓವರ್‌ ಲೋಡ್‌ ಟಿಪ್ಪರ್‌ಗಳ ಸಂಚರಿಸುವುದರಿಂದ ಪ್ರತಿನಿತ್ಯ ದೂಳಿನ ಮಜ್ಜನವಾಗುತ್ತದೆ. ಇದರಿಂದ ಅಪಘಾತಗಳು ಸಂಭವಿಸುವ ಆತಂಕ ಈ ಭಾಗದ ಜನರಲ್ಲಿ ಶುರುವಾಗಿದ್ದು, ಟಿಪ್ಪರ್‌ಗಳ ಹಾವಳಿ ತಪ್ಪಿಸಬೇಕು ಎಂದು ಗ್ರಾಮಸ್ಥ ಪರಸಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

‘ಟಿಪ್ಪರ್‌ ನಿಯಂತ್ರಣಕ್ಕೆ ಕ್ರಮವಹಿಸಿ’

ತಾಲ್ಲೂಕಿನ ಪರಸಾಪೂರ ಗ್ರಾಮದ ಸುತ್ತಮುತ್ತ ನಡೆಯುತ್ತಿರುವ ಅವ್ಯಾಹತ ಕಲ್ಲು ಗಣಿಗಾರಿಕೆಯಿಂದ ಉತ್ಪಾದಿಸುವ ಎಂಸ್ಯಾಂಡ್‌, ಪಿಸ್ಯಾಂಡ್‌ ಮತ್ತು ಕಡಿಯನ್ನು ಟಿಪ್ಪರ್‌ಗಳಲ್ಲಿ ಓವರ್‌ ಲೋಡ್‌ನೊಂದಿಗೆ ಸಾಗಿಸುವುದರಿಂದ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯ ರಸ್ತೆ ಹಾಳಾಗಿದೆ. ಟಿಪ್ಪರ್‌ ಹಾವಳಿ ತಪ್ಪಿಸಲು ಅಧಿಕಾರಿಗಳು ಅಗತ್ಯದ ಕ್ರಮ ಕೈಗೊಳ್ಳಬೇಕು. ಜೊತೆಗೆ ರಸ್ತೆ ದುರಸ್ತಿಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಕರ್ನಾಟಕ ರಕ್ಷಾಣ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ರಫೀಕ ಕೆರೆಮನಿ ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು