ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ:ಬಜೆಟ್‌ನಲ್ಲಿ ಭರವಸೆಯ ಬೆಳಕು

ಸಾಲ ಮನ್ನಾ; ಮುಂದುವರಿದ ಆರೋಗ್ಯ ಭಾಗ್ಯ;ರೈತರ ನೆರವಿಗೆ ಇಸ್ರೇಲ್‌ ಮಾದರಿ ಕೃಷಿ ಪದ್ಧತಿ
Last Updated 5 ಜುಲೈ 2018, 17:53 IST
ಅಕ್ಷರ ಗಾತ್ರ

ಗದಗ: ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಗುರುವಾರ ಮಂಡಿಸಿದ ಬಜೆಟ್‌ನಲ್ಲಿ ಜಿಲ್ಲೆಯ ರೈತರಿಗೆ ಸಾಲ ಮನ್ನಾ ಕೊಡುಗೆಯ ಜತೆಗೆ ಮಹದಾಯಿ ಭರವಸೆಯೂ ಲಭಿಸಿದೆ.

ಮಹದಾಯಿ ಜಲ ವಿವಾದದ ನ್ಯಾಯಮಂಡಳಿ ತೀರ್ಪು ಆಗಸ್ಟ್‌ ಅಂತ್ಯದೊಳಗೆ ಪ್ರಕಟಗೊಳ್ಳುವ ನಿರೀಕ್ಷೆ ಇದ್ದು, ಈ ತೀರ್ಪಿನ ಅನ್ವಯ ಕಾಮಗಾರಿ ಕೈಗೆತ್ತಿಕೊಳ್ಳಲು ಕ್ರಮ ವಹಿಸಲಾಗುವುದು ಎಂಬ ಅಂಶವನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ, ಯಾವ ರೀತಿಯ ಕಾಮಗಾರಿ, ಎಷ್ಟು ಮೊತ್ತದ ಅನುದಾನ ಎನ್ನುವುದನ್ನು ಸ್ಪಷ್ಟವಾಗಿ ಹೇಳಿಲ್ಲ. ಮಹದಾಯಿ ಸಮಸ್ಯೆಗೆ ಬಜೆಟ್‌ನಲ್ಲಿ ಸ್ಪಂದನೆ ಲಭಿಸಿರುವುದು ಈ ಭಾಗದ ರೈತರಲ್ಲಿ ಭರವಸೆಯ ಬೆಳಕು ಮೂಡಿಸಿದೆ.

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್‌ನಲ್ಲಿ ಜಿಲ್ಲೆಗೆ ಲಭಿಸಿದ ಆರೋಗ್ಯ ಭಾಗ್ಯವನ್ನು ಈಗಿನ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರೂ ಮುಂದುವರಿಸಿದ್ದಾರೆ. ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಜಿಮ್ಸ್‌) 450 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಹಿಂದಿನ ಬಜೆಟ್‌ನಲ್ಲಿ ₹30 ಕೋಟಿ ಅನುದಾನ ಒದಗಿಸಲಾಗಿತ್ತು. ಈಗಿನ ಬಜೆಟ್‌ನಲ್ಲೂ ಇದು ಮರು ಘೋಷಣೆ ಆಗಿದ್ದು, ಹೆಚ್ಚುವರಿಯಾಗಿ ₹20 ಕೋಟಿ ಅಂದರೆ ಒಟ್ಟು ₹50ಕೋಟಿ ಅನುದಾನ ಮೀಸಲಿಡಲಾಗಿದೆ.

ಕೋಲಾರ, ಚಿತ್ರದುರ್ಗ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ತಲಾ 5 ಸಾವಿರ ಹೆಕ್ಟೇರ್ ಖುಷ್ಕಿ ಜಮೀನಿನಲ್ಲಿ ಇಸ್ರೇಲ್ ಮಾದರಿ ನೀರಾವರಿ ಸೌಲಭ್ಯ ಒದಗಿಸಲು ₹150 ಕೋಟಿ ಅನುದಾನ ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಸತತ ಬರ ಮತ್ತು ಮಳೆ ಕೊರತೆಯಿಂದ ಕೃಷಿಗೆ ನೀರಿನ ತೀವ್ರ ಕೊರತೆ ಎದುರಿಸುತ್ತಿರುವ ಜಿಲ್ಲೆಯ ರೈತರಿಗೆ ಈ ರೀತಿಯ ವೈಜ್ಞಾನಿಕ ನೀರಾವರಿ ಪದ್ಧತಿ ದೊಡ್ಡ ಮಟ್ಟದಲ್ಲಿ ನೆರವು ನೀಡಬಹುದು. ಈಗಾಗಲೇ ಜಿಲ್ಲೆಯ ರೈತರು ಕೃಷಿ ಹೊಂಡದ ನೀರನ್ನೇ ಹನಿ ನೀರಾವರಿ ಪದ್ಧತಿ ಮೂಲಕ ಬಳಸಿಕೊಂಡು ಬೆಳೆ ಉಳಿಸಿಕೊಳ್ಳುತ್ತಿದ್ದಾರೆ.

ಹೊಸ ಪದ್ಧತಿಯು, ಒಣಬೇಸಾಯ ಆಧಾರಿತ ಕೃಷಿಗೆ ಉತ್ತೇಜನ ನೀಡಬಹುದು ಮತ್ತು ರೈತರ ಆರ್ಥಿಕ ಸಬಲೀಕರಣಕ್ಕೂ ಕಾರಣವಾಗುತ್ತದೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ. ₹150 ಕೋಟಿ ಅನುದಾನದಲ್ಲಿ ಜಿಲ್ಲೆಯ ಪಾಲು ₹37.5 ಕೋಟಿ.

ರಾಜ್ಯದಲ್ಲಿ ಸಾಮಾಜಿಕ ಅರಣ್ಯ ಬೆಳವಣಿಗೆಗೆ ಆದ್ಯತೆ ನೀಡಲು ಆಂದೋಲನದ ಮಾದರಿಯಲ್ಲಿ ‘ಹಸಿರು ಕರ್ನಾಟಕ’ ಯೋಜನೆ ಜಾರಿಗೊಳಿಸಲಾಗಿದೆ. ನಿಗದಿತ ಪ್ರಮಾಣಕ್ಕಿಂತಲೂ ಅರಣ್ಯ ಪ್ರದೇಶ ಕಡಿಮೆ ಇರುವ ಗದಗ ಜಿಲ್ಲೆಯಲ್ಲಿ ವಿಶೇಷವಾಗಿ ‘ಕಪ್ಪತಗುಡ್ಡ’ ಸೇರಿದಂತೆ ಬಯಲು ಪ್ರದೇಶದಲ್ಲಿ ಹಸಿರು ಸಂವರ್ಧನೆಗೆ ಈ ಯೋಜನೆ ನೆರವಾಗಲಿದೆ.

ಕೈಗಾರಿಕಾ ಭಾಗ್ಯ ಇಲ್ಲ
ಕೈಗಾರಿಕಾ ಪ್ರಗತಿಯಲ್ಲಿ ತೀವ್ರ ಹಿಂದುಳಿದಿರುವ ಗದಗ ಜಿಲ್ಲೆಗೆ ಹಿಂದಿನ ಬಜೆಟ್‌ನಲ್ಲೂ ವಿಶೇಷ ಕೊಡುಗೆಗಳು ಲಭಿಸಿರಲಿಲ್ಲ. ಈ ಬಾರಿಯೂ ಕೈಗಾರಿಕಾ ಭಾಗ್ಯ ಲಭಿಸಿಲ್ಲ.

ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯು ಉದ್ಯಮಗಳ ಸ್ಥಾಪನೆಗೆ ಕೆಐಎಡಿಬಿಯಿಂದ ಜಮೀನು ಸ್ವಾಧೀನ ಪ್ರಕ್ರಿಯೆ ತ್ವರಿತಗೊಳಿಸಬೇಕು ಮತ್ತು ರಸಗೊಬ್ಬರ ತಯಾರಿಕಾ ಘಟಕ ಸ್ಥಾಪನೆಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿತ್ತು. ಇದಕ್ಕೆ ಸ್ಪಂದನೆ ಲಭಿಸಿಲ್ಲ.

ಹಿಂದಿನ ಬಜೆಟ್‌ನಂತೆ ಈ ಬಜೆಟ್‌ನಲ್ಲೂ ಕೌಶಲ ತರಬೇತಿಗೆ ಆದ್ಯತೆ ನೀಡಿ ‘ದಿಶಾ’ ಯೋಜನೆಯನ್ನು ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಇದರ ಪ್ರಯೋಜನ ಜಿಲ್ಲೆಗೂ ಲಭಿಸಲಿದೆ. ನೇಕಾರರಿಗೆ ಹೊಸ ವಿನ್ಯಾಸ, ತಂತ್ರಜ್ಞಾನ ವರ್ಗಾವಣೆಗೆ ಅತ್ಯಾಧುನಿಕ ಕೈಮಗ್ಗ ಕೇಂದ್ರ ಸ್ಥಾಪನೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಆದರೆ, ಇದು ಎಲ್ಲಿ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ.‌

ಜವಳಿ ಉದ್ಯಮಕ್ಕೆ ಹೆಸರಾದ ಜಿಲ್ಲೆಯಲ್ಲಿ ಈ ಕೇಂದ್ರ ಪ್ರಾರಂಭವಾದರೆ ಅದರ ಪ್ರಯೋಜನ ಈ ಭಾಗದ ನೇಕಾರರಿಗೆ ಲಭಿಸಲಿದೆ. ಜಿಲ್ಲೆಯಲ್ಲಿ ಸೌರವಿದ್ಯುತ್ ಮತ್ತು ಪವನ ವಿದ್ಯುತ್ ಘಟಕ ಸ್ಥಾಪನೆಗೆ ಅವಕಾಶ ಇತ್ತು. ಆದರೆ, ಸೌರವಿದ್ಯುತ್‌ ಜಿಲ್ಲೆಯಾಗಿ ಕಲ್ಬುರ್ಗಿ ಆಯ್ಕೆಯಾಗಿದೆ.

ಶಾಲಾ ಕೊಠಡಿಗೆ ದುರಸ್ತಿ ಭಾಗ್ಯ

ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ಕಟ್ಟಡಗಳ ದುರಸ್ತಿಗೆ ಬಜೆಟ್‌ನಲ್ಲಿ ₹150 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರಿನಲ್ಲಿ 177 ಶಾಲೆಗಳ 444 ಕೊಠಡಿಗಳು ಹಾನಿಗೀಡಾಗಿದ್ದು, ಈಗಾಗಲೇ ಇವುಗಳ ದುರಸ್ತಿಗಾಗಿ ₹2.16 ಕೋಟಿ ಅನುದಾನ ಕೋರಿ ಡಿಡಿಪಿಐ ಅವರು ಗದಗ ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ. ಈ ವಿಶೇಷ ಪ್ಯಾಕೇಜ್‌ ಜಿಲ್ಲೆಯ ಶಾಲೆಗಳ ದುರಸ್ತಿಗೆ ನೆರವಿಗೆ ಬರಲಿದೆ.

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಮತ್ತು ಮಕ್ಕಳ ಹಾಜರಾತಿ ಮೇಲೆ ನಿಗಾ ವಹಿಸಲು ಬಯೊಮೆಟ್ರಿಕ್‌ ಉಪಕರಣ ಅಳವಡಿಸಲು ₹5 ಕೋಟಿ ಅನುದಾನ ಘೋಷಿಸಲಾಗಿದೆ. ಜಿಲ್ಲೆಯ ಶೇ 90ರಷ್ಟು ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಈ ಉಪಕರಣ ಅಳವಡಿಕೆ ಮಾಡಲಾಗಿದೆ.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ₹50ಕೋಟಿ
ಇಸ್ರೇಲ್ ಮಾದರಿ ನೀರಾವರಿ ಸೌಲಭ್ಯಕ್ಕೆ ₹37.5 ಕೋಟಿ
ಶಾಲಾ ಕೊಠಡಿಗಳ ದುರಸ್ತಿಗೆ ವಿಶೇಷ ಪ್ಯಾಕೇಜ್ ₹150 ಕೋಟಿ
ಹಸಿರು ಸಂವರ್ಧನೆಗೆ ವಿಶೇಷ ಯೋಜನೆ ₹10 ಕೋಟಿ

ಇಸ್ರೇಲ್‌ ಕೃಷಿ ಪದ್ಧತಿಯಲ್ಲಿ ಈಗ 1 ಎಕರೆಗೆ ಬಳಸುವ ನೀರನ್ನೇ ಬಳಸಿಕೊಂಡು 5 ಎಕರೆಯಲ್ಲಿ ಬೆಳೆ ಬೆಳೆಯಬಹುದು.ಇದು ಜಾರಿಯಾದರೆ ಜಿಲ್ಲೆಯ ರೈತರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲವಾಗಲಿದೆ
- ಎಲ್‌.ಜಿ. ಹಿರೇಗೌಡರ,ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ

ಮಹದಾಯಿ ತೀರ್ಪು ಪ್ರಕಟವಾದ ನಂತರ ಕಾಮಗಾರಿ ಕೈಗೆತ್ತಿಕೊಳ್ಳುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದನ್ನು ಸ್ವಾಗತಿಸುತ್ತೇವೆ. ಆದರೆ, ಇದು ಘೋಷಣೆಯಾಗಿ ಉಳಿಯಬಾರದು
ವೀರಬಸಪ್ಪ ಹೂಗಾರ,ಅಧ್ಯಕ್ಷರು, ಮಹದಾಯಿ ಹೋರಾಟ ಸಮನ್ವಯ ಸಮಿತಿ ನರಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT