ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಗುಂದ | ಕಾಟಾಚಾರಕ್ಕೆ ಹುತಾತ್ಮ ರೈತ ದಿನಾಚರಣೆ: ಆಕ್ರೋಶ

ಜಯ ಕರ್ನಾಟಕ ಸಂಘದಿಂದ ಧರಣಿ: ಗೊಂದಲದ ವಾತಾವರಣ
Last Updated 22 ಜುಲೈ 2022, 5:13 IST
ಅಕ್ಷರ ಗಾತ್ರ

ನರಗುಂದ: ತಾಲ್ಲೂಕು ಆಡಳಿತ ಹುತಾತ್ಮ ರೈತ ದಿನಾಚರಣೆಯನ್ನು ಕಾಟಾಚಾರಕ್ಕೆ ಮಾಡುತ್ತಿದೆ. ರೈತ ವೀರಗಲ್ಲಿನ ಬಾಗಿಲು ಮುರಿದಿದ್ದರೂ ಅದನ್ನು ಸರಿಪಡಿಸಿಲ್ಲ. ಜನಪ್ರತಿನಿಧಿಗಳು ಕೂಡ ಇತ್ತ ಗಮನಹರಿಸಿಲ್ಲ ಜಯ ಕರ್ನಾಟಕ ಸಂಘಟನೆ, ಕನ್ನಡಪರ ಒಕ್ಕೂಟಗಳ ಸಮಿತಿ, ರೈತ ಸಂಘದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ವೀರಗಲ್ಲಿನ ಎದುರು ಧರಣಿಗೆ ಮುಂದಾದ ಘಟನೆ ಗುರುವಾರ ನಡೆಯಿತು.

42 ವರ್ಷಗಳಾದರೂ ಹುತಾತ್ಮ ರೈತ ದಿ.ವೀರಪ್ಪ ಕಡ್ಲಿಕೊಪ್ಪರ ರೈತ ಸ್ಮಾರಕ ನಿರ್ಮಾಣವಾಗಿಲ್ಲ. ಈವರೆಗೂ ಖಾಸಗಿ ಜಾಗದಲ್ಲಿ ವೀರಗಲ್ಲು ಇದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ಮುರಿದಿರುವ ವೀರಗಲ್ಲು, ಬಾಗಿಲನ್ನು ತಕ್ಷಣವೇ ರಿಪೇರಿ ಮಾಡಿಸಿ, ಕರ್ತವ್ಯಲೋಪ ಎಸಗಿರುವ ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಸ್ಮಾರಕ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಿಕೊಡಲಾಗುವುದು ಎಂದು ತಹಶೀಲ್ದಾರ ಅವರು ಲಿಖಿತವಾಗಿ ಪತ್ರದಲ್ಲಿ ಬರೆದುಕೊಡಬೇಕು. ಅಲ್ಲಿಯವರೆಗೂ ಯಾವುದೇ ಪಕ್ಷದ ರಾಜಕಾರಣಿಗಳಿಗೆ ಮಾಲಾರ್ಪಣೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.

ವಿಷಯ ತಿಳಿದ ತಹಶೀಲ್ದಾರ್‌ ಎ.ಡಿ.ಅಮರಾವದಗಿ, ಸಿಪಿಐ ಎಂ.ವಿ.ಮಠಪತಿ ಸ್ಥಳಕ್ಕೆ ಬಂದು ಧರಣಿ ನಿರತರನ್ನು ಸಮಾಧಾನಪಡಿಸಲು ಮುಂದಾದರೂ ಪ್ರಯೋಜನವಾಗಲಿಲ್ಲ. ಸರ್ಕಾರದಿಂದ ಸ್ಮಾರಕ ಭವನ ನಿರ್ಮಾಣಕ್ಕೆ ನಿವೇಶನ ಕೊಡಲು ಸಾಧ್ಯವಾಗದಿದ್ದರೆ ಸ್ವತಃ ನಾವೇ ಚಂದಾ ಹಣ ಸಂಗ್ರಹಿಸುವ ಮೂಲಕ ರೈತರ ಸ್ಮಾರಕ ಭವನ ನಿರ್ಮಿಸುತ್ತೇವೆ ಎಂದು ಸ್ಥಳದಲ್ಲಿದ್ದ ಕೆಲವರಿಂದ ನೂರಾರು ರೂಪಾಯಿ ಹಣವನ್ನು ಸಂಗ್ರಹಿಸಿ, ಮತ್ತೆ ಧರಣಿಗೆ ಕುಳಿತರು.

ಸ್ಮಾರಕ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆ.8ರೊಳಗಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ಸಭೆ ಹಮ್ಮಿಕೊಳ್ಳಲಾಗುತ್ತದೆ. ಅದರಲ್ಲಿ ಎಲ್ಲ ಸಂಘಟನೆಗಳ ಮುಖಂಡರು, ಕಾರ್ಯಕರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿಕೊಡಲಾಗುವುದು ಎಂದು ತಹಶೀಲ್ದಾರ್‌ ಎ.ಡಿ.ಅಮರಾವದಗಿ ಲಿಖಿತ ಪತ್ರ ಬರೆದುಕೊಟ್ಟಿದ್ದರಿಂದ ಜಯ ಕರ್ನಾಟಕ, ರೈತ ಸಂಘದ ಕಾರ್ಯಕರ್ತರು ಧರಣಿಯನ್ನು ಕೈಬಿಟ್ಟರು.

ಜಯ ಕರ್ನಾಟಕ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರು ರಾಠೋಡ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಎನ್.ಬಸವರಾಜ, ಶಂಕರಗೌಡ ಪಾಟೀಲ, ವಿಠಲ ಜಾಧವ, ಚನ್ನು ನಂದಿ, ಬಸವರಾಜ ತಾವರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT