ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡರಗಿ: ಮಕ್ಕಳಲ್ಲಿ ಅಪೌಷ್ಟಿಕತೆ ಪ್ರಮಾಣ ಸಮೀಕ್ಷೆ

ಗದಗ ಜಿಲ್ಲೆಯಲ್ಲಿ ನಡೆಸುತ್ತಿರುವ ಸಮೀಕ್ಷೆಯ ವರದಿಯ ಆಧಾರದ ಮೇಲೆ ಅಂತಿಮ ನಿರ್ಣಯ
Last Updated 17 ಡಿಸೆಂಬರ್ 2021, 5:52 IST
ಅಕ್ಷರ ಗಾತ್ರ

ಮುಂಡರಗಿ (ಗದಗ ಜಿಲ್ಲೆ): ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸುವ ಕುರಿತಂತೆ ರಾಜ್ಯದೆಲ್ಲೆಡೆ ಪರ– ವಿರೋಧ ಹೇಳಿಕೆಗಳು ಕೇಳಿಬರುತ್ತಿವೆ. ಈ ನಡುವೆಯೇ ರಾಜ್ಯ ಸರ್ಕಾರವು ಮಕ್ಕಳಲ್ಲಿನ ಅಪೌಷ್ಟಿಕತೆ ಪ್ರಮಾಣ ಸಮೀಕ್ಷೆ ನಡೆಸಲು ಮುಂದಾಗಿದೆ. ಗದಗ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಅಪೌಷ್ಟಿಕತೆ ಪ್ರಮಾಣದ ಸಮೀಕ್ಷೆ ಕಾರ್ಯ ನಡೆಯುತ್ತಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ತಂಡ ಒಂದು ವಾರದಿಂದ ತಾಲ್ಲೂಕಿನ ಕಲಕೇರಿ, ಬೆಣ್ಣಿಹಳ್ಳಿ, ಬೂದಿಹಾಳ ಗ್ರಾಮಗಳು ಸೇರಿದಂತೆ, ಆಯ್ದ ಗ್ರಾಮಗಳ ಶಾಲೆಗಳಿಗೆ ಭೇಟಿ ನೀಡಿ ಸಮೀಕ್ಷಾ ಕಾರ್ಯವನ್ನು ಕೈಗೊಂಡಿದೆ.

ನಿತ್ಯ ಮುಂಜಾನೆ ಆಯ್ದ ಶಾಲೆಗೆ ತೆರಳುವ ವಿದ್ಯಾರ್ಥಿಗಳ ತಂಡವು ದಿನವಿಡೀ ಸಮೀಕ್ಷೆ ಕಾರ್ಯ ಕೈಗೊಳ್ಳುತ್ತಿದೆ. ತಾಲ್ಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕಿ ರಂಜನಾ ತಳಗೇರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಬಡಿಗೇರ ಅವರು ಸಹ ಸಮೀಕ್ಷಾ ಕಾರ್ಯದಲ್ಲಿ ತೊಡಗಿದ್ದಾರೆ.

ಶಾಲೆಯ ಪ್ರತಿ ಮಗುವಿನ ಎತ್ತರ, ತೂಕ ಹಾಗೂ ಮತ್ತಿತರ ಮಾಹಿತಿಯನ್ನು ತಂಡ ಕಲೆ ಹಾಕುತ್ತಿದೆ. ಮಕ್ಕಳು ನಿಯಮಿತವಾಗಿ ಶಾಲೆಯಲ್ಲಿ, ಮನೆಯಲ್ಲಿ ಸೇವಿಸುವ ಆಹಾರದ ಮಾಹಿತಿಯನ್ನು ದಾಖಲಿಸುತ್ತಿದೆ. ಮಕ್ಕಳ ಪಾಲಕರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಅವರಿಂದಲೂ ಮಾಹಿತಿ ಪಡೆಯಲಾಗುತ್ತಿದೆ.

ಗ್ರಾಮೀಣ ಭಾಗದ ಶಾಲಾ ಮಕ್ಕಳಲ್ಲಿ ಸಾಮಾನ್ಯವಾಗಿ ನಿಶ್ಯಕ್ತಿ ಹಾಗೂ ರಕ್ತಹೀನತೆ ಸಮಸ್ಯೆ ಕಾಡುತ್ತಿದೆ. ಪರಿಹಾರಕ್ಕೆ ಅಕ್ಷರ ದಾಸೋಹದ ಅಡಿಯಲ್ಲಿ ಈಗಾಗಲೇ ಮಕ್ಕಳಿಗೆ ಹಾಲು ಮತ್ತು ಗುಣಮಟ್ಟದ ವಿವಿಧ ಬಗೆಯ ಆಹಾರವನ್ನು ನೀಡಲಾಗುತ್ತಿದೆ.

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಮಕ್ಕಳಿಗೆ ಸರ್ಕಾರ ಈಗಾಗಲೇ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಿಸಲಾಗುತ್ತಿದೆ. ಈಗಾಗಲೇ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಮಕ್ಕಳ ಅಪೌಷ್ಟಿಕತೆಯ ಸಮೀಕ್ಷೆ ಮಾಡಲಾಗಿದ್ದು ಅದರ ವರದಿಯೊಂದಿಗೆ, ಗದಗ ಜಿಲ್ಲೆಯ ಮಕ್ಕಳ ವರದಿಯನ್ನು ತಾಳೆ ಮಾಡಲಾಗುತ್ತದೆ. ಗದಗ ಜಿಲ್ಲೆಯ ಸಮೀಕ್ಷೆಯ ವರದಿಯ ಆಧಾರದ ಮೇಲೆ ರಾಜ್ಯ ಸರ್ಕಾರ ಅಂತಿಮ ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.

ಗದುಗಿನಿಂದ ಬಂದಿರುವ ವಿದ್ಯಾರ್ಥಿಗಳ ತಂಡವು ಅಪೌಷ್ಟಿಕತೆಯ ಸಮೀಕ್ಷೆ ಮಾಡುತ್ತಿದೆ. ತಂಡಕ್ಕೆ ಅಗತ್ಯ ನೆರವು ಮತ್ತು ಮಾಹಿತಿ ನೀಡಲಾಗುತ್ತಿದೆ

ರಂಜನಾ ತಳಗೇರಿ, ಸಹಾಯಕ ನಿರ್ದೇಶಕಿ, ಮುಂಡರಗಿ ತಾಲ್ಲೂಕು ಅಕ್ಷರ ದಾಸೋಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT